ಬೆಂಗಳೂರು(ಮಾ.19): ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ರದ್ದು ಪಡಿಸಿ ಸರ್ಕಾರ 2019ರ ಜುಲೈ 30ರಂದು ಹೊರಡಿಸಿದ ಆದೇಶಕ್ಕೆ ಬದ್ಧವಾಗಿರಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ.

ರಾಜ್ಯ ಸರ್ಕಾರದ ಆದೇಶ ರದ್ದು ಪಡಿಸುವಂತೆ ಕೋರಿ ಉತ್ತರ ಪ್ರದೇಶದ ಲಕ್ನೋ ನಿವಾಸಿ ಬಿಲಾಲ್‌ ಆಲಿ ಷಾ, ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿದ್ದ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

'ಟಿಪ್ಪು ಹೆಸರನ್ನು ಪಠ್ಯದಿಂದ ತೆಗೆದು ಹಾಕಿದ್ರೆ ರಾಜ್ಯ ಸರ್ಕಾರ ಪತನ'

ಈ ವೇಳೆ ಸರ್ಕಾರದ ಪರ ವಕೀಲರಾದ ವಿಕ್ರಂ ಹುಯಿಲಗೋಳ್‌, ರಾಜ್ಯದಲ್ಲಿ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವುದನ್ನು ರದ್ದುಪಡಿಸಿ 2019ರ ಜುಲೈ 30ರಂದು ಹೊರಡಿಸಿದ ಆದೇಶ ಮರುಪರಿಶೀಲಿಸುವಂತೆ ಮತ್ತು ಸರ್ಕಾರದಿಂದ ಆಚರಿಸಲ್ಪಡುವ ಇತರೆ ಗಣ್ಯರು ಮತ್ತು ಮಹನೀಯರ ಜಯಂತಿಗಳ ಬಗ್ಗೆಯೂ ವಿವರ ನೀಡುವಂತೆ ಹೈಕೋರ್ಟ್‌ 2019ರ ನ.6ರಂದು ಸರ್ಕಾರಕ್ಕೆ ಮಧ್ಯಂತರ ಆದೇಶ ಮಾಡಿದೆ.

ಟಿಪ್ಪು ಜಯಂತಿ: ಅಧಿಕಾರಿಗಳು ಸರ್ಕಾರದ ಕೈಗೊಂಬೆ ಎಂದ ತನ್ವೀರ್ ಸೇಠ್

ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ಆದೇಶಕ್ಕೆ ಬದ್ಧವಾಗಿರಲು ಮಾ.11ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದ್ದು, ಅದರ ಸಂಪೂರ್ಣ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ. ಸರ್ಕಾರದಿಂದ ಆಚರಿಸಲ್ಪಡುವ ಇತರೆ ಗಣ್ಯರು ಮತ್ತು ಮಹನೀಯರ ಜಯಂತಿಗಳ ಬಗ್ಗೆಯೂ ವಿವರಗಳು ಸಿದ್ಧವಿದ್ದು, ಅವುಗಳನ್ನು ಕ್ರೋಢೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ವಿಚಾರಣೆಯನ್ನು ಏ.8ಕ್ಕೆ ಮುಂದೂಡಿತು.