ಹುಬ್ಬಳ್ಳಿ(ಜು.31): ಇಲ್ಲಿನ ಸೆಂಟ್‌ ಅಂತೋನಿ ಪಬ್ಲಿಕ್‌ ಸ್ಕೂಲ್‌ ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು, ರಾಜ್ಯದಲ್ಲಿಯೇ ಮೊದಲು ಆಗ್‌ಮೆಂಟೆಡ್‌ ರಿಯಾಲಿಟಿ ಟೆಕ್ನಾಲಜಿ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗಿದೆ ಎಂದು ಶಾಲೆಯ ಸಂಸ್ಥಾಪಕ ಡಾ. ಕೆ.ಎ. ಪ್ರಸಾದ ತಿಳಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 1989ರಲ್ಲಿ ಸಿದ್ದೇಶ್ವರ ಪಾರ್ಕ್‌ನಲ್ಲಿ ಸ್ಥಾಪನೆಗೊಂಡ ಸೆಂಟ್‌ ಅಂತೋನಿ ಪಬ್ಲಿಕ್‌ ಸ್ಕೂಲ್‌ 30 ವರ್ಷದಿಂದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡುತ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಆಗದಂತೆ ಶಾಲೆಯ ಆಡಳಿತ ಮಂಡಳಿ ಎಚ್ಚರ ವಹಿಸಿತ್ತು. ಆಗ್‌ಮೆಂಟೆಡ್‌ ರಿಯಾಲಿಟಿ, ಲೈಟ್‌ ಬೋರ್ಡ್‌ ಟೆಕ್ನಾಲಜಿ ಹಾಗೂ 3ಡಿ ತಂತ್ರಾಂಶ ಬಳಸಿಕೊಂಡು ಆನ್‌ಲೈನ್‌ ಶಿಕ್ಷಣದಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದರು.

ಹುಬ್ಬಳ್ಳಿ-ಧಾರವಾಡ: ರ‍್ಯಾಪಿಡ್ ಟೆಸ್ಟ್‌ಗೆ ಬೆದರಿದ ವ್ಯಾಪಾರಿಗಳು!

ತಂತ್ರಜ್ಞಾನ ಬಳಸಿ ಪ್ರತಿದಿನವೂ ವಿಷಯಕ್ಕೆ ಅನುಸಾರವಾಗಿ ಶಿಕ್ಷಕರು ವಿಡಿಯೋ ಮೂಲಕ ಪರಿಣಾಮಕಾರಿಯಾಗಿ ಬೋಧನೆ ಮಾಡುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಗೊಂದಲ ಮೂಡಿದಲ್ಲಿ ಪರಿಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕಾಗಿಯೆ ಶಾಲೆಯಿಂದ 10 ಜನರ ಐಟಿ ತಂಡ ರೂಪಿಸಲಾಗಿತ್ತು. ಇವರು ಬೋಧನೆಗೆ ಅನುವಾಗುವಂತೆ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚುವಂತಾಗಿದೆ ಎಂದರು.

ಶಾಲೆಯ ಆಡಳಿತ ಮಂಡಳಿಯ ಶ್ರೇಯಾ ಸಾಲಿನ್‌, ಬೋಧನೆಯಲ್ಲಿ ಬಳಸಾಗುತ್ತಿರುವ ತಂತ್ರಜ್ಞಾನದ ಕುರಿತು ವಿವರ ನೀಡಿ, ಇವರು ತಂತ್ರಜ್ಞಾನ ಬಳಸಿ ಬೋಧನೆ ಮಾಡುತ್ತಿದ್ದೇವೆ. ಆದರೆ, ಇದಕ್ಕೆಂದು ನಾವು ಹೆಚ್ಚಿನ ಶುಲ್ಕವನ್ನು ಪಡೆದಿಲ್ಲ. ಹಿಂದೆ ಎಷ್ಟು ನಿಗದಿಯಾಗಿತ್ತೊ ಅಷ್ಟೇ ಮೊತ್ತ ಪಡೆದಿದ್ದೇವೆ. ಶಾಲೆ ಆರಂಭವಾದ ಬಳಿಕವೂ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದರು. ಈ ವೇಳೆ ಜಾಫರ್‌ ಧಾರವಾಡ, ಪ್ರಾಚಾರ್ಯ ಡೋಲಾ ದೇವಪ್ರಸಾದ, ಉಪಪ್ರಾಚಾರ್ಯೆ ರೂಪಾ ವಾಲಿ ಸೇರಿ ಇದ್ದರು.