ಸೋರುತಿರೋ ತಹಸೀಲ್ದಾರ್ ಕಚೇರಿಗೆ ತಾಡಪಾಲ್ ಹೊದಿಕೆ; ನೀರು ಹೊರಹಾಕೋದೇ ಸಿಬ್ಬಂದಿ ಕೆಲಸ!
ನಿರಂತರ ಮಳೆಯಿಂದ ಇಲ್ಲಿಯ ತಹಸೀಲ್ದಾರ್ ಕಾರ್ಯಾಲಯದಲ್ಲಿ ಇರುವ ಭೂದಾಖಲೆ ವಿಭಾಗ ಸೋರುತ್ತಿದ್ದು, ತಾಡಪಾಲ್ ಕಟ್ಟಿಐದಾರು ಲಕ್ಷಕ್ಕೂ ಹೆಚ್ಚಿನ ಕಂದಾಯ ದಾಖಲೆಗಳನ್ನು ಸಂರಕ್ಷಿಸಲು ಸಿಬ್ಬಂದಿ ಹೆಣಗಾಡುತ್ತಿದ್ದಾರೆ. ಗೋಡೆ, ಮೇಲ್ಛಾವಣಿಯಿಂದ ಸೋರುವ ನೀರನ್ನು ಹೊರ ಹಾಕುವುದೇ ಸಿಬ್ಬಂದಿ ಕೆಲಸವಾಗಿದೆ.
ವಿಶೇಷ ವರದಿ
ಹಾವೇರಿ (ಜು.27) : ನಿರಂತರ ಮಳೆಯಿಂದ ಇಲ್ಲಿಯ ತಹಸೀಲ್ದಾರ್ ಕಾರ್ಯಾಲಯದಲ್ಲಿ ಇರುವ ಭೂದಾಖಲೆ ವಿಭಾಗ ಸೋರುತ್ತಿದ್ದು, ತಾಡಪಾಲ್ ಕಟ್ಟಿಐದಾರು ಲಕ್ಷಕ್ಕೂ ಹೆಚ್ಚಿನ ಕಂದಾಯ ದಾಖಲೆಗಳನ್ನು ಸಂರಕ್ಷಿಸಲು ಸಿಬ್ಬಂದಿ ಹೆಣಗಾಡುತ್ತಿದ್ದಾರೆ. ಗೋಡೆ, ಮೇಲ್ಛಾವಣಿಯಿಂದ ಸೋರುವ ನೀರನ್ನು ಹೊರ ಹಾಕುವುದೇ ಸಿಬ್ಬಂದಿ ಕೆಲಸವಾಗಿದೆ.
ಮಂಗಳವಾರವಷ್ಟೇ ಇಲ್ಲಿಯ ಜಿಲ್ಲಾಸ್ಪತ್ರೆ ಸೋರುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಚಾರವಾಗಿ ಆರೋಗ್ಯ ಇಲಾಖೆ ಎಇಇ ಒಬ್ಬರನ್ನು ಸ್ಥಳದಲ್ಲೇ ಅಮಾನತುಗೊಳಿಸಿ ಆದೇಶಿಸಿದ್ದರು. ಇದೀಗ ತಹಸೀಲ್ದಾರ್ ಕಚೇರಿ ಇರುವ ಮಿನಿ ವಿಧಾನಸೌಧವೇ ಸೋರುತ್ತಿರುವುದು ಬೆಳಕಿದೆ ಬಂದಿದೆ. ಮೊದಲ ಅಂತಸ್ತಿನಲ್ಲಿರುವ ಭೂದಾಖಲೆಗಳ ವಿಭಾಗದಲ್ಲಿ ಕಳೆದ ಒಂದು ವಾರದಿಂದ ಮಳೆ ನೀರು ಸೋರುತ್ತಿದೆ.
ಸೋರುತಿಹುದು ಮನೆಯ ಮಾಳಿಗೆ; ಮಲಗಲು ಗುಡಿ ಗುಂಡಾರವೇ ಗತಿ!
ಮಳೆ ನೀರಿನಿಂದ ಕಂದಾಯ ದಾಖಲೆಗಳನ್ನು ರಕ್ಷಿಸಲು ತಾಡಪಾಲ್ ಕಟ್ಟಲಾಗಿದೆ. ತಾಡಪಾಲ್‌ನಿಂದ ಇಳಿಯುವ ನೀರನ್ನು ಸಂಗ್ರಹಿಸಲು ಅಲ್ಲಲ್ಲಿ ಬಕೆಟ್ ಇಡಲಾಗಿದೆ. ರಾತ್ರಿ ಇಟ್ಟು ಹೋಗುವ ಬಕೆಟ್ ಬೆಳಗ್ಗೆ ಕಚೇರಿಗೆ ಬರುವ ವೇಳೆಗೆ ತುಂಬಿ ನೀರು ಹೊರ ಚೆಲ್ಲಿರುತ್ತದೆ. ಆ ನೀರನ್ನು ಹೊರ ಹಾಕಲು ಸಿಬ್ಬಂದಿ ಸಾಹಸ ಪಡುತ್ತಿದ್ದಾರೆ.
5ಲಕ್ಷಕ್ಕೂ ಅಧಿಕ ದಾಖಲೆ:
ಹಾವೇರಿ ನಗರ ಮತ್ತು ಗ್ರಾಮೀಣ ಭಾಗಗಳ ಲಕ್ಷಾಂತರ ಕುಟುಂಬಗಳ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಇಲ್ಲಿವೆ. ಬ್ರಿಟಿಷ್ ಕಾಲದಿಂದ ಹಿಡಿದು ಇಲ್ಲಿಯವರೆಗಿನ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಭೂದಾಖಲೆ ಸಂರಕ್ಷಿಸಲಾಗಿದೆ. ಆರ್‌ಟಿಸಿ ಉತಾರ್, ಕಂದಾಯ ನಕಾಶೆ, ಪೋಡಿ, ಬರಕಾಸ್ತು ಪೋಡಿ, ಬಿನ್ ಶೇತ್ಕಿ ಹೀಗೆ ಸುಮಾರು 20ಕ್ಕೂ ಹೆಚ್ಚಿನ ರೀತಿಯ 5 ಲಕ್ಷಕ್ಕೂ ಅಧಿಕ ದಾಖಲೆಗಳು ಇಲ್ಲಿವೆ. ನಾಲ್ಕೈದು ವರ್ಷಗಳಿಂದ ಮಳೆಗಾಲದಲ್ಲಿ ನೀರು ಸೋರುತ್ತಿದೆ. ಆದರೂ ದುರಸ್ತಿ ಮಾಡದ್ದರಿಂದ ಈ ಮಳೆಗಾಲದಲ್ಲಿ ಸಮಸ್ಯೆ ಬಿಗಡಾಯಿಸಿದೆ. ಹಸಿಯಾದ ನೆಲ, ನೀರಿಳಿಯುವ ಗೋಡೆ ಮಧ್ಯೆದಿಂದ ತೇವಗೊಂಡ ಕಚೇರಿಯಲ್ಲಿ ಇಡೀ ದಿನ ಸಿಬ್ಬಂದಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ.
ಮೇಲೆ ಕಟ್ಟಿರುವ ತಾಡಪಾಲಿನಲ್ಲಿ ನೀರು ಸಂಗ್ರಹವಾಗಿ ಒಂದೇ ಕಡೆ ಬೀಳುವಂತೆ ಮಾಡಲು ಅದಕ್ಕೆ ರಂಧ್ರ ಮಾಡಿದ್ದಾರೆ. ಅಲ್ಲಿಂದ ಬಕೆಟ್‌ನಲ್ಲಿ ನೀರು ಬಿದ್ದಿದ್ದನ್ನು ಆಗಾಗ ಹೊರ ಚೆಲ್ಲುವುದೇ ಕೆಲ ಸಿಬ್ಬಂದಿಗಳ ಕೆಲಸವಾಗಿದೆ. ನಮಗೆ ಕುಳಿತುಕೊಳ್ಳಲೂ ಜಾಗವಿಲ್ಲದಂತಾಗಿದೆ. ಕುರ್ಚಿ ಮೇಲೂ ನೀರು ಸೋರುತ್ತಿದೆ. ದಾಖಲೆಗಳು ಹಾಳಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಅದಕ್ಕಾಗಿ ಪ್ಲಾಸ್ಟಿಕ್ ಹಾಕಿ ಸಂರಕ್ಷಿಸಿದ್ದೇವೆ ಎಂದು ಕಚೇರಿಯ ಸಿಬ್ಬಂದಿಯೊಬ್ಬರು ಹೇಳಿದರು.
ಕಳಪೆ ಕಾಮಗಾರಿ ಆರೋಪ:
15 ವರ್ಷಗಳ ಹಿಂದೆ ಕಟ್ಟಿದ ತಹಸೀಲ್ದಾರ್ ಕಚೇರಿ ಇಷ್ಟುಬೇಗ ಶಿಥಿಲಗೊಂಡಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬ್ರಿಟಿಷರ ಕಾಲದ ಅನೇಕ ಕಟ್ಟಡಗಳು ಇನ್ನೂ ಸದೃಢವಾಗಿದ್ದರೂ ಇತ್ತೀಚೆಗೆ ಕಟ್ಟಿದ ಸರ್ಕಾರಿ ಕಟ್ಟಡಗಳು ಹಾಳಾಗುತ್ತಿವೆ. ತಹಸೀಲ್ದಾರ್ ಕಚೇರಿ ಶಿಥಿಲಗೊಂಡಿದ್ದು, ಆದಷ್ಟುಬೇಗ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಭೂಮಾಪನ ಇಲಾಖೆಯಲ್ಲಿನ ದಾಖಲೆಗಳು ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹುಬ್ಬಳ್ಳಿ ಆಗ್ರಹಿಸಿದ್ದಾರೆ.
ಸೋರುವ ಶಾಲೆ: ಛತ್ರಿ ಹಿಡಿದೇ ಪಾಠ ಕೇಳುವ ವಿದ್ಯಾರ್ಥಿಗಳು!
ತಹಸೀಲ್ದಾರ್ ಕಾರ್ಯಾಲಯದ ಮೇಲ್ಭಾಗದಲ್ಲಿರುವ ಭೂ ದಾಖಲೆ ವಿಭಾಗದಲ್ಲಿ ಮಳೆ ನೀರು ಸೋರುತ್ತಿರುವುದು ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ .ಮೇಲ್ಛಾವಣಿ ಸೋರದಂತೆ ಮೇಲ್ಭಾಗದಲ್ಲಿ ಶೆಡ್ ಹಾಕುವಂತೆ ಸೂಚಿಸಿದ್ದೇನೆ.
ರಘುನಂದನ ಮೂರ್ತಿ, ಜಿಲ್ಲಾಧಿಕಾರಿ