ಮೈಸೂರು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. 4 ಸಾವಿರ ಮೆಟ್ರಿಕ್ ಟನ್‌ಗೂ ಅಧಿಕ ರಸಗೊಬ್ಬರ ದಾಸ್ತಾನಿಗೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಹುಣಸೂರು (ಏ.22): ಜಿಲ್ಲೆಯಲ್ಲಿ ರಸಗೊಬ್ಬರ (Fertilizer) ಕೊರತೆ ಇಲ್ಲ. 4 ಸಾವಿರ ಮೆಟ್ರಿಕ್ ಟನ್‌ಗೂ ಅಧಿಕ ರಸಗೊಬ್ಬರ ದಾಸ್ತಾನಿಗೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ಹೇಳಿದರು. ಹುಣಸೂರು ಪಟ್ಟಣ ಹೊರವಲಯದ ಗೋವಿಂದನಹಳ್ಳಿ ಗ್ರಾಪಂ ವ್ಯಾಪ್ತಿಯ ರಾಮು ಬಡಾವಣೆಯಲ್ಲಿ 80 ಲಕ್ಷ ರು. ವೆಚ್ಚದಡಿ ನಿರ್ಮಾಣಗೊಂಡಿರುವ ಕೃಷಿ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೇಡಿಕೆ 1.09 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ಏಪ್ರಿಲ್ ತಿಂಗಳಿನಲ್ಲಿ 13 ಸಾವಿರ ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರ ಬೇಡಿಕೆಯಿದ್ದು, 18 ಸಾವಿರ ಮೆಟ್ರಿಕ್ ಟನ್‌ನಷ್ಟುಪೂರೈಸಿದ್ದೇವೆ.
4,085 ಮೆಟಿಕ್ ಟನ್‌ನಷ್ಟುಇನ್ನೂ ದಾಸ್ತಾನು ಇದೆ. ವಾಡಿಕೆ ಮಳೆಗಿಂತ ಈ ಬಾರಿ ಹೆಚ್ಚಾಗಿದೆ. (80 ಮಿ.ಮಿ.) ಬಿತ್ತನೆ ಬೀಜ, ಕೀಟನಾಶಕ ಪೂರೈಕೆಯಲಿ ವ್ಯತ್ಯಯವಾಗದಂತೆ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು. ಏ. 25 ರಿಂದ ರಾಗಿ ಖರೀದಿ ಕೇಂದ್ರ ಪುನಾರಂಭವಾಗುತ್ತಿದ್ದು, ನೋಂದಣಿ ಕಾರ್ಯ ಅಂದಿನಿಂದಲೇ ಅರಂಭಗೊಳ್ಳಲಿದೆ ಎಂದು ಈಗಾಗಲೇ ರಾಜ್ಯ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರದಿಂದ 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಿತ್ತು. ರೈತರ ಬೇಡಿಕೆ ಮತ್ತು ಒತ್ತಾಯದ ಮೇರೆಗೆ 1.40 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ನಿರ್ಧರಿಸಿದ್ದು, ಏ. 25 ರಿಂದ ರಾಜ್ಯಾದ್ಯಂತ ಖರೀದಿ ಕೇಂದ್ರ ಆರಂಭಗೊಳ್ಳಿದ್ದು, ಅಂದಿನಿಂದಲೇ ರೈತರು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದರು.
ಗೃಹ ಖಾತೆ ಮೇಲಿನ ಆಸೆ ವ್ಯಕ್ತಪಡಿಸಿದ ಸಚಿವ ಬಿಸಿ ಪಾಟೀಲ್
ಮಡಿಕೇರಿ, ಬನ್ನೂರು ಮುಂತಾದ ಕಡೆಗಳಲ್ಲಿ ರಸಗೊಬ್ಬರವನ್ನು ಅಕ್ರಮವಾಗಿ ಅಂತರ ರಾಜ್ಯಗಳಿಗೆ ಸಾಗಾಣೆ ಮಾಡುತ್ತಿರುವ ಕುರಿತು ವರದಿಗಳು ಬಂದಿದ್ದು, ಇಲಾಖೆಯ ಜಾಗೃತದಳ ಈ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಿದೆ. ಚೆಕ್‌ಪೋಸ್ಟ್‌ಗಳಲ್ಲಿ ಜಾಗೃತದಳ ಕ್ರಿಯಾಶೀಲವಾಗಿ ಇಂತಹ ಅಕ್ರಮಗಳನ್ನು ಪತ್ತೆಹಚ್ಚಿ ಕಾನೂನಿನಡಿ ಕ್ರಮವಹಿಸುತ್ತಿದೆ ಎಂದು ಅವರು ಹೇಳಿದರು. ಕೃಷಿ ಇಲಾಖೆ ವತಿಯಿಂದ ರೈತರ ಬೆಳೆ ಹಾಳಾಗದಂತೆ ಕ್ರಮ ವಹಿಸಲು ರಾಜ್ಯದ 13 ಕಡೆ ಕೋಲ್ಡ್ ಸ್ಟೋರೇಜ್‌ಗಳನ್ನು ಸ್ಥಾಪಿಸಲಾಗಿದೆ (ತಲಾ 9 ಕೋಟಿ ರು. ವೆಚ್ದದಡಿ). ರೈತರ ಅನುಕೂಲಕ್ಕಾಗಿ ಎಲ್ಲ ರೀತಿಯ ಕ್ರಮವಹಿಸಲಾಗಿದೆ.
ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 58 ಸಾವಿರ ವಿದ್ಯಾರ್ಥಿಗಳು ಪೋ›ತ್ಸಾಹಧನ (17.7 ಕೋಟಿ ರು. ಗಳು) ಪಡೆದಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಒಟ್ಟು 54.75 ಕೋಟಿ ರು. ಗಳು ರೈತರ ಖಾತೆಗೆ ನೇರವಾಗಿ ಜಮೆಯಾಗಿದೆ. ಇವೆಲ್ಲವೂ ನಮ್ಮ ಸರ್ಕಾರದ ಹೆಮ್ಮೆಯ ಯೋಜನೆಯಾಗಿದೆ ಎಂದರು. ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ರೈತಪರ ಕಾಳಜಿಯಿಂದ ಕಾರ್ಯಕ್ರಮಗಳ ಅನುಷ್ಠಾನಗೊಳ್ಳಬೇಕಿದೆ. ಕೋವಿಡ್ ನಂತರದ ದಿನಗಳಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದು, ರಾಗಿ ಖರೀದಿ ಕೇಂದ್ರದ ಮರುಸ್ಥಾಪನೆ ಸ್ವಾಗತಾರ್ಹ ಎಂದರು.
ಚಿಕ್ಕಬಳ್ಳಾಪುರದಲ್ಲಿ ರೈತರೊಂದಿಗೊಂದು ದಿನ: ರೈತರ ಕೃಷಿ ಪದ್ಧತಿಗೆ ಬಿ.ಸಿ.ಪಾಟೀಲ್ ಮೆಚ್ಚುಗೆ
ಇದೇ ವೇಳೆ 2 ಮಹಿಳಾ ಸ್ವಸಹಾಯ ಸಂಘಗಳಿಗೆ ಟ್ರ್ಯಾಕ್ಟರ್‌ಗಳನ್ನು ಸಚಿವರು ವಿತರಿಸಿದರು. ತಲಾ 5 ಮಂದಿ ರೈತರಿಗೆ ರೋಟಾವೇಟರ್, ಸ್ಟ್ರಿಂಕ್ಲರ್‌ಗಳು ಮತ್ತು ಕಲ್ಟಿವೇಟರ್‌ಗಳನ್ನು ವಿತರಿಸಿದರು. 50 ಲಕ್ಷ ರು. ವೆಚ್ಚದಲಿ ನಿರ್ಮಾಣಗೊಂಡಿರುವ ಹನಗೋಡು ರೈತಸಂಪರ್ಕ ಕೇಂದ್ರದ ನಾಮಫಲಕವನ್ನು ಅನಾವರಣಗೊಳಿಸಿದರು. ಕೃಷಿ ಅಭಿಯಾನದ ರಥಕ್ಕೆ ಚಾಲನೆ ನೀಡಿದರು. ಗೋವಿಂದನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷೆ ಸಿರೀನ್ ತಾಜ್, ಕೃಷಿ ಇಲಾಖೆ ನಿರ್ದೇಶಕಿ ನಂದಿನಿ ಕುಮಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇಶಪ್ಪ, ಉಪನಿರ್ದೇಶಕ ಧನಂಜಯ್, ಸಹಾಯಕ ನಿರ್ದೇಶಕ ಜೆ. ವೆಂಕಟೇಶ್, ಸಿಬ್ಬಂದಿ ಮತ್ತು ರೈತರು ಇದ್ದರು.