ಕ್ಯಾಪ್ಟನ್‌ ಗಳನ್ನು ಕಳೆದುಕೊಂಡು ಗಡಿ ಜಿಲ್ಲೆಗೆ ದೊಡ್ಡ ಆಘಾತ

ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರನ್ನು ಕಳೆದುಕೊಂಡಿರುವುದು ಗಡಿ ಜಿಲ್ಲೆ ಚಾಮರಾಜನಗರಕ್ಕೆ ದೊಡ್ಡ ಆಘಾತವಾಗಿದೆ.

The loss of captains is a big shock to the border district snr

ದೇವರಾಜು ಕಪ್ಪಸೋಗೆ

 ಚಾಮರಾಜನಗರ :  ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರನ್ನು ಕಳೆದುಕೊಂಡಿರುವುದು ಗಡಿ ಜಿಲ್ಲೆ ಚಾಮರಾಜನಗರಕ್ಕೆ ದೊಡ್ಡ ಆಘಾತವಾಗಿದೆ.

ಚಾಮರಾಜನಗರ ಜಿಲ್ಲೆಯ ಇಬ್ಬರು ಧ್ರುವತಾರೆಗಳಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದ ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರ ಜೋಡಿ ಹಳೇ ಮೈಸೂರು ಪ್ರಾಂತ್ಯದಲ್ಲಿ ವಿಭಿನ್ನ ರಾಜಕಾರಣದ ಮೂಲಕ ಜನಸಾಮಾನ್ಯರ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಾ. 2008ರ ಬಳಿಕ ಕಾಂಗ್ರೆಸ್‌ ಪಕ್ಷವನ್ನು ಗಟ್ಟಿಯಾಗಿ ಕಟ್ಟಿಬೆಳೆಸಿದ್ದರು.

2004ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಏಕೈಕ ಕಾಂಗ್ರೆಸ್‌ ಶಾಸಕರಾಗಿ ಆರ್‌. ಧ್ರುವನಾರಾಯಣ ಆಯ್ಕೆಯಾಗಿದ್ದರು. ಆಗ ಚಾಮರಾಜನಗರ ಜಿಲ್ಲೆ ಜನತಾಪರಿವಾರದ ನೆಲೆಯಾಗಿತ್ತು. ಧ್ರುವನಾರಾಯಣ ಕೂಡ 1 ಮತದ ಪ್ರಯಾಸದ ಗೆಲುವು ಸಾಧಿಸಿ ಆಯ್ಕೆಯಾಗಿದ್ದರು. ನಂತರ ಸಂತೇಮರಹಳ್ಳಿ ಕ್ಷೇತ್ರ ರದ್ದಾದ ಪರಿಣಾಮ 2008ರಲ್ಲಿ ಕೊಳ್ಳೇಗಾಲ ಕ್ಷೇತ್ರದತ್ತ ಧ್ರುವನಾರಾಯಣ ಮುಖ ಮಾಡಿದರು. ಈ ಸಂದರ್ಭದಲ್ಲಿ ಮಹದೇವಪ್ರಸಾದ್‌ ಸಹ ಕಾಂಗ್ರೆಸ್‌ ಸೇಪರ್‍ಡೆಯಾದರು. ಈ ಇಬ್ಬರು ಜೋಡಿಯ ಸಂಘಟನೆ ಪರಿಣಾಮ ಚಾಮರಾಜನಗರ ಜಿಲ್ಲೆಯ ನಾಲ್ಕು ಸ್ಥಾನಗಳು ಕಾಂಗ್ರೆಸ್‌ ಪಾಲಾದವು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8ಕ್ಕೆ 8 ಸ್ಧಾನವೂ ಕಾಂಗ್ರೆಸ್‌ ಪಾಲಾಗಿದ್ದರಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು.

ಮಹಾದೇವಪ್ರಸಾದ್‌ ಹಾಗೂ ಧ್ರುವನಾರಾಯಣ ಅಭಿವೃದ್ಧಿ ದೃಷ್ಟಿಯಲ್ಲಿ ಇಬ್ಬರೂ ಸಮಾನ ಮನಸ್ಕರಾಗಿದ್ದರು. ಜೊತೆಗೆ ಜನರ ನಡುವೇ ಇರುವ ನಾಯಕರಾಗಿ ಸದಾ ಒಂದಿಲ್ಲೊಂದು ಯೋಜನೆ ರೂಪಿಸಿ ಅಭಿವೃದ್ಧಿ ಬಗ್ಗೆ ಸದಾ ಹಾತೊರೆಯುತ್ತಿದ್ದ ನಾಯಕರುಗಳಾಗಿದ್ದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಚ್‌.ಎಸ್‌.ಮಹಾದೇವಪ್ರಸಾದ್‌ ನಿಧನರಾದ ಬಳಿಕ ಕಾಂಗ್ರೆಸ್‌ ಬಡವಾಗಲು ಆರಂಭವಾಯಿತು. ನಂತರ ಪಕ್ಷದ ನಾಯಕರೇ ಧ್ರುವನಾರಾಯಣಗೆ ಹೊಡೆತ ಕೊಟ್ಟಪರಿಣಾಮ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಆಂತರದಲ್ಲಿ ಸೋಲು ಅನುಭವಿಸಬೇಕಾಯಿತು.

ಸೋಲು ಅನುಭವಿಸಿದ್ದರೂ ದೃತಿಗೆಡದೆ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದ ಧ್ರುವನಾರಾಯಣ ಅವರೂ ಕೂಡ ನಿಧನರಾಗಿರುವುದು ಕಾಂಗ್ರೆಸ್‌ ಗೆ ನಿಜಕ್ಕೂ ದೊಡ್ಡ ನಷ್ಟ. ಅದರೊಟ್ಟಿಗೆ, ಹಳೇ ಮೈಸೂರು ಭಾಗ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೂ ದೊಡ್ಡ ಹೊಡೆತವನ್ನೇ ಈ ಇಬ್ಬರು ನಾಯಕರ ಅಗಲಿಕೆ ಕೊಟ್ಟಿದೆ.

ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಧ್ರುವನಾರಾಯಣ ನಿಧನ ದೊಡ್ಡ ಆಘಾತವನ್ನೇ ನೀಡಿದೆ. ಹಳೇ ಮೈಸೂರು ಭಾಗದಲ್ಲಿ ಶ್ರೀನಿವಾಸಪ್ರಸಾದ್‌ ನಂತರ ದಲಿತ ನಾಯಕ ಎನಿಸಿಕೊಂಡಿದ್ದ ಧ್ರುವನಾರಾಯಣ ಅಗಲಿಕೆ ಪಕ್ಷ ಹಾಗೂ ಸಮಾಜಕ್ಕೆ ದೊಡ್ಡ ನಿರ್ವಾತವೇ ಉಂಟು ಮಾಡಿದೆ.

-------

ಉತ್ತುಂಗಕ್ಕೇರಿಸಿದ್ದರು!

2008ರಲ್ಲಿ ಎಚ್‌.ಎಸ್‌.ಮಹಾದೇವಪ್ರಸಾದ್‌ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಳಿಕ ಮಹಾದೇವಪ್ರಸಾದ್‌ ಹಾಗೂ ಧ್ರುವನಾರಾಯಣ ಇಬ್ಬರೂ ಜೋಡೆತ್ತುಗಳಂತೆ ಪಕ್ಷ ಸಂಘಟಿಸಿ ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ಕ್ಕೆ 8 ಸ್ಥಾನಗಳಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ತಂದಿದ್ದರು. ಮಹದೇವಪ್ರಸಾದ್‌ ಲಿಂಗಾಯಿತ ಸಮಾಜದ ನಾಯಕರಾದರೆ, ಧ್ರುವನಾರಾಯಣ ದಲಿತ ನಾಯಕರಾಗಿ ಇಬ್ಬರು ಪರಸ್ಪರ ಗೌರವ ಕೊಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಉತ್ತುಂಗಕ್ಕೇರಿಸಿದ್ದರು. ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಧ್ರುವನಾರಾಯಣ ಅವರ ಮಟ್ಟಕ್ಕೆ ಸಾಥ್‌ ಕೊಡುವ ನಾಯಕ ಸಿಗದ ಪರಿಣಾಮ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಬುಡವೇ ಅಲುಗಾಡುವ ಪರಿಸ್ಧಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಜಿಲ್ಲೆಯಿಂದ ದೂರವಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದತ್ತ ಧ್ರುವನಾರಾಯಣ ಮುಖಮಾಡಿದ್ದರು.

-------------------

ಡಿಸ್ಕವರ್‌ ಆಫ್‌ ಇಂಡಿಯಾಕ್ಕೆ ಚಾಲನೆ

2008 ವಿಧಾನಸಭಾ ಚುನಾವಣೆಗೂ ಮುನ್ನಾ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ರಾಹುಲ್‌ಗಾಂಧಿ ಅವರನ್ನು ಕರೆಸಿ ಡಿಸ್ಕವರ್‌ ಆಫ್‌ ಇಂಡಿಯಾ ಯಾತ್ರೆಗೆ ಚಾಲನೆ ಕೊಡಿಸುವ ಮೂಲಕ ರಾಹುಲ್‌ ಗಾಂಧಿಯ ಗಮನ ಸೆಳೆದಿದ್ದರು. ಬಳಿಕ ಎರಡು ಬಾರಿ ಸಂಸದರಾಗುವ ಮೂಲಕ ರಾಹುಲ್‌ಗೆ ಮತ್ತಷ್ಟುಹತ್ತಿರವಾಗಿದ್ದರು. ಈ ಬಾರಿಯ ಜೋಡೋ ಯಾತ್ರೆ ಸಹ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಿಂದ ಆರಂಭವಾಗಿತ್ತು. ಆ ಸಂದರ್ಭದಲ್ಲಿ ಯಾತ್ರೆಯನ್ನು ಅಚ್ಚುಕಟ್ಟಾಗಿ ಸಂಘಟಿಸುವ ಮೂಲಕ, ತಾವು ರಾಜ್ಯದ ಹಲವೆಡೆ ರಾಹುಲ್‌ಗಾಂಧಿ ಅವರ ಜೊತೆ ಹೆಜ್ಜೆಯಾಕುವ ಮೂಲಕ ಪಕ್ಷವನ್ನು ಈ ಭಾರಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಮಹದಾಸೆ ಹೊಂದಿದ್ದರು.

Latest Videos
Follow Us:
Download App:
  • android
  • ios