ಚಾಮರಾಜನಗರ: ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಾಲ್ ಗೋಲ್‌ಮಾಲ್, ರೈತರಿಂದ ಹೆಚ್ಚುವರಿ ಹಣ ಪಡೆದು ವಂಚನೆ
ಅಧಿಕಾರಿಗಳಿಗೆ ಹೆಚ್ಚಿನ ಹಣ ವಸೂಲಿ ಬಗ್ಗೆ ದೂರು ಕೊಟ್ಟರು ಕೂಡ ಇಲ್ಲಿಯವರೆಗೂ ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ. ರೈತರಿಂದ ವಸೂಲಿ ಮಾಡಿದ ಹೆಚ್ಚಿನ ಹಣ ವಾಪಾಸ್ ಕೊಡಬೇಕೆಂದಿದ್ದಾರೆ. ಬರೀ ಇಷ್ಟೇ ಅಲ್ಲ ಸ್ಪ್ರಿಂಕ್ಲರ್ ಕೊಡ್ತಿನೆಂದು ಹಣ ವಸೂಲಿ ಮಾಡಿದ್ದು ಇಲ್ಲಿಯವರೆಗೂ ಕೊಟ್ಟಿಲ್ಲ, ನಾವು ಅಲೆದು ಸುಸ್ತಾಗಿ ಹೋಗಿದ್ದೇವೆ ಇಡೀ ರೈತ ಸಂಪರ್ಕ ಕೇಂದ್ರ ಅಕ್ರಮಗಳ ತಾಣವಾಗಿದೆ ಅಂತಾ ರೈತರ ಆರೋಪವಾಗಿದೆ.
ವರದಿ - ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಡಿ.15): ಸರ್ಕಾರ ರೈತರಿಗೆ ಅನುಕೂಲವಾಗಲೆಂದು ಕಡಿಮೆ ದರದಲ್ಲಿ ಟರ್ಪಾಲ್ ವಿತರಿಸ್ತಿದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಸರ್ಕಾರ ನಿಗದಿ ಮಾಡಿರುವ ಹಣಕ್ಕೂ ಹೆಚ್ಚು ಹಣ ಪಡೆಯುವ ಮೂಲಕ ರೈತರಿಂದ ಸುಲಿಗೆಗೆ ಮುಂದಾಗಿದ್ದಾನೆ. ಇದ್ರಿಂದ ರೈತರು ಆಕ್ರೋಶ ಭರಿತರಾಗಿದ್ದು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೊತೆಗೆ ತಮ್ಮ ಹಣವನ್ನು ಮತ್ತೇ ವಾಪಾಸ್ ಕೊಡುವಂತೆ ಒತ್ತಾಯಿಸಿದ್ದಾರೆ. ರೈತರಿಂದ ಅಧಿಕ ಹಣ ವಸೂಲಿ ಮಾಡಿದ್ದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..
ಯೆಸ್ ಇದೆಲ್ಲಾ ನಡೆದಿರೋದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ. ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ಕೊಟ್ಟು ರೈತರಿಗೆ ಅನುಕೂಲವಾಗಲಿ ಎಂದು ವಿಶೇಷ ಯೋಜನೆ ಘೋಷಣೆ ಮಾಡ್ತಿದೆ. ಆದ್ರೆ ರೈತರ ಪರ ಕೆಲಸ ಮಾಡಬೇಕಾದ ಕೆಲ ಸಿಬ್ಬಂದಿ ಇದೀಗಾ ರೈತರಿಂದಲೇ ಅಧಿಕ ಹಣ ವಸೂಲಿ ಮಾಡ್ತಿರುವ ಆರೋಪ ಮಾಡ್ತಿದ್ದಾರೆ. ಬಹುತೇಕ ಕೂಲಿ ಮಾಡುವ ಜನರೇ ಹೆಚ್ಚಾಗಿರುವ ಹಾಗು ಕೃಷಿಯನ್ನೆ ನಂಬಿ ಜೀವನ ಸಾಗಿಸುತ್ತಿರುವ ಕಾಡಂಚಿನ ಗ್ರಾಮ ಲೊಕ್ಕನಹಳ್ಳಿ ಈ ರೈತ ಸಂಪರ್ಕ ಕೇಂದ್ರಕ್ಕೆ 768 ಜನ ರೈತರಿಗೆ ವಿತರಣೆ ಮಾಡಲೂ ಟರ್ಪಾಲ್ ಕೊಡಲಾಗಿತ್ತು. ಸಾಮಾನ್ಯ ವರ್ಗದ ರೈತನಿಗೆ 1268 ರೂ ಹಾಗೂ ಎಸ್ಸಿ, ಎಸ್ಟಿ ವರ್ಗದ ರೈತರಿಗೆ 354 ರೂಪಾಯಿಗೆ ವಿತರಿಸುವಂತೆ ಬೆಲೆ ನಿಗದಿ ಮಾಡಲಾಗಿದೆ. ಆದ್ರೆ ಇಲಾಖೆ ನಿಗದಿಪಡಿಸಿದ ಬೆಲೆಗಿಂತಾ 400 ರೂಪಾಯಿ ಹೆಚ್ಚಿಗೆ ಪಡೆದು ಟರ್ಪಾಲ್ ವಿತರಿಸಿದ್ದಾರೆಂದು ಹಾಗು ರೈತರಿಂದ ಲಕ್ಷಾಂತರ ರೂಪಾಯಿ ಹಣ ಗೋಲ್ ಮಾಲ್ ಮಾಡಿ ದೋಚಲಾಗಿದೆ. ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ರೈತರಿಂದ ವಸೂಲಿ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ಬಂಡೀಪುರ ಕಾಡಂಚಿನಲ್ಲಿ ಕುರಿಗಾಹಿಯನ್ನು ಎಳೆದೊಯ್ದು ತಿಂದು ಹಾಕಿದ ಹುಲಿ!
ಇನ್ನೂ ಸರ್ಕಾರ ನಿಗದಿ ಮಾಡಿರುವ ದರಕ್ಕಾಗಲಿ ಅಥವಾ ರೈತರಿಂದ ವಸೂಲಿ ಮಾಡಿದ ಹಣಕ್ಕಾಗಲಿ ರಶೀತಿ ಕೊಡದೆ ಹೆಚ್ಚುವರಿ ಹಣ ಸಂಗ್ರಹಿಸಿ ಗುಳುಂ ಮಾಡಿದ್ದಾರೆ. ರೈತ ಸಂಪರ್ಕ ಕೇಂದ್ರದ ಹೊರಗುತ್ತಿಗೆ ನೌಕರ ಪ್ರಸಾದ್ ಎಂಬಾತ ದುರುಪಯೋಗ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಅಧಿಕಾರಿಗಳಿಗೆ ಹೆಚ್ಚಿನ ಹಣ ವಸೂಲಿ ಬಗ್ಗೆ ದೂರು ಕೊಟ್ಟರು ಕೂಡ ಇಲ್ಲಿಯವರೆಗೂ ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ. ರೈತರಿಂದ ವಸೂಲಿ ಮಾಡಿದ ಹೆಚ್ಚಿನ ಹಣ ವಾಪಾಸ್ ಕೊಡಬೇಕೆಂದಿದ್ದಾರೆ. ಬರೀ ಇಷ್ಟೇ ಅಲ್ಲ ಸ್ಪ್ರಿಂಕ್ಲರ್ ಕೊಡ್ತಿನೆಂದು ಹಣ ವಸೂಲಿ ಮಾಡಿದ್ದು ಇಲ್ಲಿಯವರೆಗೂ ಕೊಟ್ಟಿಲ್ಲ, ನಾವು ಅಲೆದು ಸುಸ್ತಾಗಿ ಹೋಗಿದ್ದೇವೆ ಇಡೀ ರೈತ ಸಂಪರ್ಕ ಕೇಂದ್ರ ಅಕ್ರಮಗಳ ತಾಣವಾಗಿದೆ ಅಂತಾ ರೈತರ ಆರೋಪವಾಗಿದೆ.
ಒಟ್ನಲ್ಲಿ ಹೇಳಿ ಕೇಳಿ ಚಾಮರಾಜನಗರ ಮೊದಲೇ ಹಿಂದುಳಿದ ಜಿಲ್ಲೆ. ಇಲ್ಲಿ ವಾಸ ಮಾಡುವ ಜನರು ಕೂಡ ಮುಗ್ದರು. ಅವರ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡು ಅಧಿಕ ಹಣ ವಸೂಲಿ ಮಾಡುವ ಮೂಲಕ ರೈತರ ಸುಲಿಗೆಗೆ ಮುಂದಾಗಿರುವುದು ಮಾತ್ರ ವಿಪರ್ಯಾಸವಾಗಿದೆ.