ಗದಗ(ಫೆ.04):  ಜೀತ ಪದ್ಧತಿ ಸಮಾಜಕ್ಕೆ ಅಂಟಿದ ಅನಿಷ್ಟ, ಅದನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಸರ್ವೋಚ್ಚ ನ್ಯಾಯಾಲಯವೇ ಸೂಚಿಸಿ ಹಲವಾರು ವರ್ಷವೇ ಗತಿಸಿದ್ದರೂ ಅಂತಹ ಅನಿಷ್ಟ ಪದ್ಧತಿಯ ಮೂಲಕ ಕಾರ್ಮಿಕರಿಂದ ಕೆಲಸ ಪಡೆಯುತ್ತಿದ್ದ ಪ್ರಕರಣ ಗದುಗಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ಕೆಲಸದಲ್ಲಿ ಗುತ್ತಿಗೆದಾರನೋರ್ವ ಕಾರ್ಮಿಕರನ್ನು ಜೀತದಾಳುಗಳಾಗಿ ಇಟ್ಟುಕೊಂಡ ಪ್ರಕರಣ ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ 2 ದಿನಗಳ ಹಿಂದೆ ದಾಳಿ ನಡೆಸಿದ ವೇಳೆಯಲ್ಲಿ ಪತ್ತೆಯಾಗಿದೆ.

ತೆಲಂಗಾಣ ರಾಜ್ಯದಿಂದ 28ಕ್ಕೂ ಹೆಚ್ಚು ಕಾರ್ಮಿಕರನ್ನು ಕಟ್ಟಡ ಕೆಲಸಕ್ಕಾಗಿ ಹಲವು ತಿಂಗಳುಗಳ ಹಿಂದೆಯೇ ಗುತ್ತಿಗೆ ಪಡೆದ ವ್ಯಕ್ತಿ, ಅಲ್ಲಿನ ಓರ್ವ ವ್ಯಕ್ತಿಯ ಮೂಲಕ ಗದಗ ನಗರಕ್ಕೆ ಕರೆತಂದು ಅವರಿಂದ ಕೆಲಸ ಪಡೆದಿದ್ದಾನೆ. ಆದರೆ ಅವರಿಗೆ ಸೂಕ್ತವಾದ ವೇತನ, ಊಟ ವಸತಿ ಸೌಲಭ್ಯ ನೀಡದೇ ನಿಮ್ಮನ್ನು ಹಣ ಕೊಟ್ಟೇ ಕರೆದುಕೊಂಡು ಬಂದಿದ್ದೇವೆ, ಅದು ಪೂರ್ಣ ಮುಟ್ಟುವವರೆಗೆ ಎಲ್ಲಿಯೂ ಹೋಗುವಂತಿಲ್ಲ ಎಂದು ತಾಕೀತು ಮಾಡಿ ಅವರಿಂದ ಕೆಲಸ ಪಡೆಯುತ್ತಿದ್ದು, ಇದು ಪರೋಕ್ಷವಾಗಿ ಜೀತ ಪದ್ಧತಿಯೇ ಆಗಿದೆ.

ಶಿರಹಟ್ಟಿ: ಲಂಚದ ಸಮೇತ ಎಸಿಬಿ ಬಲೆಗೆ ಬಿದ್ದ ಪಪಂ ನೌಕರ

ಈ ವಿಷಯ ಗದಗ ಉಪವಿಭಾಗಾಧಿಕಾರಿ ಗಮನಕ್ಕೆ ಬಂದಿದ್ದು, ಅವರು ದಾಳಿ ಮಾಡಿ ಅಲ್ಲಿದ್ದ 28 ಜನ ಕೂಲಿ ಕಾರ್ಮಿಕರನ್ನು ರಕ್ಷಿಸಿ ಕರೆ ತಂದು ದೇವರಾಜ ಅರಸು ಭವನದಲ್ಲಿ ಆಶ್ರಯ ನೀಡಿದ್ದಾರೆ. ಈ ಪ್ರಕರಣದಲ್ಲಿ ಹತ್ತಾರು ರೀತಿಯ ಸಂಶಯಗಳು ಬಲವಾಗಿ ಕಾಡುತ್ತಿದ್ದು, ಇದುವರೆಗೂ ಕಾರ್ಮಿಕರನ್ನು ಕರೆತಂದ ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಿಸಿಲ್ಲ, ಗುತ್ತಿಗೆದಾರನ ಹೆಸರು ಬಹಿರಂಗಪಡಿಸುತ್ತಿಲ್ಲ. ಈ ಬಗ್ಗೆ ಗದಗ ಗ್ರಾಮೀಣ ಸಿಪಿಐ ಅವರಿಗೆ ಮಾಹಿತಿಯೇ ಇಲ್ಲವಂತೆ. ಕಾರ್ಮಿಕ ಅಧಿಕಾರಿಗಳಿಗೆ ಇದ್ಯಾವುದು ನಡೆದಿರುವ ಬಗ್ಗೆಯೇ ಗೊತ್ತಿಲ್ಲವಂತೆ. ಜಿಮ್ಸ್‌ ನಿರ್ದೇಶಕರನ್ನು ಪ್ರಶ್ನಿಸಿದರೆ ಈ ರೀತಿಯ ಪ್ರಕರಣ ನಡೆದಿರುವುದೇ ನನ್ನ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ. ಇದೆಲ್ಲಾ ಏನು? ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸದೇ ಗುತ್ತಿಗೆದಾರನ ಪರವಾಗಿ ನಿಂತರಾ ಎನ್ನುವ ಸಂಶಯ ಬಲವಾಗಿ ಕಾಡುತ್ತಿದೆ.

ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ ಕಾಮಗಾರಿಯಲ್ಲಿ ಹಲವು ಜನ ತೆಲಂಗಾಣ ರಾಜ್ಯದ ಕಾರ್ಮಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿತ್ತು. ಸ್ಥಳಕ್ಕೆ ಭೇಟಿ ಪರಿಶೀಲಿಸಿದಾಗ ಅಲ್ಲಿ 28 ಜನ ಕಾರ್ಮಿಕ ಅತ್ಯಂತ ಕೆಟ್ಟಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರು. ಕೂಡಲೇ ಅವರನ್ನು ರಕ್ಷಣೆ ಮಾಡಿ ಬೆರೆಡೆ ಆಶ್ರಯ ನೀಡಲಾಗಿತ್ತು. ಬುಧವಾರ ರಾತ್ರಿ ಮರಳಿ ಅವರ ರಾಜ್ಯಕ್ಕೆ ಕಳಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ ಎಂದು ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ತಿಳಿಸಿದ್ದಾರೆ.