ಹುಬ್ಬಳ್ಳಿ(ಜು.29): ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್‌ ಕೊರೋನಾ ರಣಕೇಕೆ ಹಾಕುತ್ತಿದೆ. ಪ್ರತಿನಿತ್ಯ ನೂರು, ನೂರೈವತ್ತು, ಇನ್ನೂರ ಗಡಿ ಸಮೀಪ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಆಸ್ಪತ್ರೆಗಳಲ್ಲಿ ಬೆಡ್‌ಗಳ ವ್ಯವಸ್ಥೆ ಇಲ್ಲದೆ ಸೋಂಕಿತರು ಪರದಾಡುತ್ತಿದ್ದಾರೆ.

ಹುಬ್ಬಳ್ಳಿಯ ನವನಗರದ ಅಧ್ಯಾಪಕ ನಗರದ 53 ವರ್ಷದ ಎಂಜಿನಿಯರರೊಬ್ಬರಿಗೆ ಸೋಂಕು ದೃಢಪಟ್ಟು ನಾಲ್ಕು ದಿನವಾದರೂ ಆಸ್ಪತ್ರೆಗೆ ದಾಖಲಿಸಿಲ್ಲ, ಆಸ್ಪತ್ರೆಗೆ ದಾಖಲಿಸಿ ಎಂದು ಸೋಂಕಿತರ ಸಂಬಂಧಿಕರು ಜಿಲ್ಲಾಡಳಿತಕ್ಕೆ ಪದೇ ಪದೇ ಪೋನ್‌ ಮಾಡಿದ ನಂತರವೂ ಆಸ್ಪತ್ರೆಗೆ ದಾಖಲಿಸದೇ ಹೋಮ್‌ ಐಸೋಲೇಷನ್‌ ಮೂಲಕ ಚಿಕಿತ್ಸೆ ಪಡೆಯಿರಿ. ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ವ್ಯವಸ್ಥೆ ಸರಿಯಿಲ್ಲವೆಂದು ಜಿಲ್ಲಾಡಳಿತದ ಕಚೇರಿಯ ಸಿಬ್ಬಂದಿ ಸೋಂಕಿತರಿಗೆ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಸೋಂಕಿತ ವ್ಯಕ್ತಿ ಇದೀಗ ಮನೆಯಲ್ಲಿ ಐಸೋಲೇಷನ್‌ ಆಗಿದ್ದಾರೆ.

ಹುಬ್ಬಳ್ಳಿ: ನಾಲ್ಕು ತಿಂಗಳ ಬಳಿಕ ಎಸಿ ಬಸ್‌ ಸಂಚಾರ ಪುನರಾರಂಭ

ಈ ನಡುವೆ ಸೋಂಕಿತರ ಮನೆಯನ್ನು ಸೀಲ್‌ಡೌನ್‌ ಮಾಡಿರಲಿಲ್ಲ. ಸಂಬಂಧಿಕರು ಪದೇ ಪದೇ ಪಾಲಿಕೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಪೋನ್‌ ಮಾಡಿದ ನಂತರ ಇದೀಗ ಸೋಂಕಿತರ ಮನೆ ಮುಂಭಾಗವನ್ನು ಸೀಲ್‌ಡೌನ್‌ ಮಾಡಿದೆ. ಹೀಗಾಗಿ ಸೋಂಕಿತರೊಂದಿಗೆ ಅವರ ಪತ್ನಿ ಮನೆಯಲ್ಲಿ ಪತಿಯ ಜತೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.