ವಿಜಯಪುರದಲ್ಲಿ ಡೋಣಿ ನದಿ ಆರ್ಭಟಕ್ಕೆ ಕಂಗಾಲಾದ ಜನತೆ..!
ಪ್ರವಾಹ ಪೀಡಿತ ಸ್ಥಳಗಳಿಗೆ ಡಿಸಿ ವಿಜಯಮಹಾಂತೇಶ ದಾನಮ್ಮನವರ್ ಭೇಟಿ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಆ.05): ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗ್ತಿದೆ. ಪರಿಣಾಮ ಡೋಣಿ ನದಿ ಉಕ್ಕೇರಿ ಅವಾಂತರ ಸೃಷ್ಟಿಸಿದೆ. ಡೋಣಿ ನದಿಗೆ ಪ್ರವಾಹ ಉಂಟಾಗಿದ್ದು, ಬಿತ್ತಿದ ಬೆಳೆ, ಬೆಳೆದು ನಿಂತ ಪಸಲು ಕೊಚ್ಚಿ ಹೋಗಿದ್ದು, ರೈತರು ಕಂಗಾಲಾಗಿದ್ದಾರೆ.. ಮೂರ್ನಾಲ್ಕು ದಿನಗಳ ನಿರಂತರ ಮಳೆಯಿಂದ ಡೋಣಿ ನದಿ ಉಕ್ಕಿ ಹರಿದಿದೆ. ಪರಿಣಾಮ ಬಬಲೇಶ್ವರ, ತಿಕೋಟ, ವಿಜಯಪುರ ತಾಲೂಕಿನ ಹಲವು ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಬೆಳೆದು ನಿಂತಿದ್ದ ಬೆಳೆ ಡೋಣಿ ನದಿ ಪಾಲಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಅದ್ರಲ್ಲು ಸಾರವಾಡ, ದಾಸ್ಯಾಳ, ಉತ್ನಾಳ ಸೇರಿದಂತೆ ಅನೇಕ ಗ್ರಾಮದಲ್ಲಿ ಡೋಣಿ ಆರ್ಭಟಿಸಿದ್ದು, ಗ್ರಾಮದ ನೂರಾರು ಏಕರೇ ಪ್ರದೇಶ ಜಲಾವೃತ್ತಗೊಂಡಿದೆ. ಹೀಗೇ ಸಾವಿರಕ್ಕು ಅಧಿಕ ರೈತರ ಜಮೀನುಗಳು ಡೋಣಿ ನದಿ ಆರ್ಭಟಕ್ಕೆ ತುತ್ತಾಗಿವೆ..
ಡೋಣಿ ಹೊಡೆತಕ್ಕೆ ಅಪಾರ ಪ್ರಮಾಣದ ಬೆಳೆ ನಷ್ಟ
ಡೋಣಿ ನದಿಗೆ ನೀರು ಬಂದರೇ ಬೆಳೆ ಹಾಳು ಎನ್ನುವ ಮಾತಿದೆ. ಹಾಗೇ ಡೋಣಿ ನದಿಗೆ ನೀರು ಬಂದರೆ ಅದು ಹರಿಯೋದೆ ರೈತರ ಹೊಲಗಳಲ್ಲಿ. ಇದರಿಂದಾಗಿ ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿರ್ತಾರೆ. ಈಗಲು ಅಷ್ಟೇ ಡೋಣಿ ನದಿ ಪ್ರವಾಹಕ್ಕೆ ಡೋಣಿ ನದಿ ಪಾತ್ರದ ಸಾವಿರಾರು ಏಕರೆ ಜಮೀನುಗಳಲ್ಲಿ ಬೆಳೆದ ಬೆಳೆ ಎಲ್ಲಾ ಹಾಳಾಗಿ ಹೋಗಿದೆ. ಗೋವಿನ ಜೋಳ, ಉದ್ದು, ಸೂರ್ಯಕಾಂತಿ, ತೊಗರಿ ಬೆಳೆಗಳು ಡೋಣಿ ಹೆಮ್ಮಾರಿಯ ಪಾಲಾಗಿದೆ. ಇನ್ನು ತಡವಾಗಿ ಬಿತ್ತನೆಯಾದ ಬೆಳೆಯು ನೀರಲ್ಲಿ ಕೊಚ್ಚಿ ಹೋಗಿದ್ದು ರೈತರು ಕಂಗಾಲಾಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಮೇಘಸ್ಫೋಟ: ಹಳ್ಳದಂತಾದ ರಸ್ತೆಗಳು, ಜನರು ಕಂಗಾಲು.!
ಧನ್ಯಾಳ-ದಾಸ್ಯಾಳ ಗ್ರಾಮದಲ್ಲಿ ಡೋಣಿ ಆರ್ಭಟ
ಅದ್ರಲ್ಲು ಡೋಣಿ ಆರ್ಭಟದಿಂದ ಧನ್ಯಾಳ-ದಾಸ್ಯಾಳ ಗ್ರಾಮದ ಜನರು ಹೈರಾಣಾದ ಘಟನೆ ನಡೆದಿದೆ. ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಡೋಣಿ ಪ್ರವಾಹ ಧನ್ಯಾಳ-ದಾಸ್ಯಾಳ ಗ್ರಾಮಕ್ಕೆ ನುಗ್ಗಿದೆ. ಇಡಿ ಗ್ರಾಮಗಳನ್ನ ಡೋಣಿ ನದಿ ಪ್ರವಾಹ ನೀರು ಸುತ್ತುವರೆದಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿ ಜನರು ಕಂಗಾಲಾಗಿದ್ದರು. ಗ್ರಾಮದಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಟ್ರೈಲಿಗಳು ಮುಳುಗಿದ್ದವು. ಕೃಷಿ ಉಪಕರಣಗಳು ದಿನಗಟ್ಟಲೆ ನೀರಲ್ಲಿ ಮುಳುಗಿದ್ದವು.
ಸಂಗಮನಾಥ ದೇಗುಲಕ್ಕೆ ನುಗ್ಗಿದ ನೀರು
ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ತಿಕೋಟ ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಅದ್ರಲ್ಲು ಕಳ್ಳಕಟವಗಿ ಗ್ರಾಮದ ಹಳ್ಳದ ಪಕ್ಕದಲ್ಲೆ ಇರುವ ಸಂಗಮನಾಥ ದೇಗುಲಕ್ಕೆ ಹಳ್ಳದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಳೆ ನೀರು ಗರ್ಭಗುಡಿಯನ್ನ ಸುತ್ತುವರೆದಿತ್ತು. ಶ್ರಾವಣ ಮಾಸ ಹಿನ್ನೆಲೆ ಜನರಿಗೆ ದೇವರ ದರ್ಶನಕ್ಕು ಪರದಾಡುವಂತಾಯ್ತು..
ಜಿಲ್ಲಾಧಿಕಾರಿಗಳಿಂದ ಡೋಣಿ ಪ್ರವಾಹ ಪರಿಶೀಲನೆ
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಡೋಣಿ ನದಿ ತುಂಬಿ ಹರಿದಿರುವುದರಿಂದ ನದಿ ಅಂಚಿನ ಗ್ರಾಮಗಳಾದ ಸಾರವಾಡ, ದನ್ಯಾಳ ಮತ್ತು ದಾಸ್ಯಾಳ ಗ್ರಾಮಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಆಯಾ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಮೊದಲಿಗೆ ಸಾರವಾಡ ಗ್ರಾಮಕ್ಕೆ ತೆರಳಿ, ನದಿ ನೀರಿನಿಂದಾಗಿ ಆ ಗ್ರಾಮದ ರಸ್ತೆಗಳ ಮೇಲೆ ನೀರು ಹರಿಯುತ್ತಿರುವದನ್ನು ನೋಡಿದರು. ಬಳಿಕ ದನ್ಯಾಳ ಮತ್ತು ದಾಸ್ಯಾಳ ಗ್ರಾಮಕ್ಕೆ ಭೇಟಿ ನೀಡಿದರು. ನೀರು ರಭಸವಾಗಿ ಹರಿದು ರಸ್ತೆ ಸಂಚಾರ ಸ್ಥಗಿತಗೊಂಡಿರುವುದನ್ನು ಸಹ ವೀಕ್ಷಣೆ ನಡೆಸಿದರು.
Vijayapura: ಡೋಣಿ ನದಿಯಲ್ಲಿ ಭಾರಿ ಪ್ರವಾಹ: ಸೇತುವೆ ಮುಳುಗಡೆಯಾಗಿ ಪ್ರಯಾಣಿಕರ ಪರದಾಟ
ನದಿ ತುಂಬಿ ಹರಿಯುತ್ತಿರುವುದರಿಂದ ರಸ್ತೆಗಳ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿತ್ತು. ನೀರಿನ ಹರಿವು ಕಡಿಮೆಯಾದಂತೆ ರಸ್ತೆ ಮೇಲೆ ನೀರು ಹರಿಯುವುದು ನಿಂತಿದೆ. ಮನೆಗಳಿಗೆ ಹಾನಿಯಾಗಿದೆ. ಬೆಳೆಹಾನಿಯಾಗಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಮತ್ತೆ ಮಳೆಯಿಂದಾಗಿ ನದಿ ತುಂಬಿ ಹರಿದು ಪ್ರವಾಹ ಬಂದು ನದಿ ಅಂಚಿನ ಗ್ರಾಮಗಳಿಗೆ ನೀರು ಹೊಕ್ಕಲ್ಲಿ ಪೈಪ್‌ಮೂಲಕ ನೀರನ್ನು ಹೊರಸಾಗಿಸುವ ಕಾರ್ಯ ನಡೆಸಲು ಸದಾಕಾಲ ಸನ್ನದ್ಧರಾಗಿರಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಾಪಂ ಇಓ ಅವರಿಗೆ ನಿರ್ದೇಶನ ನೀಡಿದರು.
ಪ್ರವಾಹದಿಂದಾಗಿ ಬೆಳೆಹಾನಿಯಾದ ಬಗ್ಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು ಒಟ್ಟುಗೂಡಿ ಜಂಟಿ ಸಮೀಕ್ಷೆ ನಡೆಸಿ ಬೆಳೆಹಾನಿ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಸೀಲ್ದಾರ ಅವರಿಗೆ ನಿರ್ದೇಶನ ನೀಡಿದರು. ಬಳಿಕ ತಿಕೋಟಾ ತಾಲೂಕಿಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ದೋಣಿ ನದಿ ತುಂಬಿ ಹರಿದು ಪ್ರವಾಹಕ್ಕೊಳಗಾದ ಕೋಟ್ಯಾಳ, ಹರನಾಳ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದರು.