ಮೈಸೂರು(ನ.11): ರಾಜ್ಯ ಸರ್ಕಾರವು ಟಿಪ್ಪು ಜಯಂತಿ ನಿಷೇಧಿಸುವ ಬದಲು ತಾಕತ್ತಿದ್ದರೇ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸಾರಾಯಿ, ಜೂಜಾಟ ನಿಷೇಧ ಮಾಡಲಿ ಎಂದು ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ತನ್ವೀರ್‌ ಸೇಠ್‌ ಸವಾಲು ಹಾಕಿದ್ದಾರೆ. 

ನಗರದ ಬನ್ನಿಮಂಟಪದ ಅಪ್ನಾ ಘರ್‌ ಅನಾಥಾಶ್ರಮದಲ್ಲಿ ಮಂಗಳವಾರ ನಡೆದ ಟಿಪ್ಪು ಜಯಂತಿಯಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಟಿಪ್ಪುವನ್ನು ವಿರೋಧಿಸುವವರು ಚರ್ಚೆಗೆ ಬರಲಿ. ಅದು ಬಿಟ್ಟು ಕೇವಲ ಮತ ರಾಜಕಾರಣಕ್ಕಾಗಿ ಟಿಪ್ಪುವನ್ನು ವಿರೋಧಿಸುವುದು ನಾಚಿಕೆಗೇಡಿನ ವಿಚಾರ. ಟಿಪ್ಪು ಈ ರಾಷ್ಟ್ರದ ವೀರಪುತ್ರ, ಟಿಪ್ಪು ಜಯಂತಿ ಮಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

'ಟಿಪ್ಪು ಜಯಂತಿ ರದ್ದು ಆದೇಶಕ್ಕೆ ಯಡಿಯೂರಪ್ಪ ಸರ್ಕಾರ ಬದ್ಧ'

ಟಿಪ್ಪು ಜಯಂತಿ ಆಚರಣೆಗೆ ನಾವು ಹಠ ಮಾಡುವುದಿಲ್ಲ. ಸರ್ಕಾರದೊಂದಿಗೆ ಸಂಘರ್ಷಕ್ಕೂ ಇಳಿಯುವುದಿಲ್ಲ. ಇತಿಹಾಸವನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ. ಆದರೆ, ಟಿಪ್ಪುವಿನ ಹೆಸರಿನಲ್ಲಿ ಮುಸಲ್ಮಾನರನ್ನು ದ್ವೇಷಿಸುವ ರಾಜಕಾರಣ ಮಾಡುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ ಎಂದು ಹೇಳಿದರು.