ಈ ಶಿಕ್ಷಕರ ಮನೆಯೇ ಗ್ರಂಥಾಲಯ; ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 10:53 AM IST
Teachers runs a library of more than 2500 books in his home
Highlights

ಮನೆಯನ್ನೇ ಗ್ರಂಥಾಲಯ ಮಾಡಿದ ಮೇಸ್ಟ್ರು! ಕಾರಿಗನೂರು ಪ್ರೌಢಶಾಲೆ ಶಿಕ್ಷಕ ಸೈಯದ್ ಹುಸೇನದಿಂದ ಅಕ್ಷರ ದಾಸೋಹ | ಮನೆಯಲ್ಲಿಯೇ 2500 ಪುಸ್ತಕಗಳ ಸಂಗ್ರಹ

ಬಳ್ಳಾರಿ (ಸೆ. 05): ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಬೇಕು, ಸಾಹಿತ್ಯಾಸಕ್ತಿ ಮೂಡಬೇಕು ಎಂಬ ಉದ್ದೇಶದಿಂದ ಶಿಕ್ಷಕರೊಬ್ಬರು ಮನೆಯಲ್ಲಿಯೇ ಗ್ರಂಥಾಲಯವನ್ನು ತೆರೆದು ಅಕ್ಷರ ದಾಸೋಹ ಕಾರ್ಯ ಕೈಗೊಂಡು ಮಾದರಿಯೆನಿಸಿದ್ದಾರೆ.

ತಾಲೂಕಿನ ಕಾರಿಗನೂರಿನ ಪ್ರೌಢಶಾಲೆಯ ಶಿಕ್ಷಕ ಬಿ. ಸೈಯದ್ ಹುಸೇನ್ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ಕಂಪ್ಲಿಯ ಸತ್ಯನಾರಾಯಣ ಪೇಟೆಯಲ್ಲಿ ಮನೆ ಬಾಡಿಗೆಯಲ್ಲಿ ಸ್ವಲ್ಪ ಭಾಗವನ್ನು ಗ್ರಂಥಾಲಯಕ್ಕೆ ಮೀಸಲಿಟ್ಟು ಅಕ್ಷರ ದಾಸೋಹ ಕಾರ್ಯ ಕೈಗೊಂಡಿದ್ದಾರೆ. ಸೈಯದ್ ಹುಸೇನ್ ಅವರ ಪತ್ನಿ ಸುಬೇದಾ ಬೇಗಂ ಅವರು ಸಹ ಶಿಕ್ಷಕಿಯಾಗಿದ್ದು, ಅವರೊಂದಿಗೆ ಕೈ ಜೋಡಿಸಿ ಸಮಾಜಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಕ ದಂಪತಿಗಳಿಬ್ಬರು ತಮ್ಮ ಸಂಬಳದಲ್ಲಿ ಪುಸ್ತಕಗಳನ್ನು ಖರೀದಿಸಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಾಂಸ್ಕೃತಿಕ ವೇದಿಕೆ ಮುಖಾಂತರ ಸಾಮಾಜಿಕ ಸಾಂಸ್ಕೃತಿಕ, ಕಲೆ, ಸಾಹಿತ್ಯ, ಕ್ರೀಡೆ, ಧಾರ್ಮಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಪುಸ್ತಕ ಪ್ರೇಮಿಗಳ ಸಹಕಾರದೊಂದಿಗೆ ಪುಸ್ತಕಗಳನ್ನು ನೀಡಿ ಗೌರವಿಸುವ ಅಲ್ಪಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ಸೈಯದ್ ಹುಸೇನ್ ಅವರು ಸರ್ಕಾರದ ವಿವಿಧ ಯೋಜನೆಗಳಲ್ಲಿ ರಾಷ್ಟ್ರ ಮಟ್ಟದ ವರೆಗೂ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

1992 ರಲ್ಲಿ ಹೊಸಪೇಟೆ ತಾಲೂಕಿನ ನಲ್ಲಾಪುರ ಗ್ರಾಮದಲ್ಲಿ ಬಿ. ಸೈಯದ್ ಹುಸೇನ್ ಅವರು ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಅಲ್ಲಿಯೇ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಕಂಪ್ಲಿ ಪಟ್ಟಣದಲ್ಲಿ 15  ವರ್ಷ, ಸಂಡೂರು ತಾಲೂಕಿನ ದರೋಜಿಯಲ್ಲಿ 4 ವರ್ಷ ಸೇವೆ ಸಲ್ಲಿಸಿದರು. ಸದ್ಯ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಸುಮಾರು 26 ವರ್ಷಗಳಿಂದ ಶಿಕ್ಷಕರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಿ. ಸೈಯದ್ ಹುಸೇನ್ ಅವರು 1970 ರ ಜೂನ್ 1 ರಂದು ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಾವಿಹಳ್ಳಿ ಜಂದಿಸಾಬ್ ಮತ್ತು ಮಹಬೂಬಿ ಅವರ ಹಿರಿಯ ಪುತ್ರರಾಗಿ ಜನಿಸಿದ್ದು, ಅವರು ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ ತಮ್ಮ ಹುಟ್ಟೂರಾದ ಹೂವಿನಹಡಗಲಿಯಲ್ಲಿ ಮುಗಿಸಿದರು.

ನಂತರ ಎಂಎ ಅರ್ಥಶಾಸ್ತ್ರ ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಮತ್ತು ಬಿ.ಇಡಿ ಪದವಿಯನ್ನು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ನವದೆಹಲಿಯಿಂದ ಪಡೆದುಕೊಂಡಿದ್ದಾರೆ. ಪಿಜಿಡಿಇಎಲ್‌ಟಿ ಪದವಿಯನ್ನು ಬೆಂಗಳೂರಿನ ಆರ್‌ಐಇಎಸ್‌ಐನಲ್ಲಿ ಪಡೆದುಕೊಂಡಿದ್ದಾರೆ.

ವಿಶೇಷತೆ:

ವೆಚ್ಚರಹಿತ ಮತ್ತು ಕಡಿಮೆ ವೆಚ್ಚದ ಪಾಠೋಪಕರಣಗಳ ತಯಾರಿಕೆ ಹಾಗೂ ಗುಣಾತ್ಮಕ ಶಿಕ್ಷಣ ನೀಡುತ್ತಾ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸುವಲ್ಲಿ ಉತ್ತಮ ಸೃಜನಶೀಲ ಶಿಕ್ಷಕ ಎಂದು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಅಭಿನಂದನೆ ಮತ್ತು ಪ್ರಶಂಸೆಯ ಪ್ರಮಾಣ ಪತ್ರಗಳನ್ನು ಪಡೆದು ಕೊಂಡಿದ್ದಾರೆ.

ಪಡೆದ ಪ್ರಶಸ್ತಿಗಳು:

ಉತ್ತಮ ಕಲಾವಿದ ಶಿಕ್ಷಕ ಪ್ರಶಸ್ತಿ, ಜನ ಮೆಚ್ಚಿದ ಶಿಕ್ಷಕ, ಬುದ್ಧ ಬಸವ ಅಂಬೇಡ್ಕರ್ ಪ್ರಶಸ್ತಿ, ಉತ್ತಮ ಚಿಣ್ಣರ ಅಂಗಳ ಅನುಷ್ಠಾನ ಪ್ರಶಂಸಾ ಪತ್ರ ಪ್ರಶಸ್ತಿ, ಎನ್‌ಪಿಇಜಿಎಲ್ ಉತ್ತಮ ಶಿಕ್ಷಕ, ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಡಾ. ಎಚ್. ನರಸಿಂಹಯ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಕ್ರೀಡಾಕೂಟ ಕಾರ್ಯದರ್ಶಿ ಪ್ರಶಸ್ತಿ, ಡಾ. ಎಸ್. ರಾಧಕೃಷ್ಣನ್ ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಶಿಕ್ಷಕ ಸಾಹಿತಿ ಪ್ರಶಸ್ತಿ, ಅನ್ಮೂಲ್ ರತ್ನ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಸಮಾಜ ಸೇವಾ ಭಾರ್ಗವ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, ಶಿಕ್ಷಕ ಕವಿ ಪ್ರಶಸ್ತಿಗಳನ್ನು ಪಡೆದುಕೊಂಡು
ಅನೇಕ ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇರವದು.

2018 ರಲ್ಲಿ ರಾಜ್ಯ ಮಟ್ಟದ ಪ್ರೌಢಶಾಲಾ ಶಿಕ್ಷಕರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.  

loader