Asianet Suvarna News Asianet Suvarna News

ಹುಬ್ಬಳ್ಳಿ: ನಾಲ್ಕು ತಿಂಗಳ ಬಳಿಕ ಎಸಿ ಬಸ್‌ ಸಂಚಾರ ಪುನರಾರಂಭ

ಪ್ರಯಾಣಿಕರು ಮಾಸ್ಕ್‌ ಧರಿಸುವುದು ಕಡ್ಡಾಯ| ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್‌ ಬಸ್‌ನಲ್ಲಿ 20 ಹಾಗೂ ವೋಲ್ವೋ ಬಸ್‌ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ| ಸುರಕ್ಷತೆಯ ದೃಷ್ಟಿಯಿಂದ ಬಸ್‌ನಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್‌ ನೀಡುವುದಿಲ್ಲ|

AC Bus Service Resumes after Four Months
Author
Bengaluru, First Published Jul 27, 2020, 10:08 AM IST

ಹುಬ್ಬಳ್ಳಿ(ಜು.27): ಲಾಕ್‌ಡೌನ್‌ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್‌ಗಳ ಸಂಚಾರವನ್ನು ವಾಯವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗವು ಇಂದಿನಿಂದ (ಸೋಮವಾರ) ಪುನರಾರಂಭಿಸಲಿದೆ.

ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮೈಸೂರಿನ ನಡುವೆ ಎಸಿ ಸ್ಲೀಪರ್‌ ಮತ್ತು ವೋಲ್ವೋ ಬಸ್‌ಗಳ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ.

ದೈಹಿಕ ಅಂತರ ಕಾಪಾಡುತ್ತೆ ‘ಡಿಸ್ಟೋಸಿಟ್‌’ ಉಪಕರಣ!

ಸಮಯದ ವಿವರ:

ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೋಲ್ವೊ ಬಸ್‌ ಮಧ್ಯಾಹ್ನ 3 ಗಂಟೆಗೆ ಮತ್ತು ರಾತ್ರಿ 10.30 ಗಂಟೆಗೆ ಹೊರಡುತ್ತದೆ. ಎಸಿ ಸ್ಲೀಪರ್‌ ಬಸ್‌ ರಾತ್ರಿ 10.40ಕ್ಕೆ ಹೊರಡುತ್ತದೆ. ಹುಬ್ಬಳ್ಳಿಯಿಂದ ಮೈಸೂರಿಗೆ ಎಸಿ ಸ್ಲೀಪರ್‌ ಬಸ್‌ ರಾತ್ರಿ 9.45ಕ್ಕೆ ಹೊರಡುತ್ತದೆ. ಎಸಿ ಬಸ್‌ಗಳಲ್ಲದೆ, ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ನಾನ್‌ ಎಸಿ ಸ್ಲೀಪರ್‌ ಮತ್ತು ರಾಜಹಂಸ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ನಾನ್‌ ಎಸಿ ಸ್ಲೀಪರ್‌ ರಾತ್ರಿ 8.30, 9 ಹಾಗೂ 10 ಗಂಟೆಗೆ, ರಾಜಹಂಸ ಸಂಜೆ 7.30ಕ್ಕೆ ಹೊರಡಲಿದೆ. ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತದೆ. ಬಸ್ಸಿನ ಒಳಗಡೆ ನಿಗದಿತ ತಾಪಮಾನವನ್ನು ನಿರ್ವಹಣೆ ಮಾಡಲಾಗುತ್ತದೆ. 

ಪ್ರಯಾಣಿಕರು ಮಾಸ್ಕ್‌ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್‌ ಬಸ್‌ನಲ್ಲಿ 20 ಹಾಗೂ ವೋಲ್ವೋ ಬಸ್‌ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಬಸ್‌ನಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್‌ ನೀಡುವುದಿಲ್ಲ. ಮಾರ್ಗ ಮಧ್ಯದಲ್ಲಿ ಊಟೋಪಚಾರಕ್ಕಾಗಿ ನಿಲುಗಡೆ ಮಾಡುವುದಿಲ್ಲ. ಆದ್ದರಿಂದ ಪ್ರಯಾಣಿಕರು ಊಟ, ತಿಂಡಿ ಮತ್ತು ನೀರನ್ನು ಮನೆಯಿಂದಲೇ ತರಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ.
 

Follow Us:
Download App:
  • android
  • ios