ಮಂಗಳೂರು(ಮಾ.13): ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇರಿಸಿದ ಆರೋಪಿ ಆದಿತ್ಯ ರಾವ್‌ನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಜ.20ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇರಿಸಿದ ಆರೋಪಿ ಆದಿತ್ಯ ರಾವ್‌ನ್ನು ಮಂಗಳವಾರ ತಹಸೀಲ್ದಾರ್‌ ಎದುರು ಗುರುತುಪತ್ತೆ ಪರೇಡ್‌ ನಡೆಸಲಾಗಿತ್ತು.

ಆದಿತ್ಯ ರಾವ್‌ನನ್ನು ನೋಡಿದ 15 ಮಂದಿ ಪ್ರತ್ಯಕ್ಷ ಸಾಕ್ಷಿಗಳನ್ನು ಕರೆಸಿ ಗುರುತುಪತ್ತೆ ಪರೇಡ್‌ ನಡೆಸಲಾಗಿತ್ತು. ಘಟನೆಯಲ್ಲಿ ಬಂಧಿತ ಆದಿತ್ಯ ರಾವ್‌ನನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿರುವ ಮಂಗಳೂರು ಜೈಲಿನಲ್ಲೇ ಆತನ ಗುರುತುಪತ್ತೆ ಪರೇಡ್‌ ನಡೆಸಲಾಗಿದೆ.

'BSY ವಿಡಿಯೋ ಲೀಕ್ ಮಾಡಿದ್ದು ಮಹೇಶ ಟೆಂಗಿನಕಾಯಿ'

ಆರೋಪಿ ಆದಿತ್ಯ ರಾವ್‌ನ ತನಿಖೆ ನಡೆಸಿದರೂ ಆತ ಕೆಲವೊಂದು ಸಂದರ್ಭದಲ್ಲಿ ಸರಿಯಾಗಿ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗೆ ಆತನನ್ನು ಮಂಪರು ಪರೀಕ್ಷೆ ನಡೆಸುವಂತೆ ತನಿಖಾ ತಂಡ ಮಂಗಳೂರು ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಇದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿದರೆ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಆದಿತ್ಯ ರಾವ್‌ನ ಮಂಪರು ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.