ರಾಯಚೂರು(ನ.29): ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿರುವ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸೇರಿದ 208.51 ಎಕರೆ ಜಮೀನು ಹರಾಜಿಗೆ ಮುಂದಾಗಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹರಾಜನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ತೆಲಂಗಾಣದ ವಿವಿಧ ಗ್ರಾಮಗಳಲ್ಲಿ ಶ್ರೀಮಠಕ್ಕೆ ಸೇರಿದ 208.51 ಎಕರೆ ಜಮೀನು ಇದೆ. ಇದನ್ನು ಡಿ.7 ರಿಂದ 10 ವರೆಗೆ ಇ-ಟೆಂಡರ್‌ ಹಾಗೂ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಮುಕ್ತ ಹರಾಜಿಗೆ ಅಲ್ಲಿಯ ದೇವಾಲಯ ಇಲಾಖೆಯು ಇತ್ತೀಚೆಗೆ ಟೆಂಡರ್‌ ಕರೆದಿತ್ತು. ಇದಕ್ಕೆ ಈಗ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಂತ್ರಾಲಯದ ಮಠದ ಆಸ್ತಿ ಮಾರಾಟಕ್ಕೆ ಆಂಧ್ರ ಸರ್ಕಾರ ನಿರ್ಧಾರ..!

ಈ ಕುರಿತು ಪತಿಕ್ರಿಯೆ ನೀಡಿರುವ ಶ್ರೀಮಠ, 2017ರಿಂದಲೇ ಶ್ರೀಮಠವು ಜಮೀನು ಹರಾಜು ಪ್ರಕ್ರಿಯೆಯನ್ನು ಕಾಯ್ದೆ, ನಿಯಮಾನುಸಾರವೇ ಕೈಗೊಂಡಿದೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಯಾವುದೇ ಒತ್ತಡ ಹೇರಿಲ್ಲ. ಆಂಧ್ರ-ತೆಲಂಗಾಣದಲ್ಲಿ ನಿವಾರ್‌ ಚಂಡಮಾರುತ ಅಪ್ಪಳಿಸಿ ಅನಾಹುತ ಸೃಷ್ಟಿಸಿದೆ. ಇದಲ್ಲದೆ ಹರಾಜು ಪ್ರಕ್ರಿಯೆ ನಡೆಸುವುದಕ್ಕಾಗಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿದಾಗ ರೈತರು ಸದ್ಯ ಭೂಮಿಯಲ್ಲಿ ಬೆಳೆಹಾಕಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ರೈತರು ಒಂದಷ್ಟು ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಜಮೀನು ಬಹಿರಂಗ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಶ್ರೀಮಠದ ಸಹಕಾಯ ಪರಿಪಾಲನಾಧಿಕಾರಿ ಮಾಧವ ಶೆಟ್ಟಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.