ಕಡೂರು(ಜು.07): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸದ್ಯದ ಸ್ಥಿತಿಯಲ್ಲಿ ರಾಜ್ಯದ ಎಲ್ಲೂ ಸಮಸ್ಯೆ ಇಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 150ರ ಆಸುಪಾಸಿನಲ್ಲಿದೆ. 1200 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳು ಲಭ್ಯವಿದೆ. 2500 ಸೋಂಕಿತರಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಆಸ್ಪತ್ರೆಗಳಿಗಿದೆ. ಸದ್ಯಕ್ಕೆ ಪರಿಸ್ಥಿತಿ ಎದುರಿಸುವ ಸ್ಥಿತಿಯಲ್ಲಿದ್ದೇವೆ. ಆದರೆ, ಹತ್ತಾರು ಸಾವಿರ ಪ್ರಕರಣಗಳು ಬಂದರೆ ನಾವು ಅಸಹಾಯಕರು ಎಂದು ಒಪ್ಪಿಕೊಂಡರು.

ಪಾಸಿಟಿವ್‌ ಬಾರದಂತಿರಲು ವೈಯಕ್ತಿಕ ಜವಾಬ್ದಾರಿ ಬಹುಮುಖ್ಯ. ಜನರು ಕಡ್ಡಾಯವಾಗಿ ಮಾಸ್ಕ್‌, ಸಾನಿಟೈಸರ್‌ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಜವಾಬ್ದಾರಿ ಜಾಸ್ತಿ ಇದೆ. ಹಾಗೆಂದು ನಾವು ಅಸಹಾಯಕತೆ ತೋರಿಸುತ್ತಿಲ್ಲ. ಭೂಮಿಯೇ ಬಾಯ್ತೆರೆದರೆ ಮನುಷ್ಯ ಏನು ಮಾಡಲು ಸಾಧ್ಯ? ದೊಡ್ಡ ಪ್ರಮಾಣದಲ್ಲಾದರೆ, ಸರ್ಕಾರ ಅಸಹಾಯಕವಾಗುವುದು ಅನಿವಾರ್ಯ ಎಂದು ಹೇಳಿದರು.

ಕೊರೊನಾ ಬಗ್ಗೆ ಅಧ್ಯಯನ ಮಾಡಲು ರಾಜ್ಯಕ್ಕೆ ಕೇಂದ್ರ ತಂಡ

ಬೆಂಗಳೂರಿನಲ್ಲೂ ಇಂತಹ ಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿಲ್ಲ. ಆದರೆ, ಇಡೀ ಸಮುದಾಯಕ್ಕೆ ಹರಡಿದರೆ ದಿಢೀರನೇ ಸಾವಿರಾರು ಆಸ್ಪತ್ರೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಂಜಾಗ್ರತೆ ಬಹುಮುಖ್ಯ. ಹಾಗೆಂದು ಆರೂವರೆ ಕೋಟಿ ಜನಗಳಿಗೂ ಆಸ್ಪತ್ರೆಗಳನ್ನು ನಿರ್ಮಾಣ ಸಾಧ್ಯವಿಲ್ಲ. ಎಲ್ಲರಿಗೂ ವೈಯಕ್ತಿಕ ಜವಾಬ್ದಾರಿ ಇದೆ. ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸ್ಥಿತಿ ಸದ್ಯಕ್ಕೆ ನಮ್ಮ ನಿಯಂತ್ರಣದಲ್ಲಿದೆ. ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಪರೀಕ್ಷೆಗೆ 2200 ರು.ಗಳನ್ನು ನಿಗದಿ ಮಾಡಿದೆ. ಇದುವರೆಗೂ ಜನರಿಗೆ ಸರ್ಕಾರ ಮಾಡಿರುವ ಚಿಕಿತ್ಸೆಯಲ್ಲಿ ಒಂದು ರು.ಕೂಡಾ ಯಾರೂ ಕೊಟ್ಟಿಲ್ಲ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಚಿಕಿತ್ಸೆ ಸಿಗಲಿದೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಸ್ಪಷ್ಟಪಡಿಸಿದರು.