Asianet Suvarna News Asianet Suvarna News

ಮಾನವ ರಕ್ತಕ್ಕೆ ಯಾವುದೇ ಪರ್ಯಾಯ ಇಲ್ಲ

ನೀರು, ಆಹಾರ ಸೇರಿದಂತೆ ಪ್ರತಿಯೊಂದಕ್ಕೂ ಪರ್ಯಾಯವಿದೆ. ಆದರೆ, ರಕ್ತಕ್ಕೆ ಮಾತ್ರ ಪರ್ಯಾಯವಿಲ್ಲ. ರಕ್ತ ಅವಶ್ಯ ಇದ್ದಾಗ ರಕ್ತವನ್ನೇ ನೀಡಬೇಕು. ಹೀಗಾಗಿ, ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಕೆ.ಆರ್. ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಮಂಜುನಾಥ್ ಕರೆ ನೀಡಿದರು.

There is no substitute for human blood snr
Author
First Published Oct 2, 2023, 6:39 AM IST

  ಮೈಸೂರು :  ನೀರು, ಆಹಾರ ಸೇರಿದಂತೆ ಪ್ರತಿಯೊಂದಕ್ಕೂ ಪರ್ಯಾಯವಿದೆ. ಆದರೆ, ರಕ್ತಕ್ಕೆ ಮಾತ್ರ ಪರ್ಯಾಯವಿಲ್ಲ. ರಕ್ತ ಅವಶ್ಯ ಇದ್ದಾಗ ರಕ್ತವನ್ನೇ ನೀಡಬೇಕು. ಹೀಗಾಗಿ, ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಕೆ.ಆರ್. ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಮಂಜುನಾಥ್ ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನದ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಅತಿ ಹೆಚ್ಚು ರಕ್ತದಾನ ಶಿಬಿರಗಳ ಆಯೋಜಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಣ, ಭೂಮಿ, ಬಟ್ಟೆ, ಬಂಗಾರವನ್ನು ದಾನವಾಗಿ ನೀಡಿದರೂ ಜೀವ ಉಳಿಸಿದ ಸಾರ್ಥಕತೆ ಬರುವುದಿಲ್ಲ. ಆದರೆ, ತುರ್ತಾಗಿ ರಕ್ತ ಅವಶ್ಯ ಇರುವವರಿಗೆ ರಕ್ತ ನೀಡುವುದರಿಂದ ಮತ್ತೊಬ್ಬರ ಜೀವ ಉಳಿಸಿದ ತೃಪ್ತಿ ಸಿಗುತ್ತದೆ. ನೀವೆಲ್ಲರೂ ಒಂದು ರೀತಿಯಲ್ಲಿ ರೋಲ್‌ ಮಾಡೆಲ್‌ ಗಳಾಗಿದ್ದೀರಿ. ವಿದ್ಯಾರ್ಥಿಗಳು 18 ವರ್ಷ ಪೂರೈಸಿದ ಬಳಿಕ ರಕ್ತದಾನ ಮಾಡಬೇಕು. ಕುಟುಂಬದವರು ಹಾಗೂ ಸ್ನೇಹಿತರಿಗೂ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.

ಅಪಘಾತಕ್ಕೆ ಒಳಗಾದವರು ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡಲು ಹಿಂಜರಿಯಬಾರದು. ಎಷ್ಟೇ ಬಾರಿ ರಕ್ತ ನೀಡಿದರೂ ಹೊಸ ರಕ್ತ ಉತ್ಪಾದನೆ ಆಗುತ್ತಲೇ ಇರುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ ಅತಿ ಹೆಚ್ಚು ರಕ್ತದಾನ ಶಿಬಿರವನ್ನು ಆಯೋಜಿಸಿದ್ದ ಬ್ಲಡ್ ಆನ್ ಕಾಲ್ ಕ್ಲಬ್, ಎಂಎಂಕೆ ಮತ್ತು ಎಸ್ಡಿಎಂ ಕಾಲೇಜು, ರೋಟರಿ ಸಂಸ್ಥೆ, ದಿ ಬೆಟರ್ ಹ್ಯಾಂಡ್ಸ್, ತೆರಪಂತ್ ಯುವ ಪರಿಷದ್, ಎನ್ಐಇ, ಎಟಿಎಂಇ ಕಾಲೇಜ್, ಇನ್ಫೋಸಿಸ್, ಹಿಂದೂಸ್ತಾನ್ ಕಾಲೇಜು, ಬಿಇಎಂಎಲ್, ನೆಕ್ಸಾಸ್ ಸೆಂಟರ್ ಸಿಟಿ ಮಾಲ್, ಇಂಟರ್‌ನ್ಯಾಷನಲ್ ಯೂಥ್ ಹಾಸ್ಟೆಲ್ ಮುಖ್ಯಸ್ಥರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಅಲ್ಲದೆ, 30 ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ 20 ಹೆಚ್ಚು ರಕ್ತದಾನಿಗಳಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ. ಮಹಮ್ಮದ್ ಸಿರಾಜ್ ಅಹಮದ್, ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ್ ಬೆಳವಾಡಿ, ಆಶಾ ಕಿರಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಗುರುರಾಜ್, ಲಯನ್ಸ್ ಸಂಸ್ಥೆಯ ಶ್ರೀನಿವಾಸ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ರಶ್ಮಿ, ಮಮತಾ, ಸುರೇಶ್ ಮೊದಲಾದವರು ಇದ್ದರು.

Follow Us:
Download App:
  • android
  • ios