ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು. ಈ ವೇಳೆ ಹೊಸ ಪದ್ದತಿಗೆ ನಾಂದಿ ಹಾಡಲಾಗಿದೆ. ಏನದು? ಸ್ಟೋರಿ ಓದಿ..

ಶಿವಮೊಗ್ಗ: ನಗರದಲ್ಲಿ ಇವತ್ತು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಇನ್ನು, ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಹೊಸ ಪದ್ದತಿಗೆ ಮುನ್ನುಡಿ ಬರೆಯಲಾಗಿದೆ.

ಏನದು ಹೊಸ ಪದ್ದತಿ?

ಇತ್ತೀಚೆಗೆ ಕರ್ನಾಟಕದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬ ನಿಯಮ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸರ್ಕಾರದ ನಿರ್ಧಾರ ಇನ್ನೂ ಚರ್ಚೆ ಮತ್ತು ಕಾನೂನು ವಿವಾದಕ್ಕೂ ಕಾರಣವಾಗಿದೆ. ಸರ್ಕಾರದ ಈ ಕ್ರಮವು ತುಷ್ಟೀಕರಣ ರಾಜಕಾರಣ ಹಾಗೂ ಕೇಂದ್ರದ ಮಾರ್ಗಸೂಚಿಗಳ ಉಲ್ಲಂಘನೆ ಎಂದು ಬಿಜೆಪಿ ನಾಯಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ ರಾಜಕೀಯವಾಗಿ ಇದು ದೊಡ್ಡ ವಿವಾದ ಆಗುತ್ತಿರುವ ಹೊತ್ತಿನಲ್ಲಿ ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ವೇಳೆ ವಂದೇ ಮಾತರಂ ನುಡಿಸಲಾಗಿದೆ.

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಒಂದೇ ಮಾತರಂ ಗೀತೆ ಮೊಳಗಿದೆ. ಶಿವಮೊಗ್ಗದ ಗೋಪಿ ವೃತ್ತದಲ್ಲಿ ಗಣಪತಿಯ ಸಮ್ಮುಖದಲ್ಲಿ ಒಂದೇ ಮಾತರಂ ಗೀತೆಯನ್ನ ಜನರು ಹಾಡಿದ್ದಾರೆ. ಆರು ಚರಣಗಳನ್ನು ಹೇಳಿ ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಕೆ ಮಾಡಲಾಗಿದೆ.

ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದ ಜನತೆ

ಗಣೇಶನ ಮೆರವಣಿಗೆಗೂ ಮುನ್ನ ಅದ್ದೂರಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದರು. ಸಹಸ್ರಾರು ಜನರು ಗಣೇಶ ವಿಸರ್ಜನೆ ವೇಳೆ ಭಾಗಿಯಾಗಿದ್ದರು. ಯುವಕ, ಯುವತಿಯರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ಸಾವಿರಾರು ಸಂಖ್ಯೆಯಲ್ಲಿದ್ದ ಯುವ ಜನತೆ ಹುಚ್ಚೆದ್ದು ಕುಣಿದು ಗಣೇಶನನ್ನು ಬೀಳ್ಕೊಟ್ಟರು. ಇನ್ನು ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸುದೀಪ್ ಭಾವಚಿತ್ರ ಇರುವ ಬಾವುಟ ಪ್ರದರ್ಶನ ಮಾಡಿದರು. ಕನ್ನಡ ಧ್ವಜ, ಹನುಮಾನ್ ಧ್ವಜಗಳು ಡಿಜೆ ಸಂಗೀತದ ವೇಳೆ ಪ್ರದರ್ಶನ ನೀಡಲಾಯಿತು.

ಪೊಲೀಸರಿಂದ ಬಿಗಿ ಭದ್ರತೆ

ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ನೀಯೋಜಿಸಿದ್ದರು. ಹಿಂದೂ ಮಹಸಭಾ ಗಣೇಶ ವಿಸರ್ಜನೆಯು ದೊಡ್ಡ ಪ್ರಮಾಣದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಅಷ್ಟೇ ಸೂಕ್ಷ್ಮವಾಗಿರಬೇಕಾದ ದಿನವೂ ಹೌದು. ಈ ಹಿಂದೆ ಹಲವು ಅಹಿತಕರ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ತುಂಬಾ ಸೂಕ್ಷ್ಮವಾಗಿರುವ ನಗರ ಹಿನ್ನೆಲೆಯಲ್ಲಿ ಪೊಲೀಸರು ನಗರದ ಗಲ್ಲಿಗಲ್ಲಿಗಳಲ್ಲಿ ಬಿಗಿಬಂದೋಬಸ್ತ್‌ ಏರ್ಪಡಿಸಿದರು. ಕೊನೆವರೆಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.

ಹುಬ್ಬಳ್ಳಿಯಲ್ಲೂ ಗಣೇಶ ವಿಸರ್ಜನೆ

ಇನ್ನು ವಾಣಿಜ್ಯನಗರ ಹುಬ್ಬಳ್ಳಿಯಲ್ಲೂ ಗಣೇಶ ವಿಸರ್ಜನೆ ಅದ್ದೂರಿಯಾಗಿ ನಡೆಯಿತು. ವಿಸರ್ಜನೆಯ ಮೆರವಣಿಗೆಯಲ್ಲಿ ಭಾರೀ ಜನಸ್ತೋಮ ಸೇರಿತ್ತು. ಮರಾಠ ಗಲ್ಲಿ, ದಾಜಿಬಾನ್ ಪೇಟೆಯಯ ಹುಬ್ಬಳ್ಳಿ ಕಾ‌ ರಾಜಾ ಗಣೇಶ ವಿಸರ್ಜನೆ ಮೆರವಣಿಗೆ ನಡೆಯಿತು. ಈ ವೇಳೆ ಡಿಜೆ ಮ್ಯೂಸಿಕ್‌ಗೆ ಜನರು ಕುಣಿದು ಕುಪ್ಪಳಿಸಿದರು. ಲೇಸರ್ ಲೈಟಿಂಗ್ ಶೋ ಮೂಲಕ ಗಣೇಶ ಮೆರವಣಿಗೆ ನಡೆಯಿತು. ಇಲ್ಲಿಯೂ ಕೂಡ ಪೊಲೀಸರು ವ್ಯಾಪಕ ಬಿಗಿಭದ್ರತೆ ಆಯೋಜಿಸಿದ್ದಾರೆ. ರಾತ್ರಿ ಇಡೀ ಗಣೇಶನ ಮೆರವಣಿಗೆ ನಡೆಯಲಿದೆ.