Asianet Suvarna News Asianet Suvarna News

ಮಂಗಳೂರು: ಕರಾವಳಿಯಲ್ಲಿ ಸೇನಾ ಪೂರ್ವ ಕೇಂದ್ರದ ಮೊದಲ ತರಬೇತಿ ಆರಂಭ

ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಲೇ ಶುರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೇನಾ ಪೂರ್ವ ತರಬೇತಿ ಕೇಂದ್ರ ತೆರೆಯಲು ಸಿದ್ಧತೆ

First Army Training of Pre Military Center on the Coastal in Karnataka grg
Author
First Published Nov 17, 2022, 1:31 AM IST

ಆತ್ಮಭೂಷಣ್‌

ಮಂಗಳೂರು(ನ.17): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸೇನಾ ಪೂರ್ವ ತರಬೇತಿಯ ಮೊದಲ ಕೇಂದ್ರ ಕರಾವಳಿಯಲ್ಲಿ ಆರಂಭವಾಗಿದೆ. ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್‌ನಿಂದ ಈ ಕೇಂದ್ರ ತರಬೇತಿ ಆರಂಭಿಸಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗ ಸಮುದಾಯಕ್ಕೆ ಸೇನೆಗೆ ಸೇರುವ ಕನಸು ಇನ್ನು ಸುಲಭದಲ್ಲಿ ನನಸಾಗಲಿದೆ. ಈ ಸಮುದಾಯದವರಿಗೆ ಸೇನೆ ಹಾಗೂ ಪೊಲೀಸ್‌ ಇಲಾಖೆ ಸೇರ್ಪಡೆಗೆ ಪೂರ್ವ ತರಬೇತಿಯ ಉಚಿತ ವ್ಯವಸ್ಥೆ ಇರಲಿಲ್ಲ. ಮಾತ್ರವಲ್ಲ ತರಬೇತಿಗೆ ಹಣ ವ್ಯಯಿಸುವ ತಾಕತ್ತೂ ಈ ಸಮುದಾಯದಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಸೇನಾ ಪೂರ್ವ ತರಬೇತಿ ಕೇಂದ್ರ ಸ್ಥಾಪನೆ ಮೂಲಕ ಈ ಸಮುದಾಯದ ಸೇನಾ ಸೇರ್ಪಡೆಯ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುತ್ತಿದೆ. ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ಸೇನಾ ಪೂರ್ವ ತರಬೇತಿ ಕೇಂದ್ರ ತೆರೆಯಲು ಸಿದ್ಧತೆ ನಡೆಯುತ್ತಿದೆ.

4 ತಿಂಗಳ ತರಬೇತಿ:

ಸೇನಾ ಪೂರ್ವ ತರಬೇತಿ ಶಿಬಿರ ನಾಲ್ಕು ತಿಂಗಳ ಅವಧಿ. ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್‌ನಲ್ಲಿ ಶುರುವಾಗಿದ್ದು, ಫೆಬ್ರವರಿಯಲ್ಲಿ ಕೊನೆಗೊಳ್ಳಲಿದೆ. ಪ್ರತಿ ಕೇಂದ್ರದಲ್ಲಿ ತಲಾ 100 ಮಂದಿ ಅಭ್ಯರ್ಥಿಗಳಿಗೆ ಅವಕಾಶ ಇದೆ. ಈ ಮೂರು ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ಕೇವಲ ಕರಾವಳಿ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳೂ ಇಲ್ಲಿದ್ದಾರೆ.

UPSC RECRUITMENT 2022: ಉಪನ್ಯಾಸಕ ಮತ್ತು ಇತರ ಹುದ್ದೆಗಳಿಗೆ ನೇಮಕಾತಿ

ಪ್ರಧಾನಿ ಘೋಷಣೆ ಪ್ರೇರಣೆ:

ಪ್ರಧಾನಿ ನರೇಂದ್ರ ಮೋದಿ ಅವರು ಅಗ್ನಿಪಥ್‌ ಯೋಜನೆ ಘೋಷಿಸಿ ಸೇನೆಗೆ ಸೇರಲು ಯುವಕರಿಗೆ ಆಹ್ವಾನ ನೀಡಿದ ಬೆನ್ನಲ್ಲೇ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಸಚಿವರಿಗೆ ಸೇನಾ ಪೂರ್ವ ತರಬೇತಿ ಕೇಂದ್ರದ ತೆರೆಯುವ ಪ್ರೇರಣೆ ಉಂಟಾಗಿತ್ತು. ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದು. ಅದರಂತೆ ದ.ಕ.ದಲ್ಲಿ ವೀರ ರಾಣಿ ರಾಣಿ ಅಬ್ಬಕ್ಕ ಹೆಸರಲ್ಲಿ, ಉಡುಪಿಯಲ್ಲಿ ಕೋಟಿ ಚೆನ್ನಯ ಹಾಗೂ ಉತ್ತರ ಕನ್ನಡದಲ್ಲಿ ಹಿಂಜಾ ನಾಯಕ್‌ ಹೆಸರಿನಲ್ಲಿ ಸೇನಾ ಪೂರ್ವ ತರಬೇತಿ ಕೇಂದ್ರ ತೆರೆಯಲಾಗಿದೆ.

ಏನಿದು ಸೇನಾ ಪೂರ್ವ ತರಬೇತಿ?:

ಸೇನೆ ಸೇರ್ಪಡೆಗೆ ಬೇಕಾದ ಎಲ್ಲ ರೀತಿಯ ಪಠ್ಯ ಹಾಗೂ ಪ್ರಾಯೋಗಿಕ ವಿಧಾನಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಸೇನಾ ನಿವೃತ್ತ ಹಾಗೂ ಹಾಲಿ ಅಧಿಕಾರಿಗಳೇ ತರಬೇತುದಾರರಾಗಿದ್ದಾರೆ. ಸೇನಾ ರಾರ‍ಯಲಿಗೆ ಆಯ್ಕೆ ಮಾಡುವ ವಿಧಾನವನ್ನೇ ಇಲ್ಲಿಯೂ ಅನುಸರಿಸಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 9 ಗಂಟೆ ವರೆಗೆ ದೈಹಿಕ ವ್ಯಾಯಾಮ, ಕಸರತ್ತು ಅಲ್ಲದೆ ಥಿಯರಿ ಕೂಡ ಕಲಿಸಲಾಗುತ್ತದೆ. ವಸತಿ ಹಾಗೂ ಉಟೋಪಹಾರ, ಕಲಿಕೆ ಎಲ್ಲವೂ ಉಚಿತ. ಕರ್ನಾಟಕದಲ್ಲಿ ಉಡುಪಿ, ದ.ಕ. ಹಾಗೂ ಉತ್ತರ ಕನ್ನಡ ಬಳಿಕ ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸೇನಾ ಪೂರ್ವ ತರಬೇತಿ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ.

IOCL Recruitment 2022: ತಂತ್ರಜ್ಞ  ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳಿಗಾಗಿಯೇ ಸೇನಾ ಪೂರ್ವ ತರಬೇತಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರ ನಗರದ ಕೆಪಿಟಿ ಬಳಿ ಕಾರ್ಯಾರಂಭಗೊಂಡಿದ್ದು, ಅಗ್ನಿಪಥ್‌ ಸೇರಿದಂತೆ ಸೇನೆಯ ವಿವಿಧ ಹುದ್ಧೆಗಳಿಗೆ ಸೇರ್ಪಡೆಯಾಗುವವರಿಗೆ ಇಲ್ಲಿನ ತರಬೇತಿ ಬಹಳ ಅನುಕೂಲವಾಗಲಿದೆ. ಈ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೆ ಇತರರಿಗೂ ಇದು ಪ್ರೇರಣೆಯಾಗಲಿ ಅಂತ ದ.ಕ. ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ,  ರಶ್ಮಿ ಎಸ್‌.ಆರ್‌. ಹೇಳಿದ್ದಾರೆ. 

ಕರಾವಳಿಯಲ್ಲಿ ಆರಂಭಿಸಲಾದ ಸೇನಾ ಪೂರ್ವ ತರಬೇತಿಗೆ ಉತ್ತಮ ಸ್ಪಂದನೆ ದೊರಕುತ್ತಿದೆ. ಬೆಳಗಾವಿ ಮತ್ತು ಕೊಪ್ಪಳಗಳಲ್ಲೂ ಶೀಘ್ರವೇ ತರಬೇತಿ ಕೇಂದ್ರ ಪ್ರಾರಂಭವಾಗಲಿದೆ. ಇಂತಹ ಕೇಂದ್ರಗಳನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ಉದ್ದೇಶಿಸಿದ್ದು, ಹಿಂದುಳಿದ ವರ್ಗಗಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಅಂತ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 
 

Follow Us:
Download App:
  • android
  • ios