ಕಾಲುವೆ ಒಡೆದು ಅಪಾರ ಪ್ರಮಾಣ ಜಮೀನುಗಳಿಗೆ ನೀರು
ಬಸವನಬಾಗೇಬಾಡಿ ಪಟ್ಟಣದಲ್ಲಿ ಮಳೆಯಿಂದಾಗಿ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿ ಮೆಕ್ಕೆಜೋಳ, ಕಬ್ಬು, ತೊಗರಿ ಬೆಳೆಯಲ್ಲಿ ನೀರು ನಿಂತು ಹಾನಿ ಸಂಭವಿಸಿದೆ.
ಬಸವನಬಾಗೇವಾಡಿ (ಆ.6) : ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದ 2-3 ದಿನಗಳಿಂದ ನಿರಂತರವಾಗಿ ಬರುತ್ತಿರುವ ಮಳೆಯಿಂದಾಗಿ ಕಚ್ಚಾ ಮನೆಗಳು ಸೋರುತ್ತಿವೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆದು ನಿಂತಿದ್ದ ಬೆಳೆ ಕೊಚ್ಚಿಕೊಂಡು ಹೋಗಿದೆ. ಕೆಲ ರೈತ ಬಾಂಧವರ ಜಮೀನುಗಳ ಒಡ್ಡು ಒಡೆದು ಹೋಗಿವೆ. ಇದರಿಂದಾಗಿ ರೈತರು ಹೈರಾಣು ಆಗಿದ್ದಾರೆ.
ವಿಜಯಪುರದಲ್ಲಿ ಡೋಣಿ ನದಿ ಆರ್ಭಟಕ್ಕೆ ಕಂಗಾಲಾದ ಜನತೆ..!
ಮಳೆಯಿಂದಾಗಿ ಪಟ್ಟಣದ ಇಂಗಳೇಶ್ವರ ರಸ್ತೆ(Ingaleshwar Road)ಯಲ್ಲಿರುವ ಮುತ್ತು ಕುಂಟೋಜಿ ಅವರ 7 ಎಕರೆ ಜಮೀನಿನಲ್ಲಿ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ತೊಗರಿ ಬೆಳೆ ನಾಶವಾಗಿದೆ. ಪಕ್ಕದ ಲಕ್ಷ್ಮಣ ಉಕ್ಕಲಿ ಎಂಬುವವರ 4 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಕಬ್ಬು ಅಪಾರ ನೀರಿನಿಂದಾಗಿ ನೆಲ ಕಚ್ಚಿದೆ. ಹಣಮಂತ ಈರಕಾರ ಅವರ 3 ಎಕರೆ ಜಮೀನಿನಲ್ಲಿ ಬೆಳೆದ ತೊಗರಿ, ಈರುಳ್ಳಿ ಬೆಳೆಯು ನೀರಿನಲ್ಲಿ ಹಾಳಾಗಿದೆ.
ಮಳೆ ಪ್ರಮಾಣ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆ ವಿವಿಧ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ವಿವರ- ಬಸವನಬಾಗೇವಾಡಿ ಕೇಂದ್ರದಲ್ಲಿ 23 ಎಂಎಂ., ಮನಗೂಳಿ ಕೇಂದ್ರದಲ್ಲಿ 22.3 ಎಂಎಂ.,ಹೂವಿನಹಿಪ್ಪರಗಿ ಕೇಂದ್ರದಲ್ಲಿ 9.8 ಎಂಎಂ., ಆಲಮಟ್ಟಿಕೇಂದ್ರದಲ್ಲಿ 4.2 ಎಂಎಂ.,ಅರೇಶಂಕರ ಕೇಂದ್ರದಲ್ಲಿ 2 ಎಂಎಂ ಮಳೆ ದಾಖಲಾಗಿದೆ ಎಂದು ತಹಸೀಲ್ದಾರ ಕಚೇರಿಯ ಮೂಲದಿಂದ ತಿಳಿದು ಬಂದಿದೆ.
ಮಳೆ ಅವಾಂತರ, ರಾತ್ರಿಯಿಡಿ ಪರದಾಡಿದ ನಿವಾಸಿಗಳು
ಬಳ್ಳಾವೂರ ಸಮೀಪವಿರುವ ಕಾಲುವೆ ಒಡೆದು ಪರಿಣಾಮ ಇದರ ಸುತ್ತಮುತ್ತಲಿನ ಜಮೀನಿಗಳಿಗೆ ನೀರು ನುಗ್ಗಿದ್ದ ಪರಿಣಾಮ ಜಮೀನುಗಳ ಒಡ್ಡು ಒಡೆಯುವ ಜೊತೆಗೆ ಬೆಳೆಯು ನಾಶವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಮಳೆಯಿಂದಾಗಿ ತಾಲೂಕಿನಲ್ಲಿ ಹಾನಿಯಾಗಿರುವ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.
ವಿಜಯಕುಮಾರ ಕಡಕೋಳ ತಹಸೀಲ್ದಾರ್.
ತಾಲೂಕಿನಲ್ಲಿ ಮಳೆಯಿಂದಾಗಿ ಬೆಳೆ ನಾಶವಾಗಿರುವ ಜಮೀನುಗಳಿಗೆ ಕಂದಾಯ, ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಎಂ.ಎಚ್.ಯರಝರಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ.
ರಾತ್ರಿ ಮನೆಯಲ್ಲಿ ಮಲಗಿದ್ದಾಗ ಗುರುವಾರ ಏಕಾಏಕಿ ಮಳೆ ಬಂದಿದ್ದರಿಂದಾಗಿ ಮನೆಯಲ್ಲಿ ನೀರು ನುಗ್ಗಿತು. ಇದರಿಂದಾಗಿ ರಾತ್ರಿಯಿಡೀ ಮಕ್ಕಳೊಂದಿಗೆ ನಿದ್ದೆ ಇಲ್ಲದೇ ರಾತ್ರಿ ಕಳೆದೆವು. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಬೆಳೆದೆ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಇದರಿಂದಾಗಿ ನಮಗೆ ದಿಕ್ಕೆ ತೋಚದಂತಾಗಿದೆ.
ಮಂಜುಳಾ ಪೂಜಾರಿ, ತೋಟದ ನಿವಾಸಿ.
ನಮ್ಮ ಜಮೀನಿನ ಪಕ್ಕದಲ್ಲಿ ಟಕ್ಕಳಕಿ ಶಾಖಾ ಕಾಲುವೆ ಹಾಯ್ದು ಹೋಗಿದೆ. ಮಳೆ ಜೊತೆಗೆ ಕಾಲುವೆ ಒಡೆದು ಹೋದ ಪರಿಣಾಮ ಅಪಾರ ಪ್ರಮಾಣದಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಬೆಳೆ ನಾಶವಾಗಿದೆ.
ಲಕ್ಷ್ಮಣ ಉಕ್ಕಲಿ ರೈತ.
ನಮ್ಮ ಜಮೀನ ಪಕ್ಕದಲ್ಲಿರುವ ಕಾಲುವೆ ಒಡೆದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿದೆ. ನಮ್ಮ ಜಮೀನಿನ ಒಡ್ಡುಗಳು ಒಡೆದು ಹೋಗಿವೆ. ಕೂಡಲೇ ಕೃಷ್ಣಾ ಭಾಗ್ಯ ಜಲ ನಿಯಮಿತ ಅಧಿಕಾರಿಗಳು ರೈತರಿಗೆ ಪರಿಹಾರ ಕೊಡಬೇಕು.
ಮುತ್ತು ಕುಂಟೋಜಿ ರೈತ.