ಜನರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದ ನಂಜನಗೂಡು ದೇವಾಲಯ ದೇವಾಲಯವನ್ನು ಬಿಜೆಪಿ ಸರ್ಕಾರ ಕೆಡವಿದ್ದು ದೇಶಕ್ಕೇ ಕಪ್ಪು ಚುಕ್ಕೆ ಕೂಡಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದ ಖಾದರ್

 ಮಂಗಳೂರು (ಸೆ.17):  ಜನರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದ ನಂಜನಗೂಡು ದೇವಾಲಯವನ್ನು ಬಿಜೆಪಿ ಸರ್ಕಾರ ಕೆಡವಿದ್ದು ದೇಶಕ್ಕೇ ಕಪ್ಪು ಚುಕ್ಕೆ. ಕೂಡಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್‌ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸರ್ಕಾರಕ್ಕೆ ಗೊತ್ತಿಲ್ಲದೆ ಮುಖ್ಯ ಕಾರ್ಯದರ್ಶಿ ಆದೇಶ ಮಾಡಲು ಸಾಧ್ಯವೇ? ಹಾಗೆ ಆದೇಶ ಮಾಡುವುದಿದ್ದರೆ ಸರ್ಕಾರ ಯಾಕೆ ಬೇಕು, ಅಧಿಕಾರಿಗಳೇ ಆಡಳಿತ ನಡೆಸಲಿ. ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಏಕೆ ಎಂದು ಹರಿಹಾಯ್ದರು.

ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟು ನಿಟ್ಟಿಗೆ ಅಸಮಾಧಾನ : ಅಲ್ಲಿ ನಡೆಯುವ ಅಕ್ರಮ ಕಾಣಿಸಲ್ವಾ..?

ಧಾರ್ಮಿಕ ಕೇಂದ್ರಗಳು ಜನರ ಭಾವನೆ, ಶ್ರದ್ಧೆ, ಪಾವಿತ್ರ್ಯತೆಯನ್ನು ಒಳಗೊಂಡಿರುತ್ತವೆ ಎನ್ನುವ ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. 200 ವರ್ಷಗಳ ಇತಿಹಾಸ ಇರುವ ದೇವಾಲಯದ ಪಾವಿತ್ರ್ಯತೆ ಅರ್ಥ ಮಾಡಲಾಗದಿದ್ದರೆ ಮತ್ತೆ ಇವರು ಯಾವ ರೀತಿ ಆಡಳಿತ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿದ್ದು ಕೆಡಹುವ ಸಂಸ್ಕೃತಿ: ದೇವಾಲಯ ಧ್ವಂಸ ಕಾರ್ಯಕ್ಕೆ ಕೈ ಹಾಕಿರುವ ಬಿಜೆಪಿ ಸರ್ಕಾರದ್ದು ಕೆಡಹುವ ಸಂಸ್ಕೃತಿ ಎನ್ನುವುದು ಮತ್ತೆ ಸಾಬೀತಾಗಿದೆ. ಇದುವರೆಗೆ ಜನರ ಭಾವನೆಗಳನ್ನು ಕೆಡವಿದವರು ಈಗ ದೇವಾಲಯಗಳನ್ನು ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡೂವರೆ ವರ್ಷಗಳ ಅಧಿಕಾರವಧಿಯಲ್ಲಿ ತಮ್ಮ ಸಂಸ್ಕೃತಿಯನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಖಾದರ್‌ ಟೀಕಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಮುಖಂಡರಾದ ಶಶಿಧರ ಹೆಗ್ಡೆ, ಸಂತೋಷ್‌ ಶೆಟ್ಟಿ, ಭಾಸ್ಕರ ಮೊಯ್ಲಿ, ಆಲ್ವಿನ್‌ ಡಿಸೋಜ ಮತ್ತಿತರರಿದ್ದರು.