ಶಿರಸಿ(ಸೆ.27):  ಭಯೋತ್ಪಾದಕರು ಬಳಸಿದ್ದ ಸಿಮ್‌ವೊಂದರ ವಿಚಾರಕ್ಕೆ ಸಂಬಂಧಿಸಿ ತಾಲೂಕಿನ ಅರೆಕೊಪ್ಪಕ್ಕೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಇಬ್ಬರು ಅಧಿಕಾರಿಗಳು, ಶನಿವಾರ ಮತ್ತೆ ಆಗಮಿಸಿ ಇಬ್ಬರ ವಿಚಾರಣೆ ನಡೆಸಿದರು.

ಎನ್‌ಐಎ ಇಬ್ಬರು ಅಧಿಕಾರಿಗಳು ಶಿರಸಿಗೆ ಆಗಮಿಸಿ ಅರೆಕೊಪ್ಪದ ಇಬ್ಬರನ್ನು ವಿಚಾರಣೆ ನಡೆಸಿದರು. ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿ ವ್ಯಕ್ತಿಯ ಹೆಸರಿನಲ್ಲಿ ಸಿಮ್‌ ಬಳಕೆಯಾದ ಕುರಿತು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿಚಾರಣೆ ನಡೆಸಿ ವಾಪಸಾಗಿದ್ದಾರೆ. ಆದರೆ, ಯಾರನ್ನೂ ಬಂಧಿಸಿಲ್ಲ.

ಪಾಕ್‌ ಭಯೋತ್ಪಾದನೆಯ ಕೇಂದ್ರಬಿಂದು: ವಿಶ್ವಸಂಸ್ಥೆ ಸಭೆಯಲ್ಲಿ ಭಾರತ ತರಾಟೆ! ..

ಇತ್ತೀಚಿಗೆ ಎನ್‌ಐಎ ಅಧಿಕಾರಿಗಳು ದೇಶದ ವಿವಿಧೆಡೆ ದಾಳಿ ನಡೆಸಿ 9 ಮಂದಿ ಭಯೋತ್ಪಾದಕರನ್ನು ಬಂಧಿಸಿತ್ತು. ಈ ಸಂದರ್ಭದಲ್ಲಿ ಭಯೋತ್ಪಾದಕನೊಬ್ಬ ಬಳಸುತ್ತಿದ್ದ ಸಿಮ್‌ವೊಂದು ಶಿರಸಿಯ ವ್ಯಕ್ತಿಯೊಬ್ಬರ ಹೆಸರಿನಲ್ಲಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಎನ್‌ಐಎ ತಂಡ ಶಿರಸಿಯ ಅರೆಕೊಪ್ಪಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಇದೀಗ ಮತ್ತೆ ಎನ್‌ಐಎ ಅದೇ ವ್ಯಕ್ತಿಯನ್ನು ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.