ಧಾರವಾಡ ಜಿಲ್ಲೆಯಲ್ಲಿ ದಾಖಲೆಯ ಬಿಸಿಲು ಏರಿಕೆಯಾಗುತ್ತಿದ್ದು, ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐ ಮತ್ತು ಚಿಟಗುಪ್ಪಿ ಆಸ್ಪತ್ರೆಗಳಲ್ಲಿ ಹವಾನಿಯಂತ್ರಿತ 'ಹೀಟ್‌ ಸ್ಟ್ರೋಕ್‌ ವಾರ್ಡ್‌'ಗಳನ್ನು ತೆರೆಯಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ (ಮೇ.3): ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಬಿಸಿಲು ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಕರ್ನಾಟಕದ ಸಂಜೀವಿನಿ ಖ್ಯಾತಿಯ ಕೆಎಂಸಿಆರ್‌ಐನಲ್ಲಿ 14 ಹಾಗೂ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ 6 ಬೆಡ್‌ಗಳುಳ್ಳ ಸುಸಜ್ಜಿತ ಹವಾನಿಯಂತ್ರಿತ "ಹೀಟ್‌ ಸ್ಟ್ರೋಕ್‌ ವಾರ್ಡ್‌" ತೆರೆಯಲಾಗಿದೆ.

Add Asianetnews Kannada as a Preferred SourcegooglePreferred

ಸೆಕೆಯೊಂದಿಗೆ ಬೀಸುತ್ತಿರುವ ಬಿಸಿ ಗಾಳಿಯು ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಹೈರಾಣಾಗುವಂತೆ ಮಾಡಿದೆ. ಬಿಸಿಲಿನಿಂದಾಗಿ ಮಕ್ಕಳಲ್ಲಿ ತೀವ್ರ ವಾಂತಿ-ಭೇದಿ, ಮೂರ್ಚೆರೋಗ, ನಿಶಕ್ತಿಯಾಗುವುದು, ಚರ್ಮರೋಗ ಸಮಸ್ಯೆ, ಹೃದಯ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ. ಬಿರುಬಿಸಿಲಿನ ಮಧ್ಯೆಯೇ ಆಗಾಗ ಸುರಿಯುತ್ತಿರುವ ಅಕಾಲಿಕ ಮಳೆಯೂ ರೋಗ ಉಲ್ಬಣಕ್ಕೆ ಕಾರಣವಾಗುತ್ತಿದೆ.

ಬಿಸಿಲಿನ ಬೇಗೆಯಿಂದ ಬಳಲಿ ಕೆಎಂಸಿಆರ್‌ಐ ಒಪಿಡಿಗೆ ನಿತ್ಯವೂ ನೂರಾರು ಜನರು ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ವಾಂತಿ-ಭೇದಿ, ನಿಶಕ್ತಿ, ನಿರ್ಜಲೀಕರಣ, ಆಮಶಂಕೆ ಹಾಗೂ ಚರ್ಮ ರೋಗದವರದ್ದೇ ಹೆಚ್ಚಿನ ಪಾಲಿದೆ ಎನ್ನುತ್ತಾರೆ ವೈದ್ಯರು.

ದಾಖಲೆಯ ಬಿಸಿಲು:

ಹಲವು ವರ್ಷಗಳಿಂದ ಜಿಲ್ಲೆಯ ತಾಪಮಾನ ಗಮನಿಸಿದಾಗ 33ರಿಂದ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿತ್ತು. ಆದರೆ, ಕಳೆದ 2-3 ವರ್ಷಗಳಿಂದ 36ರಿಂದ 39 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಈ ಬಾರಿ ಏ. 15ರಂದು ಹುಬ್ಬಳ್ಳಿಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಈ ರೀತಿಯ ಸುಡು ಬಿಸಿಲಿನಲ್ಲಿಯೇ ಓಡಾಡುತ್ತಿರುವವರಿಗೆ ಹೆಚ್ಚಾಗಿ ತಲೆ ನೋವು, ತೀವ್ರತರದ ಆಯಾಸ, ಸುಸ್ತು, ನಿಶಕ್ತಿ, ಚರ್ಮ ತುರಿಕೆ, ಪದೇ ಪದೇ ಜ್ವರ ಕಾಣಿಸಿಕೊಳ್ಳುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.

ನಗರದಲ್ಲಿ 20 ಬೆಡ್‌ ಸ್ಥಾಪನೆ:

ಇಲ್ಲಿನ ಕೆಎಂಸಿಆರ್‌ಐನಲ್ಲಿ 14 ಹಾಗೂ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ 6 ಬೆಡ್‌ಗಳುಳ್ಳ ಹೀಟ್‌ಸ್ಟ್ರೋಕ್‌ ವಾರ್ಡ್‌ ಸ್ಥಾಪಿಸಲಾಗಿದೆ. ಈ ವಾರ್ಡ್‌ಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಐಸ್ ಕ್ಯೂಬ್, ಒಆರ್‌ಎಸ್, ಥರ್ಮಾಮೀಟರ್ ಸೇರಿದಂತೆ ಎಲ್ಲ ತುರ್ತು ಔಷಧಿ ಸಂಗ್ರಹಿಸಿ ಇಡಲಾಗಿದೆ. ಇಲ್ಲಿ ಇಬ್ಬರು ನುರಿತ ವೈದ್ಯರು ಹಾಗೂ 4 ಸಿಬ್ಬಂದಿಯನ್ನು ರೋಗಿಗಳ ಕಾಳಜಿಗಾಗಿಯೇ ನಿಯೋಜಿಸಲಾಗಿದೆ. ಕೆಎಂಸಿಆರ್‌ಐನಲ್ಲಿ 10-12 ದಿನಗಳ ಹಿಂದೆ ಹಾಗೂ ಚಿಟಗುಪ್ಪಿಯಲ್ಲಿ ಕಳೆದ ಒಂದು ತಿಂಗಳ ಹಿಂದೆಯೇ ಈ ವಿಶೇಷ ವಾರ್ಡ್‌ ತೆರೆಯಲಾಗಿದೆ.

ಉತ್ತರ ಕರ್ನಾಟಕದ ಹತ್ತಾರು ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ಬರುತ್ತಾರೆ. ಬಿಸಿಲಿನ ಪ್ರಖರತೆಯಿಂದಾಗಿ ಜನರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆ ಕಂಡು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ 14 ಬೆಡ್‌ಗಳುಳ್ಳ ಹೀಟ್ ಸ್ಟ್ರೋಕ್‌ ವಾರ್ಡ್ ತೆರೆಯಲಾಗಿದೆ. ಈವರೆಗೂ ಯಾವುದೇ ಗಂಭೀರ ಪ್ರಕರಣಗಳು ದಾಖಲಾಗಿಲ್ಲ.

ಡಾ. ಈಶ್ವರ ಹಸಬಿ, ಕೆಎಂಸಿಆರ್‌ಐನ ಅಧೀಕ್ಷಕರು

ಈ ವರ್ಷ ಬಿಸಿಲಿನ ಪ್ರಖರತೆ ಹೆಚ್ಚಳವಾಗಿದ್ದು ಆದಷ್ಟು ಇಳಿ ಹೊತ್ತಿನಲ್ಲೇ ಹೊರಗೆ ಬರುವುದು ಸೂಕ್ತ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು. ಶುದ್ಧನೀರು, ಮಜ್ಜಿಗೆ, ಎಳನೀರು ಸೇರಿದಂತೆ ತಂಪು ಪಾನೀಯ ಹೆಚ್ಚು ಸೇವಿಸಬೇಕು. ಚಿಟಗುಪ್ಪಿ ಆಸ್ಪತ್ರೆಯಲ್ಲಿ 6 ಬೆಡ್‌ಗಳುಳ್ಳ ವಾರ್ಡ್‌ ಮಾಡಲಾಗಿದೆ.

ಡಾ. ಶ್ರೀಧರ ದಂಡಪ್ಪನವರ, ಮುಖ್ಯ ವೈದ್ಯಾಧಿಕಾರಿ, ಚಿಟಗುಪ್ಪಿ ಆಸ್ಪತ್ರೆ