ಬಡ ಮಕ್ಕಳಿಗೆ ಮನೆ ಕಟ್ಟಿಸಿ ಕೊಡುವ 'ಯಕ್ಷಗಾನ ಕಲಾರಂಗದ' ಪುಣ್ಯಕಾರ್ಯ
ಉಡುಪಿಯ ಯಕ್ಷಗಾನ ಕಲಾರಂಗ ಎಂಬ ಸಂಘಟನೆ ಬಡ ಮಕ್ಕಳಿಗೆ ಮನೆ ಕಟ್ಟಿಸಿ ಕೊಡುವ ಅಪರೂಪದ ಕಾಯಕ ನಡೆಸುತ್ತಿದೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಆರಂಭವಾದ ಈ ಸಂಸ್ಥೆ, ಅಪರೂಪದ ಸಾಮಾಜಿಕ ಕಳಕಳಿಯಿಂದ ತನ್ನ ಸೇವಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ನ.17) : ಉಡುಪಿಯ ಯಕ್ಷಗಾನ ಕಲಾರಂಗ ಎಂಬ ಸಂಘಟನೆ ಬಡ ಮಕ್ಕಳಿಗೆ ಮನೆ ಕಟ್ಟಿಸಿ ಕೊಡುವ ಅಪರೂಪದ ಕಾಯಕ ನಡೆಸುತ್ತಿದೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಆರಂಭವಾದ ಈ ಸಂಸ್ಥೆ, ಅಪರೂಪದ ಸಾಮಾಜಿಕ ಕಳಕಳಿಯಿಂದ ತನ್ನ ಸೇವಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಈವರೆಗೆ ಬಡ ಮಕ್ಕಳಿಗೆ 36 ಮನೆಗಳನ್ನು ನಿರ್ಮಿಸಿ ಕೊಟ್ಟಿರುವ ಈ ಸಂಸ್ಥೆ, ಒಟ್ಟು 50 ಮನೆ ನಿರ್ಮಾಣದ ಗುರಿ ಹೊಂದಿದೆ.
ಯಕ್ಷಗಾನ ಕಲಾವಿದರಿಗೆ ವಿಮೆ, ಬಸ್ ಪಾಸ್, ತುರ್ತು ಸಂದರ್ಭಗಳಲ್ಲಿ ನೆರವು ಆಶ್ರಯ ನೀಡುವ ಮೂಲಕ ಯಕ್ಷಗಾನ ಕಲಾರಂಗ ಸಂಸ್ಥೆಯು ಅಪರೂಪದ ಕಲಾ ಸೇವೆ ನಡೆಸುತ್ತಿದೆ. ವಾರ್ಷಿಕ 20 ಮಂದಿ ಕಲಾವಿದರಿಗೆ ಗೌರವಾನ್ವಿತ ಪ್ರಶಸ್ತಿಗಳನ್ನು ಕೂಡ ಈ ಸಂಸ್ಥೆ ನೀಡುತ್ತಿದೆ.
ಮಂಗಳೂರು: ಕರಾವಳಿಯಲ್ಲಿ ಸೇನಾ ಪೂರ್ವ ಕೇಂದ್ರದ ಮೊದಲ ತರಬೇತಿ ಆರಂಭ
ಈ ನಡುವೆ ಕಳೆದ ಒಂದೂವರೆ ದಶಕದಿಂದ ತನ್ನ ಸೇವಾ ಕಾರ್ಯವನ್ನ ವಿಸ್ತರಿಸಿರುವ ಸಂಸ್ಥೆಯು, ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದೆ. 'ವಿದ್ಯಾ ಪೋಷಕ್' ಎಂಬ ಹೆಸರಲ್ಲಿ ಶೇ. 80ಕ್ಕೂ ಅಧಿಕ ಅಂಕ ಪಡೆದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಈ ಸಾಲಿನಲ್ಲಿ 1150 ವಿದ್ಯಾರ್ಥಿಗಳಿಗೆ 90 ಲಕ್ಷ ರೂಪಾಯಿ ಸ್ಕಾಲರ್‌ಶಿಪ್ ನೀಡಿದೆ.
ಪ್ರತಿ ವಿದ್ಯಾರ್ಥಿಗೂ ದಾನಿಯನ್ನು ಹುಡುಕಿ ಅವರ ಮೂಲಕ ವಾರ್ಷಿಕ ಫೀಸು ನೀಡಿ ಸಹಾಯ ಹಸ್ತ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿ ವೇತನ ನೀಡುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯ ಮನೆಯನ್ಬೂ ಸಂದರ್ಶಿಸಲಾಗುತ್ತೆ. ಹೀಗೆ ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿರುವ ಬಡ ವಿದ್ಯಾರ್ಥಿಗಳ ಸಂಕಷ್ಟ ಕಂಡು ಸಂಸ್ಥೆಯ ಕಾರ್ಯಕರ್ತರ ಮನಸ್ಸು ಮಮ್ಮಲ ಮರುಗಿದೆ. ಅಂತಹ ಬಡ ವಿದ್ಯಾರ್ಥಿಗಳಿಗೆ ದಾನಿಗಳನ್ನು ಜೋಡಿಸಿ ಮನೆ ಕಟ್ಟಿಸಿ ಕೊಡುವ ಕಾರ್ಯವನ್ನು ಕಳೆದ 8 ವರ್ಷಗಳಿಂದ ನಡೆಸಲಾಗುತ್ತಿದೆ.
ಈಗಾಗಲೇ 36 ಮನೆಗಳನ್ನು ಪೂರ್ಣಗೊಳಿಸಿದ್ದು, ಇನ್ನು 14 ಮನೆಗಳನ್ನು ನಿರ್ಮಿಸಿ ಕೊಡುವ ಉದ್ದೇಶ ಹೊಂದಿದೆ. ಅನೇಕ ದಾನಿಗಳು ಈ ಮಹತ್ ಕಾರ್ಯದಲ್ಲಿ ಕೈಜೋಡಿಸಿದ್ದು, ಮನೆಯಲ್ಲಿ ಶುಭಕಾರ್ಯ ನಡೆದ ವೇಳೆಯಲ್ಲಿ, ಅಥವಾ ವರ್ಷಕ್ಕೆ ಇಂತಿಷ್ಟು ಎಂದು ನೆರವು ನೀಡುವ ನೆಪದಲ್ಲಿ ಕೋಟ್ಯಂತರ ರೂಪಾಯಿಯನ್ನು ಮಕ್ಕಳ ಮನೆ ನಿರ್ಮಾಣಕ್ಕೆ ದಾನಿಗಳು ನೀಡಿದ್ದಾರೆ.
ಪ್ರತಿಯೊಂದು ಮನೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ, ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಕೇವಲ ಐದಾರು ಲಕ್ಷದಲ್ಲಿ ಅದ್ಭುತ ಮನೆಗಳು ನಿರ್ಮಾಣಗೊಂಡಿವೆ. ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷರು ಸ್ವತಹ ಇಂಜಿನಿಯರ್ ಆಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಸಾಧ್ಯವಾಗಿದೆ. ಸಂಘಟನೆಯೊಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾನಿಗಳ ನೆರವು ಪಡೆದು ಇಷ್ಟು ಸುಧೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿರುವುದೇ ಊಹಿಸಲಾಗದ ಸಾಧನೆಯಾಗಿದೆ.
ಯಕ್ಷಗಾನ ಕಲಾ ರಂಗ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ ಮತ್ತು ಸೇವಾ ನಿರತ ಕಾರ್ಯಕರ್ತರ ತಂಡ ಈ ಎಲ್ಲಾ ಸೇವಾ ಸಂಸ್ಥೆಗಳುಕಾರ್ಯದ ಹಿಂದಿನ ಶಕ್ತಿಯಾಗಿದ್ದಾರೆ.
ಹೊಸತಾಗಿ ಎರಡು ಮನೆ ನಿರ್ಮಾಣ
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಪ್ರವರ್ತಕರಾದ ಎಚ್. ಎಸ್. ಶೆಟ್ಟಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾಪೋಷಕ್‍ನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಬೊಮ್ಮರಬೆಟ್ಟುವಿನ ಮಂಜುಶ್ರೀ ಹಾಗೂ ಅಲ್ತಾರಿನ ಪೂರ್ಣಿಮಾ ಇವರಿಗೆ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ ಉದ್ಘಾಟನೆಗೊಂಡಿತು.
ಎರಡೂ ಮನೆಗಳನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಎಚ್.ಎಸ್ ಶೆಟ್ಟಿಯವರು ಸಂಸ್ಥೆಯ ಸಮಾಜಮುಖಿ ಕಾರ್ಯ ಹಾಗೂ ಪಾರದರ್ಶಕ ವ್ಯವಹಾರದಿಂದ ನಾನು ಆಕರ್ಷಿತನಾಗಿದ್ದೇನೆ.ನಿಮ್ಮ ಕಾರ್ಯಕ್ರಮಗಳಿಗೆ ನಮ್ಮ ಸೊಸೈಟಿ ಮುಂದೆಯೂ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು.
ಶಾಲಾ ಕ್ರೀಡಾಕೂಟದಲ್ಲಿ ಆಜಾನ್‌ಗೆ ವಿದ್ಯಾರ್ಥಿಗಳ ನೃತ್ಯ: ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ
ಸೊಸೈಟಿಯ ಉಪಾಧ್ಯಕ್ಷರಾದ ಎಚ್. ನಾಗರಾಜ ಶೆಟ್ಟಿ, ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಬಿ. ಸೀತಾರಾಮ ಶೆಟ್ಟಿ, ಎಚ್. ರಾಜೀವ ಶೆಟ್ಟಿ, ಕೂಡ್ಲಿ ಗಣಪತಿ ಉಡುಪ, ಬಿ.ಟಿ. ನಾಯ್ಕ್, ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ ಹಾಗೂ ವಿ.ಜಿ. ಶೆಟ್ಟಿ, ಸದಸ್ಯರುಗಳಾದ ಭುವನಪ್ರಸಾದ್ ಹೆಗ್ಡೆ, ಕೆ. ಸದಾಶಿವ ರಾವ್, ಅನಂತರಾಜ ಉಪಾಧ್ಯ, ಸಂತೋಷ್ ಕುಮಾರ್ ಶೆಟ್ಟಿ, ಹೆಚ್.ಎನ್. ಶೃಂಗೇಶ್ವರ, ವಿದ್ಯಾಪ್ರಸಾದ್, ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ರಾಜೇಶ್ ನಾವಡ, ದಿನೇಶ್ ಪೂಜಾರಿ, ಕಿಶೋರ್ ಸಿ. ಉದ್ಯಾವರ, ಕಿಶನ್ ರಾವ್ ಮತ್ತು ಶ್ರೀಮತಿ ಸುಮನ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಎರಡೂ ಮನೆಗಳು ಸೇರಿ ಸಂಸ್ಥೆ ಈವರೆಗೆ 36 ಮನೆಗಳನ್ನು ನಿರ್ಮಿಸಿಕೊಟ್ಟಿದೆ.