ಕೊಪ್ಪಳ(ಮೇ.27): ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಮಧ್ಯೆ ಕೋವಿಡ್‌ ನಿಯಂತ್ರಣದ ವಿಷಯದಲ್ಲಿ ವಾಕ್ಸಮರವೇ ನಡೆಯುತ್ತಿದೆ. ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅವರು ಸಹ ಎಂಟ್ರಿಯಾಗಿದ್ದು, ಕೋವಿಡ್‌ ಸಮಯದಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕ್ಷೇತ್ರಕ್ಕಿಲ್ಲ ಆಕ್ಸಿಜನ್‌ ಬೆಡ್‌ ಆಸ್ಪತ್ರೆ: ತಂಗಡಗಿ

ಕನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ ತಾಂಡವವಾಡುತ್ತಿದೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಕನಕಗಿರಿ ಕ್ಷೇತ್ರದಲ್ಲಿ ಆಕ್ಸಿಜನ್‌ ಬೆಡ್‌ ಆಸ್ಪತ್ರೆಯೇ ಇಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವಾಗ್ದಾಳಿ ಮಾಡಿದ್ದಾರೆ. ಶಾಸಕರ ನಿರ್ಲಕ್ಷ್ಯವೋ, ಸರ್ಕಾರದ ಮಲತಾಯಿ ಧೋರಣೆಯೋ ಗೊತ್ತಿಲ್ಲ. ಆದರೆ, ಕ್ಷೇತ್ರದ ಜನರಿಗೆ ಮಾತ್ರ ಬಹುದೊಡ್ಡ ಸಮಸ್ಯೆಯಾಗಿದೆ. ಸರಿಯಾದ ಚಿಕಿತ್ಸೆಯೇ ದೊರೆಯುತ್ತಿಲ್ಲ. ಶ್ರೀರಾಮನಗರದಲ್ಲಿ ಮಾಡಿದ್ದರೂ ಅದು ಗಂಗಾವತಿ ತಾಲೂಕಿನಲ್ಲಿದೆ. ಆದರೆ ಕನಕಗಿರಿ, ಕಾರಟಗಿಯಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಮಾಡಲು ಸಾಧ್ಯವಾದರೆ ಮಾಡಿ, ಇಲ್ಲದಿದ್ದರೆ ನಾವೇ ಮಾಡುತ್ತೇವೆ. ಸರ್ಕಾರದಿಂದ ಸಿಬ್ಬಂದಿ ಮತ್ತು ವೈದ್ಯರನ್ನು ಕೊಡಿ, 50 ಹಾಸಿಗೆ ಆಸ್ಪತ್ರೆಯನ್ನು ನಾನು ಸ್ವಂತ ಖರ್ಚಿನಲ್ಲಿ ಮಾಡುತ್ತೇನೆ. ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ ಎಲ್ಲ ಸೌಲಭ್ಯವನ್ನು ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಸರ್ಕಾರ ಸತ್ತು ಹೋದ ಮೇಲೆ ಸಿಎಂ ಬದಲಾದರೇನು ಪ್ರಯೋಜನ?: ಶಿವರಾಜ ತಂಗಡಗಿ

ಸೇವೆಗೆ ಅಧಿಕಾರ ಬೇಕಾಗಿಲ್ಲ: ದಢೇಸುಗೂರು

ಸೇವೆ ಮಾಡುವುದಕ್ಕೆ ಅಧಿಕಾರವೇ ಬೇಕಾಗಿಲ್ಲ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ರಾಜ್ಯಾದ್ಯಂತ ಅಧಿಕಾರ ಇಲ್ಲದವರು ಸೇವೆ ಮಾಡುತ್ತಾರೆ. ಸೇವೆ ಮಾಡಬೇಕು ಎನ್ನುವುದಾದರೆ ಮಾಡಲಿ ಎಂದು ಶಾಸಕ ಬಸವರಾಜ ದಢೇಸುಗೂರು ಸವಾಲು ಹಾಕಿದ್ದಾರೆ.

ಇಂಥ ಹೇಳಿಕೆ ನೀಡುವುದನ್ನು ಬಿಡಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು. ಈಗಾಗಲೇ ಕನಕಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀರಾಮನಗರದಲ್ಲಿ 30 ಬೆಡ್‌ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಕನಕಗಿರಿಯಲ್ಲಿಯೂ ಶೀಘ್ರದಲ್ಲಿಯೆ ಆರಂಭಿಸಲಾಗುತ್ತದೆ. ಕ್ಷೇತ್ರದಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಎರಡು ಆ್ಯಂಬುಲೆನ್ಸ್‌ ನೀಡಿದ್ದೇನೆ, ಇನ್ನೂ ನೀಡುತ್ತಿದ್ದೇನೆ. ಇಂಥ ಸೇವೆಯನ್ನು ಬೇಕಾದರೆ ಮಾಡಲಿ ಎಂದರು.

ಶಿವರಾಜ ತಂಗಡಗಿ ಅವರು ಸಚಿವರಾಗಿ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಅವರು ಪ್ರಚಾರಕ್ಕಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕೋವಿಡ್‌ ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಶಿವರಾಜ ತಂಗಡಗಿ ಅವರು ಇಂಥ ಹೇಳಿಕೆ ನೀಡಬಾರದು. ಈ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಮಿಡಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.