Asianet Suvarna News Asianet Suvarna News

Mandya: ರಾಜ್ಯೋತ್ಸವದಲ್ಲೂ ಬೆಳಗದ ಕನ್ನಡ ಶಾಲೆಗಳು..!

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಬರುತ್ತಲೇ ಇದೆ. ಹೋಗುತ್ತಲೇ ಇದೆ...! ಆದರೆ, ಕನ್ನಡದ ಹಣತೆಗಳಂತಿರುವ ಕನ್ನಡ ಶಾಲೆಗಳು ಮಾತ್ರ ‘ಬೆಳಗು’ತ್ತಲೇ ಇಲ್ಲ. ಅವುಗಳ ಮೇಲೆ ನಿರಂತರವಾಗಿ ‘ಕತ್ತಲು’ ಆವರಿಸುತ್ತಲೇ ಇದೆ. ಬಾಗಿಲು ಮುಚ್ಚುವ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

The number of Kannada schools closing  doors is increasing in Karnataka snr
Author
First Published Nov 1, 2022, 5:24 AM IST

 ಮಂಡ್ಯ ಮಂಜುನಾಥ

 ಮಂಡ್ಯ (ನ.01):  ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಬರುತ್ತಲೇ ಇದೆ. ಹೋಗುತ್ತಲೇ ಇದೆ...! ಆದರೆ, ಕನ್ನಡದ ಹಣತೆಗಳಂತಿರುವ ಕನ್ನಡ ಶಾಲೆಗಳು ಮಾತ್ರ ‘ಬೆಳಗು’ತ್ತಲೇ ಇಲ್ಲ. ಅವುಗಳ ಮೇಲೆ ನಿರಂತರವಾಗಿ ‘ಕತ್ತಲು’ ಆವರಿಸುತ್ತಲೇ ಇದೆ. ಬಾಗಿಲು ಮುಚ್ಚುವ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಎರಡು ಸಾವಿರ ವರ್ಷಗಳ ಭಾಷೆಗಳ ಜೀವಂತಿಕೆಯ ಬಗ್ಗೆ ಅವಲೋಕನ ನಡೆಸಿದರೆ ಇಷ್ಟೊಂದು ಪ್ರಮಾಣದಲ್ಲಿ ಆಂಗ್ಲ ಭಾಷೆ (english)   ಪ್ರಾದೇಶಿಕ ಭಾಷೆಗಳ ಮೇಲೆ ಒತ್ತಡ ಹೇರಿದ ಉದಾಹರಣೆಯೇ ಸಿಗುವುದಿಲ್ಲ. ಜಾಗತೀಕರಣ, ತಾಂತ್ರಿಕತೆಯಲ್ಲಿನ ಆವಿಷ್ಕಾರಗಳು, ಬೆಳವಣಿಗೆಯ ವೇಗದಿಂದಾಗಿ ಇಂಗ್ಲಿಷ್‌ ಭಾಷೆ ಕಬಂಧಬಾಹುಗಳಿಂದ ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡಿದೆ ಎನ್ನುವುದು ತಜ್ಞರು ಹೇಳುವ ಮಾತಾಗಿದೆ.

ಬಡ ಶಾಲೆಗಳು:

ಕನ್ನಡ ಮಾಧ್ಯಮ ಶಾಲೆಗಳ (Kannada School)  ಸ್ಥಿತಿಯನ್ನು ನೋಡಿದರೆ ತುಂಬಾ ಬಡತನದಲ್ಲಿರುವಂತೆ ಕಂಡುಬರುತ್ತವೆ. ಅವುಗಳಿಗೆ ಹೊಸ ರೂಪ ನೀಡುವ, ಆಧುನಿಕತೆಯ ಸ್ಪರ್ಶದೊಂದಿಗೆ ಮೇಲ್ಪಂಕ್ತಿಗೇರಿಸುವ ಸಣ್ಣ ಪ್ರಯತ್ನಗಳು ಸರ್ಕಾರದಿಂದ ನಡೆಯುತ್ತಿಲ್ಲ. ಅಂದ ಮೇಲೆ ಕನ್ನಡ ಶಾಲೆಗಳು ಬೆಳವಣಿಗೆ ಕಾಣುವುದಾದರೂ ಹೇಗೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

ಇಂದಿನ ಕನ್ನಡ ಶಾಲೆಗಳು ಕಡು ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಸೀಮಿತವಾಗಿ ಉಳಿದುಕೊಂಡಿವೆ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ‘ಭವಿಷ್ಯವಿಲ್ಲ’ ಎನ್ನುವುದು ಪೋಷಕರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಅವರು, ಕನ್ನಡ ಮಾಧ್ಯಮವನ್ನು ಪಕ್ಕಕ್ಕೆ ತಳ್ಳಿ ಇಂಗ್ಲಿಷ್‌ ಮಾಧ್ಯಮವನ್ನು ಅಪ್ಪಿಕೊಳ್ಳುತ್ತಿದ್ದಾರೆ.

ಇಂಗ್ಲಿಷ್‌ ಅನಿವಾರ‍್ಯತೆ ಸೃಷ್ಟಿ:

ಹಳ್ಳಿಗಾಡಿನಲ್ಲಿರುವವರು ಕೂಡ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸುವುದಕ್ಕೆ ಹೆಚ್ಚಿನ ಆಸಕ್ತಿ, ಉತ್ಸಾಹ ತೋರಿಸುತ್ತಿದ್ದಾರೆ. ಹಾಗಂತ ಅವರನ್ನು ಭಾಷಾಭಿಮಾನಿಗಳಲ್ಲ ಎನ್ನಲಾಗದು. ಮನಸ್ಸಿನೊಳಗೆ ಭಾಷಾಭಿಮಾನವಿದ್ದರೂ ಮಾಧ್ಯಮದಲ್ಲಿ ಅದು ಸತ್ತುಹೋಗಿದೆ. ಇಂಗ್ಲಿಷ್‌ ಕಲಿಯುವ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ಪೋಷಕರು ವಿಧಿ ಇಲ್ಲದೆ ಅತ್ತ ಆಕರ್ಷಿತರಾಗುತ್ತಿದ್ದಾರೆ.

ಮಾತೃಭಾಷಾ ಶಿಕ್ಷಣಕ್ಕೆ ಮಹತ್ವವಿಲ್ಲ:

ಖಾಸಗಿ ಶಾಲೆಗಳಂತೆ ಕನ್ನಡ ಶಾಲೆಗಳಿಗೆ ಆಧುನೀಕತೆಯ ಸ್ಪರ್ಶ ನೀಡಬೇಕು. ಮಕ್ಕಳು ಓದುವ ಜಾಗ ನವನಾವೀನ್ಯತೆಯಿಂದ ಕೂಡಿದ್ದಾಗ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದ್ದರೆ ಪೋಷಕರು ಆಕರ್ಷಿತರಾಗುವರು. ಸರ್ಕಾರಗಳು ಆಧುನಿಕ ಯುಗಕ್ಕೆ ತಕ್ಕಂತೆ ಕನ್ನಡ ಶಾಲೆಗಳಿಗೆ ಹೊಸ ರೂಪ ಕೊಡಲಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಹಾಗೂ ಮನ್ನಣೆಯನ್ನು ನೀಡಲಿಲ್ಲ. ಶಾಲೆಗಳಿಗೆ ಬೇಡಿಕೆಯಷ್ಟುಶಿಕ್ಷಕರನ್ನು ಕೊಡಲಿಲ್ಲ. ಮೂಲ ಸೌಕರ್ಯಗಳನ್ನು ಒದಗಿಸಲಿಲ್ಲ. ಕಳಾಹೀನವಾಗಿ ನಿಂತಿರುವ ಶಾಲೆಗಳಿಂದ ಮಕ್ಕಳು ವರ್ಷದಿಂದ ವರ್ಷಕ್ಕೆ ದೂರ ಸರಿಯುತ್ತಲೇ ಇದ್ದಾರೆ.

ಗ್ರಾಮೀಣ ಜನರಲ್ಲೂ ಜಾಗೃತಿ:

ಹತ್ತು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳಾದರೂ ಕನ್ನಡ ಶಾಲೆಗಳಿಗೆ ಬರುತ್ತಿದ್ದರು. ಯಾವಾಗ ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿ ಮಾಡಲಿಲ್ಲವೋ ಪ್ರಸ್ತುತ ಗ್ರಾಮೀಣ ಮಕ್ಕಳೂ ಕೂಡ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದಾರೆ. ಅವರಿದ್ದಲ್ಲಿಗೆ ಕರೆದೊಯ್ಯಲು ಬರುವ ಬಸ್ಸುಗಳು, ಹಳ್ಳಿಗಳ ಸಮೀಪವೇ ತಲೆಎತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಕನ್ನಡ ಶಾಲೆಗಳು ಸ್ವಂತಿಕೆಯನ್ನು ಕಳೆದುಕೊಂಡಿವೆ. ಗ್ರಾಮೀಣ ಭಾಗದ ಜನರು ಕಷ್ಟಪಟ್ಟಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇಂಗ್ಲಿಷ್‌ ಕನ್ನಡ ಮಾತ್ರವಲ್ಲದೆ ಇತರೆ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಆಪೋಶನ ತೆಗೆದುಕೊಳ್ಳುವಂತೆ ಕಂಡುಬರುತ್ತಿದೆ.

ಕನ್ನಡದಲ್ಲಿ ಕಲಿತವರಿಗೆ ಬೆಲೆಯೇ ಇಲ್ಲ:

ಕನ್ನಡದಲ್ಲಿ ಎಂ.ಎ., ಪಿಎಚ್‌.ಡಿ ಪದವಿ ಗಳಿಸಿದವರಿಗೆ ಸೂಕ್ತ ಉದ್ಯೋಗವಕಾಶಗಳು ದೊರಕುತ್ತಿಲ್ಲ. ಕನ್ನಡ ಭಾಷೆಯಲ್ಲಿ ಓದಿದವರು ಮಹತ್ವದ ಹುದ್ದೆಗಳನ್ನು ಅಲಂಕರಿಸದಿರುವುದರಿಂದ ಕನ್ನಡ ಮಾಧ್ಯಮದ ಮೇಲಿನ ಆಸಕ್ತಿ ಪೋಷಕರಿಂದ ದೂರವಾಗುತ್ತಿದೆ. ಪೋಷಕರು ಸಾಲ ಮಾಡಿಯಾದರೂ ಮಕ್ಕಳನ್ನು ಆಂಗ್ಲಭಾಷೆಯಲ್ಲಿ ಓದಿಸುವ ಹಂಬಲ ಹೊತ್ತಿದ್ದಾರೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕಿಲುಬು ಕಾಸಿನ ಬೆಲೆಯೂ ಇಲ್ಲದಂತಾಗಿದೆ.

ಮನೆಗಳಲ್ಲಿ ಮಕ್ಕಳು ಕನ್ನಡದಲ್ಲಿ ಮಾತನಾಡುವುದಕ್ಕಿಂತ ಇಂಗ್ಲಿಷ್‌ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಕಂಡು ಪೋಷಕರು ಸಂಭ್ರಮಿಸುತ್ತಿದ್ದಾರೆ. ನಮ್ಮ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ ಎನ್ನುವುದನ್ನು ಗರ್ವದಿಂದ ಹೇಳಿಕೊಳ್ಳುತ್ತಲೂ ಇದ್ದಾರೆ. ತಮ್ಮಲ್ಲಿರುವ ಚಿನ್ನವನ್ನು ಒತ್ತೆ ಇಟ್ಟು, ಸಾಲ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಸುಭದ್ರವಾಗಿ ಕಟ್ಟಿಕೊಡುವುದಕ್ಕೆ ಟೊಂಕಕಟ್ಟಿನಿಂತಿದ್ದಾರೆ.

ನೆಲಕಚ್ಚುತ್ತಿವೆ ಕನ್ನಡದ ಬೇರುಗಳು:

ರಾಜ್ಯದಲ್ಲಿ ಶೇ.100ರಷ್ಟುಕನ್ನಡ ಭಾಷೆ ಮಾತನಾಡುವವರು ಇರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯ ಜಿಲ್ಲೆಯಲ್ಲೂ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸಲಾರಂಭಿಸಿದೆ. ಇದು ಕನ್ನಡ ಅಧೋಗತಿಗೆ ಇಳಿಯುತ್ತಿರುವುದಕ್ಕೆ ಕೈಗನ್ನಡಿಯಾಗಿದೆ. ಮಕ್ಕಳಿಗೆ ಇಂಗ್ಲಿಷ್‌ ಭಾಷೆ ಕಲಿಸುವುದರಲ್ಲಿ ತೋರುತ್ತಿರುವ ಆಸಕ್ತಿಯನ್ನು ಕನ್ನಡವನ್ನು ಕಲಿಸುವುದಕ್ಕೆ ತೋರಿಸುತ್ತಿಲ್ಲ. ಹೀಗಾಗಿ ಇಂಗ್ಲಿಷ್‌ ಎಲ್ಲೆಡೆ ಆಳವಾಗಿ ಬೇರೂರಲಾರಂಭಿಸಿದ್ದು, ಕನ್ನಡದ ಬೇರುಗಳು ಸಡಿಲಗೊಳ್ಳುತ್ತಾ ನೆಲಕಚ್ಚುವ ಸ್ಥಿತಿಯನ್ನು ತಲುಪಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಜನರಲ್ಲಿ ಭಾಷಾಭಿಮಾನವಿದೆ. ಮಾಧ್ಯಮದಲ್ಲಿ ಕನ್ನಡ ಭಾಷೆ ಸತ್ತುಹೋಗಿದೆ. ಏಕರೂಪ ಶಿಕ್ಷಣ ಜಾರಿಯಾಗಿ ಪ್ರಾದೇಶಿಕ ಭಾಷೆಗಳಿಗೂ ಹೆಚ್ಚಿನ ಮಹತ್ವ ದೊರಕಬೇಕು. ಕನ್ನಡ ಭಾಷೆ ಮತ್ತು ಶಾಲೆಗಳನ್ನು ನವನಾವೀನ್ಯ ರೂಪದಲ್ಲಿ ಪರಿಚಯಿಸದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಶಾಲೆಗಳು ಸಂಪೂರ್ಣವಾಗಿ ಕಣ್ಮರೆಯಾಗಲಿವೆ.

- ತೈಲೂರು ವೆಂಕಟಕೃಷ್ಣ, ಸಾಹಿತಿ

ಭಾಷೆ ಆಧುನೀಕತೆಯಿಂದ ಕೂಡಿದ್ದಾಗ ಅದಕ್ಕೆ ಹೆಚ್ಚಿನ ಮಹತ್ವ, ಆಕರ್ಷಣೆ ಬರುತ್ತದೆ. ಕನ್ನಡ ಶಾಲೆಗಳು ಸೌಲಭ್ಯಗಳಿಲ್ಲದ ಕಡು ಬಡ ಶಾಲೆಗಳಂತೆ ಪೋಷಕರಿಗೆ ಗೋಚರಿಸುತ್ತಿವೆ. ಕನ್ನಡ ಕಲಿತ ಮಕ್ಕಳಿಗೆ ಉದ್ಯೋಗದ ಭರವಸೆ ಸಿಗುತ್ತಿಲ್ಲ. ಭವಿಷ್ಯ ಕಟ್ಟಿಕೊಳ್ಳಬಹುದೆಂಬ ಸಣ್ಣ ಆಸೆಯೂ ಕಾಣುತ್ತಿಲ್ಲ. ಹೀಗಾಗಿ ಕನ್ನಡ ಭಾಷೆ ಬೆಳವಣಿಗೆ ಮಂಕಾಗಿದೆ.

- ಎಲ್‌.ಸಂದೇಶ್‌, ಅಧ್ಯಕ್ಷರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ

ಶಿಕ್ಷಣ ವ್ಯವಸ್ಥೆಯೊಳಗಿನ ಬದಲಾವಣೆಗಳಿಂದ ಕನ್ನಡ ಸೊರಗುತ್ತಿದೆ. ಕನ್ನಡ ಭಾಷೆ, ಮಾಧ್ಯಮಕ್ಕೆ ಶಿಕ್ಷಣದಲ್ಲಿ ಹೆಚ್ಚಿನ ಮಹತ್ವ ದೊರಕುತ್ತಿಲ್ಲ. ಪೋಷಕರಿಗೆ ಮಕ್ಕಳಿಗೆ ಕನ್ನಡ ಕಲಿಸಬೇಕೆಂಬ ಆಸೆಯೇನೋ ಇದೆ. ಅದೇ ರೀತಿ ಅದರಿಂದ ಭವಿಷ್ಯ ಕಟ್ಟಿಕೊಳ್ಳಲಾಗುವುದಿಲ್ಲವೆಂಬ ಭಯವೂ ಇದೆ. ಈ ಆತಂಕದಿಂದ ಇಂಗ್ಲಿಷ್‌ ಮಾಧ್ಯಮ ಆಯ್ಕೆ ಅನಿವಾರ್ಯವಾಗಿದೆ.

- ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕರು

ಯಾವ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನುವುದು ಪೋಷಕರ ಆಯ್ಕೆ. ಆದರೆ, ಯಾವ ಮಾಧ್ಯಮದಲ್ಲಿ ಹೆಚ್ಚು ಅವಕಾಶ, ಆಯ್ಕೆಗಳಿರುತ್ತವೆಯೋ ಆ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ ಪ್ರಕ್ರಿಯೆ. ಕನ್ನಡ ಮಾಧ್ಯಮದಲ್ಲೂ ಅಂತಹ ವಾತಾವರಣ ಸೃಷ್ಟಿಮಾಡಬೇಕು. ಮಾತು-ಭರವಸೆಗಳಿಂದ ಭಾಷೆ ಬೆಳವಣಿಗೆ ಸಾಧ್ಯವೇ ಇಲ್ಲ.

- ವನಜಾಕ್ಷಿ, ನಿವೃತ್ತ ಶಿಕ್ಷಕಿ

Follow Us:
Download App:
  • android
  • ios