'BSY ವಿಡಿಯೋ ಲೀಕ್ ಮಾಡಿದ್ದು ಮಹೇಶ ಟೆಂಗಿನಕಾಯಿ'
ಬಿಜೆಪಿ ಕಾರ್ಯಕಾರಿಣಿ ಸಭೆಯ ವಿಡಿಯೋ ಲೀಕ್ ಆಗಲು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಕಾರಣ| ಮಹೇಶ ಟೆಂಗಿನಕಾಯಿ ಪಕ್ಷದಿಂದ ಉಚ್ಚಾಟಿಸಲು ಮುತ್ತಣ್ಣವರ ಒತ್ತಾಯ|ಈ ಕುರಿತು ಈಗಾಗಲೇ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೂ ದೂರು ನೀಡಿದ್ದೇನೆ: ಶಿವಾನಂದ ಮುತ್ತಣ್ಣವರ|
ಹುಬ್ಬಳ್ಳಿ[ಮಾ.13]: ಉಪ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಡೆನ್ನಿಸನ್ಸ್ ಹೊಟೆಲ್‌ನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯ ವಿಡಿಯೋ ಲೀಕ್ ಆಗಲು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಕಾರಣ ಎಂದು ನೇರವಾಗಿ ದೂರಿರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ, ಟೆಂಗಿನಕಾಯಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಈಗಾಗಲೇ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೂ ದೂರು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿಡಿಯೋ ಲೀಕ್ ಪ್ರಕರಣಕ್ಕೆ ಹೊಸ ತಿರುವು ಬಂದಂತಾಗಿದೆ. ಇದರೊಂದಿಗೆ ಬಿಜೆಪಿಯಲ್ಲಿನ ಭಿನ್ನಮತ ಈ ಮೂಲಕ ಸ್ಫೋಟಗೊಂಡಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಗುರುತರ ಆರೋಪ ಮಾಡಿದ ಮುತ್ತಣ್ಣವರ, ಕಾರ್ಯಕಾರಿಣಿ ಸಭೆಯ ಜವಾಬ್ದಾರಿಯನ್ನು ಮಹೇಶ ವಹಿಸಿಕೊಂಡಿದ್ದರು. ಅವರ ಬೆಂಬಲಿಗರನ್ನು ಹೊರತುಪಡಿಸಿ ಇನ್ನಾರೂ ಇರಲಿಲ್ಲ. ಹೀಗಾಗಿ ಅವರೇ ವಿಡಿಯೋ ಲೀಕ್ ಆಗಲು ಕಾರಣ. ಇದರಿಂದಾಗಿಯೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ತಪ್ಪು ತಿಳಿವಳಿಕೆ ಹರಡುವಂತಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರ ಜಗದೀಶ ಶೆಟ್ಟರ್ ತಲೆ ತಗ್ಗಿಸುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷ ದ್ರೋಹದ ಕಾರ್ಯ ಎಸಗಿದ ಮಹೇಶ ಟೆಂಗಿನಕಾಯಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಇವೆಲ್ಲದರ ಕುರಿತು 2 ತಿಂಗಳ ಹಿಂದೆಯೇ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ ಅವರಿಗೆ ದೂರು ಸಲ್ಲಿಸಿದ್ದೇವೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಆಗ ಪಕ್ಷವು ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಪ್ರಸ್ತುತ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಹೇಶ ಟೆಂಗಿನಕಾಯಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಬಿಜೆಪಿ ಜಿಲ್ಲಾ ಘಟಕದಲ್ಲಿ ಅವರದ್ದೆ ಒಂದು ಗುಂಪಾಗಿದೆ. ಸಭೆ ಸಮಾರಂಭಗಳಿದ್ದರೆ ಟೆಂಗಿನಕಾಯಿ ತಂಡ 25ರಿಂದ 50 ಲಕ್ಷ ಲಪಟಾಯಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಷ್ಟ್ರೀಯ ನಾಯಕರ ಭಾಷಣದ ವೇಳೆ ಇವರ ತಂಡವು ಜನರನ್ನು ಕರೆತರಲು ವಾಹನ ವ್ಯವಸ್ಥೆ ಮಾಡುವ ಜವಾಬ್ದಾರಿ ಪಡೆದಿತ್ತು. ಆಗ ಸುಳ್ಳು ಲೆಕ್ಕ ನೀಡಿ ಅವರ ತಂಡದ ಶಿವು ಮೆಣಸಿನಕಾಯಿ, ಸತೀಶ ಶೇಜವಾಡಕರ ಲಕ್ಷಾಂತರ ರು. ಜೇಬಿಗಿಳಿಸಿದ್ದಾರೆ. ಪೂರ್ವ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಮಲ್ಲಿಕಾರ್ಜುನ ಸಾವುಕಾರ ನೇಮಕಗೊಂಡಾಗ ತಮಗೆ ಹಣ ಮಾಡಲು ತೊಂದರೆ ಆಗುತ್ತದೆ ಎಂಬ ಕಾರಣಕ್ಕಾಗಿಯೆ ಅವರನ್ನು ಬದಲಿಸಿದ್ದರು ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಟೆಂಗಿನಕಾಯಿ ಅವರಿಂದ ಪಕ್ಷದ ಸಂಘಟನೆ ವ್ಯವಸ್ಥೆಗೆ ಹಾನಿಯಾಗಲಿದೆ. ಪಕ್ಷದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಎಲ್ಲವೂ ತಾನು ಹೇಳಿದಂತೆ ಆಗಬೇಕು ಎನ್ನುತ್ತಿದ್ದಾರೆ. ಇದರಿಂದ ಹಳೆ ಕಾರ್ಯಕರ್ತರಿಗೆ ಬೇಸರವಾಗಿದೆ. ಅಲ್ಲದೆ, ತಾವು ವೈಯಕ್ತಿಕವಾಗಿ ಏರ್ಪಡಿಸುವ ಹೋಳಿ ಹಬ್ಬದ ಜಗ್ಗಲಗಿ ಹಬ್ಬದ ಕಾರ್ಯಕ್ರಮಕ್ಕೆ ಪಕ್ಷದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಂಡಳ ಅಧ್ಯಕ್ಷರ ಮೂಲಕ ಕಾರ್ಯಕ್ರಮಕ್ಕೆ ಜನತೆ ಸೇರುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಪಕ್ಷ ಮುಂದೆ ಹಾನಿ ಅನುಭವಿಸಲಿದೆ ಎಂದರು.
ಇಲ್ಲಿ ಮಾತ್ರವಲ್ಲದೆ ಕಲಘಟಗಿಯಲ್ಲಿ ಪಕ್ಷದ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ಗೆಲ್ಲಬಾರದೆಂದು ಕುತಂತ್ರ ಮಾಡಿದ್ದರು. ಈಗ ಅವರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಶಿರಹಟ್ಟಿ ಶಾಸಕರ ಕ್ಷೇತ್ರದಲ್ಲಿ ಹಸ್ತಕ್ಷೇಪಕ್ಕೆ ಮಾಡುತ್ತಿದ್ದಾರೆ. ಕೆಲವೆಡೆ ಶಾಸಕರ ವಿರೋಧಿ ಗುಂಪನ್ನು ಸಂಪರ್ಕಿಸಿ ಅವರನ್ನು ಎತ್ತಿಕಟ್ಟುವ ಕೆಲಸವನ್ನು ಟೆಂಗಿನಕಾಯಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು ಶಿವಾನಂದ ಮುತ್ತಣ್ಣವರ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗಗೊಂಡಿದ್ದು, ಪಕ್ಷದ ಭಿನ್ನಮತ ಬೀದಿ ರಂಪವಾಗಿದೆ.
ಶಿವಾನಂದ ಮುತ್ತಣ್ಣವರ ಮಾಡಿರುವ ಆರೋಪಕ್ಕೆ ನಾನೇನು ಪ್ರತಿಕ್ರಿಯಿಸಲ್ಲ. ಪಕ್ಷದ ವಿಚಾರ ಪಕ್ಷದ ವೇದಿಕೆಯಲ್ಲೇ ಚರ್ಚಿಸುತ್ತೇನೆ ಎಂದು ಮಹೇಶ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ.