Asianet Suvarna News Asianet Suvarna News

ಗೃಹ ಖಾತೆ ಮೇಲಿನ ಆಸೆ ವ್ಯಕ್ತಪಡಿಸಿದ ಸಚಿವ ಬಿಸಿ ಪಾಟೀಲ್

* ಗೃಹ ಖಾತೆ ಮೇಲಿನ ಆಸೆ ವ್ಯಕ್ತಪಡಿಸಿದ ಸಚಿವ ಬಿಸಿ ಪಾಟೀಲ್ 
* ನಾನು 25 ವರ್ಷ ಪೊಲೀಸ್ ಕೆಲಸ ಮಾಡಿದ್ದೇನೆ.
* ಗೃಹ ಖಾತೆ ನನಗೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದ ಕೃಷಿ ಸಚಿವ

minister bc patil says he can manage home minister position rbj
Author
Bengaluru, First Published Apr 22, 2022, 8:33 PM IST

ಮೈಸೂರು, (ಏ.22): ಕರ್ನಾಟಕದಲ್ಲಿ ಪದೇ-ಪದೇ ಕಾನೂನು ಸುವ್ಯವಸ್ಥೆ ಹಾಲಾಗುವಂತೆ ಘಟನೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷದ ನಾಯಕರುಗಳೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ಸಚಿವರೊಬ್ಬರು ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದಿದ್ದಾರೆ.

ಹೌದು...ಕೃಷಿ ಸಚಿವ ಬಿಸಿ ಪಾಟೀಲ್ ಅವರು ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಬಿಸಿ ಪಾಟೀಲ್ ಅವರು ಗೃಹ ಖಾತೆಯ ಆಸೆ ಹೊರಹಾಕಿದ್ದಾರೆ. 

ಮೈಸೂರಿನಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ. 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಇದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದರು.

ಸ್ವಪಕ್ಷೀಯರಿಂದಲೇ ಅಸಮಾಧಾನ, ಆರಗ ಜ್ಞಾನೇಂದ್ರ ಖಾತೆ ಬದಲಾವಣೆ ಪಕ್ಕಾ?

ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ನಿಜಕ್ಕೂ ದುರಂತ ವಿಚಾರವಾಗಿದೆ. ಪೊಲೀಸ್ ಆಗಲು ಪ್ರತಿಭೆ ಪ್ರಾಮಾಣಿಕತೆ ದಕ್ಷತೆ ಬೇಕು. ಹಣದಿಂದ ಬಂದವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗಿತ್ತಾ, ಇದರಿಂದ ಜನ ಸಾಮಾನ್ಯರಿಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ನಾನು ಪೊಲೀಸ್ ಪರೀಕ್ಷೆ ಬರೆದಾಗ ಈ ರೀತಿ ಇರಲಿಲ್ಲ. ಯಾರು ಶಾಮೀಲಾಗಿದ್ದಾರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಶಾಂತಿ ಕೆಟ್ಟಿಲ್ಲ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಹುಬ್ಬಳ್ಳಿ ಪ್ರಕರಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಎಫ್ಐಆರ್ ಮಾಡಲಾಗಿತ್ತು. ಆದರೂ ಸಾವಿರಾರು ಜನರು ಗುಂಡಾವರ್ತನೆ ತೋರಿದ್ದಾರೆ. ಆರೋಪಿಗಳು ಯುವಕನ ಶಿರಚ್ಛೇದ ಮಾಡುತ್ತೇವೆ ಎನ್ನುತ್ತಾರೆ. ಯುವಕನನ್ನು ವಶಕ್ಕೆ ಕೊಡಿ ತಲೆ ಕಲಿಯುತ್ತೇವೆ ಎನ್ನುತ್ತಾರೆ. ಇದು ಭಾರತನಾ ತಾಲಿಬಾನಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕಾನೂನು ಕೈಗೆತ್ತುಕೊಂಡವರ ರಕ್ಷಣೆ ಮಾಡುತ್ತಿದೆ. ಕಾಂಗ್ರೆಸ್ಸಿಗರು ದೇಶದ ಪರ ಇದ್ದಾರಾ ಅಥವಾ ದೇಶದ ವಿರುದ್ಧ ಇದ್ದವರಾ. ಕಾನೂನು ಪರನಾ ಕಾನೂನು ವಿರೋಧನಾ ಎಂದು ಕಾಂಗ್ರೆಸ್‍ನವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಗೃಹ ಖಾತೆ ಬದಲಾವಣೆ ಪಕ್ಕಾ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರ್ಯನಿರ್ವಹಣೆ ಬಗ್ಗೆ ಸ್ವಪಕ್ಷೀಯರಿಂದ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗುತ್ತಿರುವ ಮಧ್ಯೆಯೇ ಶೀಘ್ರದಲ್ಲಿಯೇ ನಡೆಯಲಿದೆ ಎನ್ನಲಾದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆ ಅವರ ಖಾತೆ ಬದಲಾವಣೆ ಮಾಡುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಗುಸುಗುಸು ಕೇಳಿಬರುತ್ತಿದೆ. ಪಕ್ಷದಲ್ಲಿ ಹಿರಿಯರಾಗಿದ್ದರೂ ಮೊದಲ ಬಾರಿಗೆ ಸಚಿವ ಸ್ಥಾನದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದಲೋ ಏನೋ ಎಂಬಂತೆ ಆರಗ ಜ್ಞಾನೇಂದ್ರ ಅವರು ತಮಗೆ ನೀಡಿದ ಗೃಹ ಖಾತೆ ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದರೂ ಪಕ್ಷದ ವರಿಷ್ಠರಿಗೆ ಸಮಾಧಾನ ಇದ್ದಂತಿಲ್ಲ.

ಇದಕ್ಕೆ ಪೂರಕ ಎಂಬಂತೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಹೋಲಿಕೆಯೊಂದಿಗೆ ಸೂಚ್ಯವಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಾಜೂಗೌಡ ಅವರು ಬಹಿರಂಗವಾಗಿಯೇ ಆರಗ ಜ್ಞಾನೆಂದ್ರ ಅವರ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಯತ್ನಾಳ ಅವರಂತೂ ರಾಜ್ಯಕ್ಕೆ ಒಬ್ಬ ಸಮರ್ಥ ಗೃಹ ಸಚಿವರು ಬೇಕಾಗಿದ್ದಾರೆ ಎಂಬುದಾಗಿ ಜಾಹೀರಾತು ನೀಡಬೇಕಿದೆ ಎಂದು ತೀಕ್ಷ್ಣವಾಗಿಯೇ ಹೇಳಿದ್ದಾರೆ.

Follow Us:
Download App:
  • android
  • ios