Udupi : ಮಣ್ಣಿನ ರಕ್ಷಣೆಯ ಜಾಗೃತಿ ಮೂಡಿಸಲು ಸೈಕಲ್ ನಲ್ಲಿ ಯುವಕನ ಭಾರತ ಯಾತ್ರೆ
ಮಣ್ಣಿನ ರಕ್ಷಣೆಯ ಕುರಿತು ಜಾಗೃತಿ ಮಾಡುವ ಸಲುವಾಗಿ ಯುವಕನೊಬ್ಬ ಭಾರತ ಯಾತ್ರೆ ಕೈಗೊಂಡಿದ್ದಾರೆ. ಇನ್ನೂ 17ರ ಹರೆಯದ ಈ ಯುವಕ ಈಗಾಗಲೇ ಸಾವಿರಾರು ಕಿಲೋಮೀಟರ್ ಸಂಚರಿಸಿ ಉಡುಪಿಗೆ ಬಂದು ತಲುಪಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಸೆ.20): ಮಣ್ಣಿನ ರಕ್ಷಣೆಯ ಕುರಿತು ಜಾಗೃತಿ ಮಾಡುವ ಸಲುವಾಗಿ ಯುವಕನೊಬ್ಬ ಭಾರತ ಯಾತ್ರೆ ಕೈಗೊಂಡಿದ್ದಾರೆ. ಪಶ್ಚಿಮ ಬಂಗಾಳದ ರಾಜಧಾನಿಯಾಗಿರುವ ಕೊಲ್ಕತ್ತಾದ ನಿವಾಸಿಯಾಗಿರುವ ಈತ ಸೈಕಲ್ ಏರಿ ದೇಶ ಸುತ್ತುತ್ತಾ ದಕ್ಷಿಣ ಭಾರತ ತಲುಪಿದ್ದಾರೆ. ಇನ್ನೂ 17ರ ಹರೆಯದ ಈ ಯುವಕ ಈಗಾಗಲೇ ಸಾವಿರಾರು ಕಿಲೋಮೀಟರ್ ಸಂಚರಿಸಿ, ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಗೆ ಬಂದಿದ್ದಾರೆ. ಮಣ್ಣಿನ ರಕ್ಷಣೆಗಾಗಿ ಸದ್ಗುರು ನೇತೃತ್ವದ ಈಶಾ ಫೌಂಡೇಶನ್ ದೇಶಾದ್ಯಂತ ಅಭಿಯಾನ ನಡೆಸಿತ್ತು. ಸದ್ಗುರು ಅವರಿಂದ ಪ್ರೇರಣೆ ಪಡೆದ ಕೊಲ್ಕತ್ತಾದ ಸಾಹಿಲ್ ಝಾ ದೇಶ ಸಂಚಾರ ಆರಂಭಿಸಿದ್ದಾರೆ. ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ಸಾಹಿಲ್, ಸೈಕಲ್ ಸವಾರಿಯ ಮೂಲಕ ದೇಶಾದ್ಯಂತ ಜಾಗೃತಿ ಮೂಡಿಸುತ್ತಾ ಭಾರತ ದರ್ಶನ ಮಾಡುತ್ತಿದ್ದಾರೆ. ಮೇ ಒಂದರಂದು ಪಶ್ಚಿಮ ಬಂಗಾಳದಿಂದ ಹೊರಟ ಸೈಕಲ್ ಜಾಥಾ, ಈಗಾಗಲೇ 25,000 ಕಿಲೋಮೀಟರ್ ಕ್ರಮಿಸಿದೆ. ಒಡಿಸ್ಸಾ ,ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ನಿರಂತರ ಯಾತ್ರೆಯನ್ನು ಮುಗಿಸಿದ ಬಳಿಕ ಇದೀಗ ಸಾಹಿಲ್ ಕರ್ನಾಟಕ ತಲುಪಿದ್ದಾರೆ.ಬೆಂಗಳೂರು, ಮಂಗಳೂರು ಸಂಚರಿಸಿ ಇದೀಗ ಉಡುಪಿಗೆ ಆಗಮಿಸಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ದಿನ ಪ್ರವಾಸ ನಡೆಸಿ ಮಣ್ಣಿನ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಉಡುಪಿಯಿಂದ ಕುಂದಾಪುರ, ಕಾರವಾರ ಮೂಲಕ ಗೋವಾಗೆ ತೆರಳುವ ಇರಾದೆ ಹೊಂದಿದ್ದಾರೆ.
ಸಾಹಿಲ್ ಅವರು ಏಕಾಂಗಿಯಾಗಿ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಒಟ್ಟು ಎರಡು ವರ್ಷಗಳ ಕಾಲ ಅವರ ಈ ಸುಧೀರ್ಘ ಯಾತ್ರೆ ನಡೆಯಲಿದೆ. ಸದ್ಯ 6 ತಿಂಗಳ ಯಾತ್ರೆ ಪೂರೈಸಿದ್ದು ಇನ್ನೂ 18 ತಿಂಗಳು ದೇಶ ಸುತ್ತುವುದು ಬಾಕಿ ಇದೆ.
ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಗುಜರಾತ್ ಸಹಿತ ದೇಶದ ಬಾಕಿ ಉಳಿದ ಎಲ್ಲಾ ರಾಜ್ಯಗಳನ್ನು ಸಂದರ್ಶಿಸಿ ಬಳಿಕ ಕೊಲ್ಕತ್ತಾದಲ್ಲಿ ಈ ಭಾರತ ದರ್ಶನ ಯಾತ್ರೆ ಸಮಾಪನಗೊಳ್ಳಲಿದೆ.
ಉಡುಪಿ ಸಂಚಾರದ ವೇಳೆ ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಆನಂದತೀರ್ಥ ವಿದ್ಯಾಲಯ, ಇನಾಯತ್ ಆರ್ಟ್ ಗ್ಯಾಲರಿ ಮೊದಲಾದ ಸ್ಥಳಗಳಿಗೆ ಸಾಹಿಲ್ ಭೇಟಿ ನೀಡಿ ಮಣ್ಣಿನ ರಕ್ಷಣೆಯ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ.
Sadhguru Exclusive Interview; ಸಾವಯವ ಕೃಷಿ ಎಂಬುದೇ ಇಲ್ಲ
ಸಾಹೀಲ್ ಝಾ ಈ ಯಾತ್ರೆಯ ಬಗ್ಗೆ ಸವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡಲಾಗುತ್ತಿದೆ. ಸ್ಥಳೀಯವಾಗಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇವರ ಈ ಯಾತ್ರೆಗೆ ಸಹಕಾರ ನೀಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಜೂನ್ ತಿಂಗಳ ನಂತರ ಮಳೆಗಾಲ ಪ್ರಾರಂಭವಾಗಿದ್ದರಿಂದ ಸೈಕಲ್ ಸವಾರಿ ನಡೆಸುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎಂದು ಸಾಹಿಲ್ ಹೇಳುತ್ತಾರೆ.
Save The Soil: ಸ್ಲೊವೇನಿಯಾಕ್ಕೆ ತಲುಪಿದ ಸದ್ಗುರು: ಮಣ್ಣಿನ ರಕ್ಷಣೆ ಜಾಗೃತಿ ಅಭಿಯಾನ
ಕೇರಳ ಭಾಗದಲ್ಲಿ ಯಾತ್ರೆ ನಡೆಸುವುದು ಸ್ವಲ್ಪ ದಿನ ಮಳೆಯಿಂದಾಗಿ ಕಷ್ಟವಾಗಿತ್ತು, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಹವಾಮಾನ ಅತ್ಯುತ್ತಮವಾಗಿದ್ದು, ಆಹಾರ ಖಾರವಾಗಿದ್ದರೂ, ಜನರು ತುಂಬಾ ಸಿಹಿಯಾಗಿದ್ದಾರೆ ಎಂದು ಸಾಹಿಲ್ ಸಂತೋಷ ಹಂಚಿಕೊಂಡಿದ್ದಾರೆ.