*   ಆಗಾಗ ಸುರಿದ ತುಂತುರು ಮಳೆ, ಮೋಡದ ವಾತಾವರಣ*  ತೇವಾಂಶದ ಕಾರಣ ಹೆಚ್ಚಾಗದ ತಾಪಮಾನ*  ವಾತಾವರಣದಲ್ಲಿ ತೇವಾಂಶ ಹೆಚ್ಚಳ, ವೇಗ ಕಳೆದುಕೊಂಡ ಗಾಳಿ 

ಬೆಂಗಳೂರು(ಏ.05):  ಕಳೆದ 15 ದಿನಗಳಿಂದ ರಾಜಧಾನಿಯಲ್ಲಿ ಆಗಾಗ ಸುರಿದ ತುಂತುರು ಮಳೆ(Rain), ಮೋಡದ ವಾತಾವರಣ, ತೇವಾಂಶ ಕಾರಣದಿಂದ ಬಿಸಿಲಿನ ತಾಪ(ಉಷ್ಣಾಂಶ) ಹೆಚ್ಚದಿದ್ದರೂ ಸೆಖೆ ಮಾತ್ರ ಜನರನ್ನು ಹೈರಾಣು ಮಾಡಿದೆ. ಸೆಖೆಯ ಹೊಡೆತಕ್ಕೆ ಬೇವರಿನಿಂದ ತೊಯ್ದು ತೊಪ್ಪೆಯಾಗುವ ಸ್ಥಿತಿ ಹೊರಗೆ ಓಡಾಡುವ ಸಾಮಾನ್ಯ ಜನರದ್ದಾಗಿದೆ.

ಮಾರ್ಚ್‌ನಲ್ಲೇ ಈ ಪರಿ ಸೆಖೆ ಇದ್ದರೆ ಇನ್ನು ವಿಪರೀತ ಬಿಸಿಲಿರುವ ಏಪ್ರಿಲ್‌, ಮೇ ಕಳೆಯೋದು ಹೇಗೆ ಎಂಬ ಚಿಂತೆ ಪ್ರಾರಂಭವಾಗಿದೆ. ಮಾರ್ಚ್‌ ತಿಂಗಳ ತಿಂಗಳ ದೈನಂದಿನ ತಾಪಮಾನ ವಾಡಿಕೆಯ ಮಾದರಿಯೇ ಇದ್ದರೂ ಮಾರ್ಚ್‌ ತಿಂಗಳ ಎರಡನೇ ಭಾಗದಲ್ಲಿ ಭಾರಿ ಸೆಖೆಯ ವಾತಾವರಣ ನೆಲೆಸಿತ್ತು.

Body Temperature: ಹೆಂಗಸರಿಗಿಂತ ಗಂಡಸರಿಗೆ ಸೆಖೆ ಹೆಚ್ಚಂತೆ, ಯಾಕೆ ಗೊತ್ತಾ?

ಮಾರ್ಚ್‌ ತಿಂಗಳ ಮೊದಲ ಒಂಬತ್ತು ದಿನ ನಗರದ ಗರಿಷ್ಠ ಉಷ್ಣತೆ(Temperature) 32 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲೇ ಇತ್ತು. ಅದೇ ರೀತಿ ಮೊದಲ 14 ದಿನದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಒಳಗೆ ದಾಖಲಾಗಿತ್ತು. ಮಾ.30ಕ್ಕೆ 35.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದೆ ತಿಂಗಳ ಗರಿಷ್ಠ ತಾಪಮಾನ.

2012ರಿಂದ 2021ರ ಅವಧಿಯಲ್ಲಿ ಮಾರ್ಚ್‌ ತಿಂಗಳಲ್ಲಿ ದಾಖಲಾದ ಎರಡನೇ ಕನಿಷ್ಠ ತಾಪಮಾನವಿದು. 2018ರ ಮಾಚ್‌ರ್‍ 24ಕ್ಕೆ 34.1 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿತ್ತು. ಮಾರ್ಚ್‌ 3ಕ್ಕೆ 15.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು ನಗರದ ಕನಿಷ್ಠ ತಾಪಮಾನ. ಕಳೆದ ಹತ್ತು ವರ್ಷದಲ್ಲಿ 2017ರ ಮಾಚ್‌ರ್‍ 2ಕ್ಕೆ 15.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅಂದರೆ ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕಡಿಮೆ ಇತ್ತು.
ಈ ವರ್ಷದ ಮಾರ್ಚ್‌ನ ಸರಾಸರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33.08 ಡಿಗ್ರಿ ಸೆಲಿಯಸ್‌ ಮತ್ತು 20.38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕಳೆದ 42 ವರ್ಷಗಳಿಂದ ಮಾರ್ಚ್‌ ತಿಂಗಳ ಗರಿಷ್ಠ ಮತ್ತು ಕನಿಷ್ಠ ಸರಾಸರಿ ಉಷ್ಣತೆ ಕ್ರಮವಾಗಿ 33.1 ಡಿಗ್ರಿ ಸೆಲ್ಸಿಯಸ್‌ ಮತ್ತು 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು ತಾಪಮಾನದಲ್ಲಿ ವಾಡಿಕೆಯಷ್ಟೆಇತ್ತು.

ಮಾ.20ರಂದು ನಗರದ ಹಲವೆಡೆ ಜೋರು ಮಳೆ ಸುರಿದಿತ್ತು. ಉಳಿದಂತೆ ಎರಡ್ಮೂರು ದಿನ ತುಂತುರು, ಹಗುರ ಮಳೆಯಾಗಿತ್ತು. ಬೆಂಗಳೂರು(Bengaluru) ನಗರ ಮಾಪನದಲ್ಲಿ ಮಾರ್ಚ್‌ ತಿಂಗಳಲ್ಲಿ ಒಟ್ಟು 1.5 ಸೆಂ.ಮೀ ಮಳೆ ದಾಖಲಾಗಿದೆ.

ಮಾರ್ಚ್‌ನ ದ್ವಿತೀಯ ಭಾಗದ ಹೆಚ್ಚಿನ ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ, ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಟ್ರಫ್‌ಗಳಿಂದಾಗಿ ವಾತಾವರಣದಲ್ಲಿನ ತೇವಾಂಶ ಹೆಚ್ಚಾಗಿತ್ತು. ಗಾಳಿ ವೇಗ ಕಳೆದುಕೊಂಡಿತ್ತು. ಇದರ ಜೊತೆಗೆ ಮಳೆ ಕಡಿಮೆ ಆದಕಾರಣ, ನಗರದ ಜನತೆ ನೆತ್ತಿ ಸುಡುವ ಬಿಸಿಲಿಗಿಂತಲೂ ಮೈ ಅಂಟುವ ಸೆಖೆಯನ್ನು ಅನುಭವಿಸುವಂತಾಯಿತು.

Bengaluru: ಸುಡು ಸುಡು ಬಿಸಿಲಿಗೆ ತತ್ತರಿಸಿದ ಬೆಂಗ್ಳೂರಿನ ಜನತೆ: ಮತ್ತಷ್ಟು ಧಗೆ ಹೆಚ್ಚಳ?

ತೇವಾಂಶ ಹೆಚ್ಚಿದ್ದಷ್ಟುಧಗೆ ಅನುಭವ!

ತೇವಾಂಶ ಹೆಚ್ಚಿದ್ದಷ್ಟು ಧಗೆಯ ಅನುಭವ ಆಗುತ್ತದೆ. ಮಾರ್ಚ್‌ನಲ್ಲಿ ಶೇ.70ಕ್ಕಿಂತ ಹೆಚ್ಚು ತೇವಾಂಶ ದಾಖಲಾಗಿತ್ತು. ತುಂತುರು ಮಳೆ ಅಥವಾ ಒಂದು ಸೆಂಟಿ ಮೀಟರ್‌ಗಿಂತ ಕಡಿಮೆ ಮಳೆಯಾದರೆ ವಾತಾವರಣದಲ್ಲಿನ ತೇವಾಂಶ ಹೆಚ್ಚುತ್ತದೆ. ಇದರೊಂದಿಗೆ ಮೋಡ ಕವಿದರೆ ವಾತಾವರಣ ಬಿಸಿಯಾಗುತ್ತದೆ. ಇದರಿಂದ ರಾತ್ರಿ ಅಥವಾ ಬೆಳಗ್ಗೆಯ ಉಷ್ಣತೆ ಹೆಚ್ಚು ಇಳಿಯುವುದಿಲ್ಲ. ಹಾಗಾಗಿ ರಾತ್ರಿ ಮತ್ತು ಬೆಳಗ್ಗೆಯೂ ಸೆಖೆ ಹೆಚ್ಚಾಗುತ್ತದೆ. ಇದೇ ವಾತಾವರಣ ಮುಂದುವರಿದಿದೆ ಎಂದು ಹವಾಮಾನ ತಜ್ಞರು ವಿವರಿಸುತ್ತಾರೆ.

ಈ ತಿಂಗಳು ಕಾದಿದೆ ಸೆಖೆ ಕಾಟ

ಭಾರತೀಯ ಹವಾಮಾನ ಇಲಾಖೆ(Indian Meteorological Department) ಮಳೆಯ ಮುನ್ಸೂಚನೆಯನ್ನು ನೀಡಿದಂತೆ ಬಿಸಿಲು, ಚಳಿಯ ದೀರ್ಘಕಾಲೀನ ಮುನ್ಸೂಚನೆಯನ್ನು ನೀಡುವುದಿಲ್ಲ. ಆದರೆ ಸದ್ಯದ ಅಂದಾಜಿನ ಪ್ರಕಾರ ಏಪ್ರಿಲ್‌ನಲ್ಲಿ ನಗರದ ತಾಪಮಾನ ವಾಡಿಕೆಯ ಕ್ರಮದಲ್ಲೇ ಇರುವ ಸಾಧ್ಯತೆ ಹೆಚ್ಚಿದ್ದು, ಸೆಖೆ ಜಾಸ್ತಿ ಇರುವ ಸಂಭವವಿದೆ. ಮಂಗಳವಾರ ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34.6 ಡಿಗ್ರಿ ಸೆಲ್ಸಿಯಸ್‌ ಮತ್ತು 22 ಡಿಗ್ರಿ ಸೆಲ್ಸಿಯಸ್‌ ಇರುವ ಸಂಭವವಿದೆ. ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ.