ಬೆಂಗಳೂರು(ಮಾ.19): ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸುವ ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಇಂದಿನಿಂದ(ಗುರುವಾರ) ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಕೊರೋನಾ ಆತಂಕ: 2020ರಲ್ಲೇ ಟೋಕಿಯೋ ಒಲಿಂಪಿಕ್ಸ್‌ ನಡೆಸಲು ಸಾಧ್ಯವೇ?

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಮಧ್ಯಾಹ್ನ 3 ರಿಂದ 5ರವರೆಗೆ ಮಾತ್ರ ಬಿಬಿಎಂಪಿ ಕೇಂದ್ರ ಕಚೇರಿ ಆವರಣಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಗುರುವಾರದಿಂದ ಬಿಬಿಎಂಪಿ ಕೇಂದ್ರ ಕಚೇರಿ ಆವರಣಕ್ಕೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ಪರೀಕ್ಷಿಸಲಾಗುವುದು. ಅದಕ್ಕಾಗಿ ಭದ್ರತಾ ಸಿಬ್ಬಂದಿ ಜತೆಗೆ 24 ಮಂದಿ ಮಾರ್ಷಲ್‌ ನಿಯೋಜಿಸಲಾಗಿದೆ ಎಂದು ತಿಳಿಸಿದರು.

Fact Check| ಜನ​ರಿಗೆ ಉಚಿ​ತ​ ಮಾಸ್ಕ್‌ ನೀಡಲು ಮೋದಿ ನಿರ್ಧಾ​ರ!

ಮಾರ್ಷಲ್‌ಗಳು ಬಿಬಿಎಂಪಿ ಮುಖ್ಯ ಕಚೇರಿಗೆ ಬರುವ ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರ ತಪಾಸಣೆ ಮತ್ತು ಸ್ಯಾನಿಟೈಸರ್‌ ನೀಡುವ ಉದ್ದೇಶದಿಂದ ಕಚೇರಿಯ ಮುಖ್ಯದ್ವಾರ, ಕೌನ್ಸಿಲ್‌ ಕಟ್ಟಡ, ಮುಖ್ಯ ಕಚೇರಿಗಳಿಗೆ ನೇಮಿಸಲಾಗಿದೆ. ಮುಂದಿನ ಆದೇಶದವರೆಗೆ ಮಾರ್ಷಲ್‌ಗಳು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶೇಷ ಸಭೆಗೆ ಮನವಿ

ಕೊರೋನಾ ಸೋಂಕು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ವೈರಸ್‌ ತಡೆಯುವ ಉದ್ದೇಶದಿಂದ ಬಿಬಿಎಂಪಿ ವಿಶೇಷ ಸಭೆ ಕರೆಯಬೇಕೆಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಅವರು ಮೇಯರ್‌ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ಅವರು ಪಾಲಿಕೆ ವ್ಯಾಪ್ತಿಯಲ್ಲಿ ತೆಗೆದುಕೊಂಡಿರುವ ತುರ್ತು ಕ್ರಮಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದ ಸಭೆ ನಡೆಸುವ ಅವಶ್ಯಕತೆ ಇದೆ ಎಂದಿದ್ದಾರೆ.