Asianet Suvarna News Asianet Suvarna News

ಐದು ಗ್ಯಾರಂಟಿ ಜಾರಿಗೆ ತರುವಲ್ಲಿ ಅನುಮಾನವಿಲ್ಲ

ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿರುವ ಐದು ಗ್ಯಾರಂಟಿಯನ್ನು ಜಾರಿಗೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ವಿರೋಧಪಕ್ಷಗಳು ಈ ನಿಟ್ಟಿನಲ್ಲಿ ಮುಗ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.

There is no doubt in implementing the five guarantees snr
Author
First Published May 29, 2023, 5:51 AM IST

 ತುಮಕೂರು :ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿರುವ ಐದು ಗ್ಯಾರಂಟಿಯನ್ನು ಜಾರಿಗೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ವಿರೋಧಪಕ್ಷಗಳು ಈ ನಿಟ್ಟಿನಲ್ಲಿ ಮುಗ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.

ಸಚಿವರಾದ ನಂತರ ಇದೇ ಮೊದಲ ಬಾರಿಗೆ ತುಮಕೂರು ನಗರಕ್ಕೆ ಆಗಮಿಸಿದ ಅವರನ್ನು ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಜಾಸ್‌ಟೋಲ್‌ನಿಂದ ಬೈಕ್‌ ರಾರ‍ಯಲಿಯಲ್ಲಿ ಮೆರವಣಿಗೆ ಮೂಲಕ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಕರೆ ತಂದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದೇ ರೀತಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದರೆ, ಬಿಜೆಪಿಗರು ವಿಶ್ವಗುರು ಎಂದು ಕೊಂಡಾಡುವ ಮೋದಿ ನೀಡಿದ ವರ್ಷಕ್ಕೆ 2 ಕೋಟಿ ಉದ್ಯೋಗ, ಎಲ್ಲರ ಖಾತೆಗೆ 15 ಲಕ್ಷ ಕಾಳಧನ, 2022ರೊಳಗೆ ಎಲ್ಲರಿಗೂ ಪಕ್ಕಾಮನೆ ಇವುಗಳ ಕುರಿತು ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಓರ್ವ ವಚನಭ್ರಷ್ಟ. 2006ರಲ್ಲಿ ಬಿಜೆಪಿ, ಜೆಡಿಎಸ್‌ ನಡುವಿನ ಒಪ್ಪಂದದಂತೆ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರೇ, ಇಂದು ಜೆಡಿಎಸ್‌ಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. 2023ರ ಚುನಾವಣೆಯಲ್ಲಿ ನಮಗೆ ಬಹುಮತ ಬರಲಿಲ್ಲವೆಂದರೆ ಪಕ್ಷವನ್ನು ವಿಸರ್ಜಿಸುವುದಾಗಿ ಮಾತುಕೊಟ್ಟಿದ್ದ ಹೆಚ್‌.ಡಿ.ಕುಮಾರಸ್ವಾಮಿ ಮತ್ತು ಸಿ.ಎಂ.ಇಬ್ರಾಹಿಂ ತಾವು ಕೊಟ್ಟಮಾತನ್ನು ಮೊದಲು ಜಾರಿಗೆ ತರಲಿ, ಆ ಮೇಲೆ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ನನ್ನ ಅಭಿಪ್ರಾಯದಲ್ಲಿ ಬಡವರಿಗೆ ನ್ಯಾಯವಾಗಿ ದೊರೆಯಬೇಕಾದ ಸವಲತ್ತು ಉಳ್ಳುವರು ಪಡೆದರೆ, ಹೆಣದ ಮೇಲಿನ ಅನ್ನ ತಿನ್ನದಂತೆ. ಸರಕಾರ ಕೆಲವು ಸವಲತ್ತು ನೀಡುವಾಗ ನೀತಿ, ನಿಯಮ ರೂಪಿಸಬೇಕಾಗುತ್ತದೆ. ಯಾರಿಗೆಂದರೆ ಅವರಿಗೆ ನೀಡಲಾಗದು. ಜೂನ್‌ 1ಕ್ಕೆ ಎಲ್ಲಾ ಮಾಹಿತಿಯೊಂದಿಗೆ ಸಭೆಗೆ ಬರುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸಾಧಕ, ಭಾದಕಗಳನ್ನು ಚರ್ಚಿಸಿ, ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ ಎಂದು ಕೆ.ಎನ್‌.ರಾಜಣ್ಣ ಸ್ಪಷ್ಟಪಡಿಸಿದರು.

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳ ಸಮದಾಯಗಳ ರಾಜಕೀಯ ಅಧಿಕಾರ ಹಿಡಿಯುವುದು ನಿಜಕ್ಕೂ ಒಂದು ಸವಾಲಿನ ಕೆಲಸ. ಸಹಕಾರಿ ಸಂಸ್ಥೆಗಳ ಸದಸ್ಯರು, ಕಾಂಗ್ರೆಸ್‌ ಕಾರ್ಯಕರ್ತರು, ಎಲ್ಲಾ ಜಾತಿಯ ಬಡವರು ನನಗೆ ಮತ ನೀಡಿ, ನನ್ನ ಗೆಲುವಿಗೆ ಕಾರಣವಾಗಿದ್ದಾರೆ. ಎಲ್ಲಾ ಜಾತಿಯ ಬಡವರು, ಕಾರ್ಮಿಕರು, ದಲಿತರು, ಸಹಕಾರಿ ಸಂಸ್ಥೆಗಳ ಸದಸ್ಯರು ತಮ್ಮ ಧ್ವನಿಯಾಗಿ ನನ್ನನ್ನು ವಿಧಾನಸಭೆಗೆ ಕಳುಹಿಸಿದ್ದಾರೆ. ಅವರ ನಿರೀಕ್ಷೆ ಹುಸಿಯಾಗದಂತೆ ಕಾರ್ಯನಿರ್ವಹಿಸಲಿದ್ದೇನೆ ಎಂಬ ಭರವಸೆ ನೀಡಿದರು.

ಯುವಜನತೆ ಜನರಪರ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಸಚಿವ ಕೆ.ಎನ್‌.ರಾಜಣ್ಣ, ಜನರ ಪರವಾಗಿರುವ ಹೋರಾಟಗಳಿಗೆ ಎಂದಿಗೂ ಬೆಲೆ ಇರುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ಪಟ್ಟಭದ್ರದ ಕಪಿಮುಷ್ಠಿಯಲ್ಲಿರುವ ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸುವುದರ ಜೊತೆಗೆ, ಎತ್ತಿನ ಹೊಳೆ ಯೋಜನೆಯ ಮೂಲಕ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜಿಲ್ಲೆಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ದಿಗೆ ನಿರಂತರ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಕೆ.ಎನ್‌.ರಾಜಣ್ಣ ನುಡಿದರು.

ಈ ಬಾರಿ ಚುನಾವಣೆಯಲ್ಲಿ ಸೋಲು ಕಂಡಿರುವ ತುಮಕೂರು ನಗರದ ಇಕ್ಬಾಲ್‌ ಅಹಮದ್‌ ಮತ್ತು ಗ್ರಾಮಾಂತರದ ಷಣ್ಮುಖಪ್ಪ ಎದೆಗುಂದುವ ಅಗತ್ಯವಿಲ್ಲ. ಜನರೊಂದಿಗೆ ಬೇರೆತು ಕೆಲಸ ಮಾಡಿ, ಮುಂದಿನ ಬಾರಿ ನಿಮ್ಮನ್ನು ಜನರು ಆಶೀರ್ವದಿಸಲಿದ್ದಾರೆ. ಕಾಂಗ್ರೆಸ್‌ ಒಂದೇ ಬಡವರನ್ನು ಗುರುತಿಸಿ, ಅಧಿಕಾರ ನೀಡುವಂತಹ ಪಕ್ಷ. ನಮ್ಮದೆ ಸರಕಾರ ಬಂದಿದೆ. ನೀವು ಪ್ರತಿನಿಧಿಸಿದ್ದ ಕ್ಷೇತ್ರಗಳಿಗೆ ನೀವೆ ಶಾಸಕರು, ಧೈರ್ಯ ವಾಗಿ ಪಕ್ಷವನ್ನು ಸಂಘಟಿಸಿ ಎಂದು ಸೋತ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ, ವಿಧಾನಪರಿಷತ್‌ ಸದಸ್ಯ ಆರ್‌.ರಾಜೇಂದ್ರ, ಜಿ.ಪಂ.ಸದಸ್ಯ ಶಾಂತಲ ರಾಜಣ್ಣ, ಕಲ್ಲಹಳ್ಳಿ ದೇವರಾಜು ಮಹಿಳಾ ಘಟಕದ ಅಧ್ಯಕ್ಷ ಗೀತಾ ರುದ್ರೇಶ್‌,ಇಕ್ಬಾಲ್‌ ಅಹಮದ್‌, ಷಣ್ಮುಖಪ್ಪ, ಜಿ.ಜೆ.ರಾಜಣ್ಣ, ಮಾಜಿ ಶಾಸಕರಾದ ಹೆಚ್‌.ನಿಂಗಪ್ಪ, ಲಕ್ಕಪ್ಪ, ಮುಖಂಡರಾದ ಹೆಚ್‌.ಸಿ.ಹನುಮಂತಯ್ಯ, ಜಿ.ಎನ್‌.ಮೂರ್ತಿ, ಮಧುಗಿರಿ ಬ್ಲಾಕ್‌ ಅಧ್ಯಕ್ಷರಾದ ಗೋಪಾಲಯ್ಯ, ಆದಿನಾರಾಯಣರೆಡ್ಡಿ,ತರುಣೇಶ್‌,ರೆಡ್ಡಿಚಿನ್ನಯಲ್ಪಪ್ಪ,ಪಟ್ಟರಾಜು ಇದ್ದರು.

Follow Us:
Download App:
  • android
  • ios