ರೇಷ್ಮೆನಾಡಿನ ಜನರ ಚಿತ್ತ ಮಂಡ್ಯ ಕ್ಷೇತ್ರದತ್ತಲೂ
ರೇಷ್ಮೆನಾಡು ರಾಮನಗರ ಜಿಲ್ಲೆಯ ಜನತೆಯ ಚಿತ್ತ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾತ್ರವಲ್ಲದೆ ನೆರೆಯ ಮಂಡ್ಯ ಸಂಸತ್ ಕ್ಷೇತ್ರದತ್ತಲೂ ನೆಟ್ಟಿದೆ.
ರಾಮನಗರ: ರೇಷ್ಮೆನಾಡು ರಾಮನಗರ ಜಿಲ್ಲೆಯ ಜನತೆಯ ಚಿತ್ತ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾತ್ರವಲ್ಲದೆ ನೆರೆಯ ಮಂಡ್ಯ ಸಂಸತ್ ಕ್ಷೇತ್ರದತ್ತಲೂ ನೆಟ್ಟಿದೆ.
ಮಾಜಿ ಪ್ರಧಾನಿ ದೇವೇಗೌಡರವರ ಅಳಿಯ ಡಾ.ಸಿ.ಎನ್ .ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹಾಗೂ ಪುತ್ರ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಈ ಎರಡೂ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿ ಪರಿಣಮಿಸಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ - ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಮತ್ತು ಕಾಂಗ್ರೆಸ್ ನ ಡಿ.ಕೆ.ಸುರೇಶ್ ರವರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದಿದೆ. ಅದೇ ರೀತಿ ಕಾಂಗ್ರೆಸ್ ನ ಸ್ಟಾರ್ ಚಂದ್ರು ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕಾರಣ ಮಂಡ್ಯ ಕ್ಷೇತ್ರದ ಪ್ರತಿ ಬೆಳವಣಿಗೆಗಳನ್ನು ಜನರು ಕಾತುರತೆಯಿಂದ ಎದುರು ನೋಡುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಹುರಿಯಾಳಾಗಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮತ್ತು ದಿವಂಗತ ಅಂಬರೀಷ್ ಧರ್ಮಪತ್ನಿ ಸುಮಲತಾ ಸ್ಪರ್ಧೆ ಮಾಡಿದ್ದರು. ಆಗ ಇಲ್ಲಿನ ಜನರಿಗೆ ಸ್ವ ಕ್ಷೇತ್ರಕ್ಕಿಂತ ನೆರೆ ಕ್ಷೇತ್ರದ ಫಲಿತಾಂಶದ ಬಗ್ಗೆ ಕೌತುಕ ಹೆಚ್ಚಾಗಿತ್ತು.
ದಿ.ಅಂಬರೀಷ್ ರವರ ಕಾರಣದಿಂದಾಗಿ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಕಾರಣಕ್ಕಾಗಿ ನಿಖಿಲ್ ಗೆಲ್ಲಲೆಂದು ಅವರವರ ಅಭಿಮಾನಿಗಳು ಮತ್ತು ಬೆಂಬಲಿಗರು ಅಭಿಮಾನ ಪೂರ್ವಕವಾಗಿ ಬಯಸಿದ್ದರು. ಆದರೆ, ಮೈತ್ರಿ ಧರ್ಮ ಪಾಲನೆ ಮಾಡಬೇಕಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಒಲವು ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಭಿನ್ನವಾಗಿತ್ತು.
ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸುಮಲತಾ ಹಾಗೂ ಜೆಡಿಎಸ್ ನವರು ನಿಖಿಲ್ ಗೆಲುವಿನ ಬಯಕೆ ಹೊಂದಿದ್ದರು. ಅಲ್ಲದೆ, ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆಯನ್ನು ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹಾಗೂ ಅನಿತಾ ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇಡೀ ಸಚಿವ ಸಂಪುಟ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು.
ಪುತ್ರ ನಿಖಿಲ್ ರಾಜಕೀಯ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಮತ್ತು ಅನಿತಾ ದಂಪತಿ ಮಂಡ್ಯ ಕ್ಷೇತ್ರದಲ್ಲಿಯೇ ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಇನ್ನು ಡಿ.ಕೆ.ಶಿವಕುಮಾರ್ ಮೈತ್ರಿ ಧರ್ಮ ಪಾಲನೆಗೆ ಕಟ್ಟು ಬಿದ್ದು ಸಹೋದರ ಡಿ.ಕೆ.ಸುರೇಶ್ ಗೆಲುವಿನ ಜತೆಗೆ ಸ್ನೇಹಿತನ ಮಗನ ಗೆಲುವಿಗಾಗಿ ಹೆಚ್ಚು ಒತ್ತು ನೀಡಿದ್ದರು. ಹೀಗಾಗಿ ಅಲ್ಲಿನ ಫಲಿತಾಂಶ ಏನಾಗುತ್ತದೆ ಎಂಬುದನ್ನು ಸ್ವಪಕ್ಷೀಯರಷ್ಟೇ ಅಲ್ಲದೇ ರಾಜಕೀಯ ವಿರೋಧಿಗಳೂ ಎದುರು ನೋಡುತ್ತಿದ್ದರು. ಕೊನೆಗೆ ಸುಮಲತಾ ಎದುರು ನಿಖಿಲ್ ಪರಾಭವಗೊಂಡರು.
ಅಂದು ದೋಸ್ತಿ, ಇಂದು ಕುಸ್ತಿ:
ಈಗ ಬದಲಾದ ರಾಜಕೀಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಸಾಧಿಸಿದ್ದು, ಮಗನ ಸೋಲಿನ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ದೋಸ್ತಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ರಾಮನಗರ ಜಿಲ್ಲೆಯನ್ನು ಕರ್ಮಭೂಮಿ ಮಾಡಿಕೊಂಡಿರುವ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಮಂಡ್ಯ ಸಂಸತ್ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದು ಕುತೂಹಲ ಹೆಚ್ಚಿಸಿದೆ.
ಸ್ಥಳೀಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮಂಡ್ಯ ಕ್ಷೇತ್ರದಲ್ಲಿರುವ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರನ್ನು ಸಂಪರ್ಕಿಸಿ ಅಲ್ಲಿನ ರಾಜಕೀಯ ಚಟುವಟಿಕೆ, ಚುನಾವಣಾ ಪ್ರಚಾರದ ಕಾರ್ಯ ವೈಖರಿಯನ್ನು ತಿಳಿದುಕೊಂಡು ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ, ಉಭಯ ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಆದರೆ, ಸ್ವ ಕ್ಷೇತ್ರದ ಜೊತೆಗೆ ಪಕ್ಕದ ಮಂಡ್ಯ ಕ್ಷೇತ್ರದಲ್ಲಿ ಆಗುತ್ತಿರುವ ಪ್ರತಿಯೊಂದು ಬೆಳವಣಿಗೆಗಳನ್ನು ಜನರು ಗಮನಿಸಿ ಚರ್ಚೆಯಲ್ಲಿ ತೊಡಗಿದ್ದಾರೆ.
ಸೋಲು - ಗೆಲುವಿನ ಲೆಕ್ಕಾಚಾರ:
ಜಿಲ್ಲೆಯ ರಾಜಕೀಯ ಪಡಸಾಲೆ, ಟೀ ಹೋಟೆಲ್ ಗಳು, ರೈಲು ಮತ್ತು ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದ ಕತೆ ಏನಾಗುತ್ತಪ್ಪಾ.. ಎರಡು ಕಡೆಗಳಲ್ಲಿ ಯಾರು ಗೆಲ್ಲುತ್ತಾರೆ... ಎಂದು ಕೇಳುವ ಮೂಲಕ ಕುತೂಹಲದಿಂದ ಸೋಲು ಗೆಲುವಿನ ಬಗ್ಗೆ ಚರ್ಚೆಯಲ್ಲಿ ತೊಡಗುತ್ತಿರುವುದು ಗಮನ ಸೆಳೆಯುತ್ತಿದೆ.
ಉಭಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಡಿ.ಕೆ.ಸುರೇಶ್, ಸ್ಟಾರ್ ಚಂದ್ರು ಪರವಾಗಿ ಪಕ್ಷದ ಧುರೀಣರು, ಸಿನಿಮಾ ತಾರೆಯರು ಧುಮುಕಿರುವುದು. ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಡಾ.ಸಿ.ಎನ್.ಮಂಜುನಾಥ್ , ಎಚ್.ಡಿ.ಕುಮಾರಸ್ವಾಮಿ ಪರವಾಗಿ ಎರಡೂ ಪಕ್ಷಗಳ ರಾಜ್ಯ - ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ನಿಂತಿರುವುದು ಚುನಾವಣೆ ರಂಗೇರುವಂತೆ ಮಾಡಿದೆ.