Asianet Suvarna News Asianet Suvarna News

ಹಸಿರು ಬಣ್ಣಕ್ಕೆ ತಿರುಗಿದೆ ತುಂಗಭದ್ರಾ ಜಲಾಶಯ ನೀರು

  • ಹಸಿರು ಬಣ್ಣಕ್ಕೆ ತಿರುಗಿದೆ ತುಂಗಭದ್ರಾ ಜಲಾಶಯ ನೀರು
  • 33 ಗೇಟ್‌ಗಳು, ಕಾಂಪೋಸಿಟ್‌ ಡ್ಯಾಮ್‌ ಮುಂದೆ ಹಸಿರು ಬಣ್ಣಕ್ಕೆ ತಿರುಗಿದ ನೀರು
  • ಕಾರ್ಖಾನೆ ತ್ಯಾಜ್ಯದಿಂದ ಬಣ್ಣ ಬದಲು, ಸ್ಥಳೀಯರಲ್ಲಿ ಆತಂಕ
TB Dam water turn green colour at hospete koppal rav
Author
First Published Nov 27, 2022, 12:11 PM IST

ಮುನಿರಾಬಾದ್‌ (ನ.27) : ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಇದರಿಂದ ರೈತರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ. ತುಂಗಭದ್ರಾ ಜಲಾಶಯದ 33 ಗೇಟ್‌ಗಳ ಮುಂದೆ ಹಾಗೂ ಕಾಂಪೋಸಿಟ್‌ ಡ್ಯಾಮ್‌ ಮುಂದೆ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಜಲಾಶಯದ ನೀರು ಪ್ರತಿ ವರ್ಷ ಹಸಿರು ಬಣ್ಣಕ್ಕೆ ತಿರುಗುವುದು ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ಟಿದೆ. 10 ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯ ನೀರು ಪ್ರಥಮ ಬಾರಿಗೆ ಹಸಿರು ಬಣ್ಣಕ್ಕೆ ತಿರುಗಿದಾಗ ಭಾರಿ ಸಂಚಲನ ಉಂಟಾಗಿತ್ತು. ಆಗ ನೀರಿನ ಸ್ಯಾಂಪಲ್‌ ಅನ್ನು ಪರೀಕ್ಷೆಗಾಗಿ ಕಳಿಸಲಾಯಿತು. ನೀರು ಸಂಸ್ಕರಣೆ ಮಾಡದೆ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂತು. ನೀರು ಪ್ರತಿವರ್ಷ ಹಸಿರು ಬಣ್ಣಕ್ಕೆ ತಿರುಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸುತ್ತಿದೆ. ಕ್ರಮ ಕೈಗೊಳ್ಳಬೇಕಾದ ಪರಿಸರ ನಿಯಂತ್ರಣ ಮಂಡಳಿ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇದು ನಮ್ಮ ದುರ್ಭಾಗ್ಯ ಎನ್ನುತ್ತಾರೆ ಗ್ರಾಮದ ಹಿರಿಯರಾದ ಶಂಕ್ರಪ್ಪ ದೊಡ್ಮನೆ.

ಕಾರಣವೇನು?:

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ತಲೆ ಎತ್ತಿರುವ ಅನೇಕ ಕಾರ್ಖಾನೆಗಳು ಅಲ್ಲಿನ ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ಹಾಗೆ ತುಂಗಭದ್ರಾ ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ನೀರ, ಹಸಿರು ಬಣ್ಣಕ್ಕೆ ತಿರುಗುತ್ತಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಅಂಬರೀಶ್‌ ತ್ಯಾಗಬಾವಿ ದೂರಿದ್ದಾರೆ.

ಬಡಗಣಿ ನದಿಯಲ್ಲಿ ಜಲಚರ ಸಾವು ನಿಗೂಢ!

ಹರಿಹರ ನಗರದಲ್ಲಿರುವ ಒಂದು ರಾಸಾಯನಿಕ ಕಾರ್ಖಾನೆ ಹಾಗೂ ಸಕ್ಕರೆ ಕಾರ್ಖಾನೆ ಅಲ್ಲಿನ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುತ್ತಿದ್ದು, ಇದರಿಂದ ಈ ಅವಘಡ ಸಂಭವಿಸುತ್ತಿದೆ. ಜನರ ಹಾಗೂ ಪರಿಸರ ಹಿತ ರಕ್ಷಣೆ ಮಾಡಬೇಕಾದ ಪರಿಸರ ನಿಯಂತ್ರಣ ಮಂಡಳಿ ಕಾರ್ಖಾನೆ ಪರವಾಗಿ ನಿಂತಿದ್ದು ದುರಾದೃಷ್ಟಕರ ಎಂದು ಅಮರೇಶ್‌ ತ್ಯಾಗಬಾವಿ ಪ್ರತಿಕ್ರಿಯಿಸಿದ್ದಾರೆ.

ರೈತರು ಅಧಿಕ ಪ್ರಮಾಣದಲ್ಲಿ ರಾಸಾಯನಿಕವನ್ನು ಬಳಸುತ್ತಿರುವುದರಿಂದ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ ಎಂದು ಅಧಿಕಾರಿಗಳು ಅಮಾಯಕರ ಮೇಲೆ ಗೂಬೆ ಕೂರಿಸುತ್ತಿರುವುದು ದುರದೃಷ್ಟಕರ ಎನ್ನುತ್ತಾರೆ ಅವರು.

ಇದಕ್ಕೆ ಸಂಬಂಧಿಸಿದಂತೆ ತುಂಗಭದ್ರಾ ರೈತ ಸಂಘದ ರಾಜ್ಯಾಧ್ಯಕ್ಷ ಪುರುಷೋತ್ತಮ್‌ ಪ್ರತಿಕ್ರಿಯಿಸಿ, ಕಾರ್ಖಾನೆಗಳು ಹಾಗೂ ನಗರಗಳ ಚರಂಡಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಬಿಡುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ನೀರು, ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಈ ನೀರಿನಿಂದ ರೈತರ ಜಾನುವಾರುಗಳಿಗೆ ಕಂಟಕ ಕಾದಿಟ್ಟಬುತ್ತಿ. ಅಲ್ಲದೆ ರೈತರಿಗೆ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯೂ ಆಗುತ್ತಿದೆ. ನೀರು ಬಳಕೆ ಮಾಡಿದ ಗ್ರಾಮಸ್ಥರಲ್ಲಿ ಚರ್ಮರೋಗ ಕಾಣಿಸಿಕೊಂಡಿದೆ. ಇನ್ನೂ ಕೆಲವರಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದಂತ ರೋಗಗಳು ಕಾಣಿಸಿಕೊಂಡಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕೇಂದ್ರ ಸರ್ಕಾರ ಗಂಗಾ ನದಿಯನ್ನು ಮಲೀನ ಮುಕ್ತ ಮಾಡಿದ ರೀತಿಯಲ್ಲಿ ರಾಜ್ಯ ಸರ್ಕಾರವೂ ತುಂಗಭದ್ರಾ ಜಲಾಶಯದ ನೀರನ್ನು ಮಲೀನ ಮುಕ್ತ ಮಾಡುವ ನಿಟ್ಟಿನಲ್ಲಿ ಇಚ್ಚಾಸಕ್ತಿ ತೋರಿಸಬೇಕು ಹಾಗೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟನ ಕ್ರಮವನ್ನು ಕೈಗೊಳ್ಳಬೇಕು ಎಂದು ಪುರುಷೋತ್ತಮ್‌ ಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ. ಜನರಿಗೆ ಕಂಟಕವಾದ ಬ್ಯಾರೇಜ್ ಹಿನ್ನೀರು : ಊರನ್ನೇ ಶಿಫ್ಟ್ ಮಾಡಲು ಗ್ರಾಮಸ್ಥರ ಪಟ್ಟು!

Follow Us:
Download App:
  • android
  • ios