* ಮೊದಲು ಜನರ ರಕ್ಷಣೆ ಮಾಡಲಿ, ಕೋವಿಡ್‌ ನಿರ್ಮೂಲನೆಗೆ ಶ್ರಮಿಸಲಿ* ಇಂಥ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು * ವೆಂಟಿಲೆಟರ್‌, ಆಕ್ಸಿಜನ್‌ ಇಲ್ಲ ಎಂದರೆ ಸರ್ಕಾರ ಏನು ಮಾಡುತ್ತಿದೆ?: ತಂಗಡಗಿ

ಕೊಪ್ಪಳ(ಮೇ.27): ಸರ್ಕಾರ ಸತ್ತು ಹೋಗಿದೆ, ಇನ್ನು ಮುಖ್ಯಮಂತ್ರಿ ಬದಲಾದರೇನು ಪ್ರಯೋಜನ? ಮುಖ್ಯಮಂತ್ರಿ ಬದಲಾವಣೆ ಏನಾದರೂ ಮಾಡಿಕೊಳ್ಳಲಿ, ಮೊದಲು ಜನರ ರಕ್ಷಣೆ ಮಾಡಲಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ಮಾಡ್ತಾರೆ ಎನ್ನುವ ಮಾಹಿತಿಯನ್ನು ನಾನು ಮಾಧ್ಯಮದಲ್ಲಿಯೇ ನೋಡಿದ್ದೇನೆ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ, ಮೊದಲು ಕೋವಿಡ್‌ ನಿರ್ಮೂಲನೆಗೆ ಶ್ರಮಿಸಲಿ ಎಂದರು.

ಮೋದಿ ಕರ್ನಾಟಕದ ಬಿಜೆಪಿಗರನ್ನ ತಮ್ಮ ಹತ್ತಿರ ಬಿಟ್ಟುಕೊಳ್ತಿಲ್ಲ: ಶಿವರಾಜ್‌ ತಂಗಡಗಿ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳ ಸಭೆ ನಡೆಸುತ್ತೇನೆ ಎಂದರೆ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಈ ನಿಯಮ ಜಾರಿಯಾಗಿದ್ದರೆ ಏನಾಯಿತು? ಈಗ ಇಂಥ ಪರಿಸ್ಥಿತಿಯಲ್ಲಿ ಪ್ರತಿಪಕ್ಷದ ನಾಯಕ ಎಲ್ಲ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದರೆ ಏನಾಗುತ್ತಿತ್ತು? ಸಂವಿಧಾನ ತಿದ್ದುಪಡಿ ಮಾಡುತ್ತೇನೆ ಎನ್ನುವವರು ಈ ತುರ್ತು ಸಂದರ್ಭದಲ್ಲಿ ಇಂಥದ್ದೊಂದು ನಿಯಮ ತಿದ್ದುಪಡಿ ಯಾಕೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ನಾವು ತಪ್ಪು ಮಾಡಿದ್ದರಿಂದಲೇ ಜನರು ಮನೆಯಲ್ಲಿ ಕೂಡ್ರಿಸಿದ್ದಾರೆ. ನಮ್ಮ ಸರ್ಕಾರ ಇಲ್ಲ. ಆದರೆ, ಇವರು ಅಧಿಕಾರಕ್ಕೆ ಬಂದಿದ್ದು ಯಾಕೆ? ರಾಜ್ಯಾದ್ಯಂತ ಜನರು ಸಾಯುತ್ತಿದ್ದಾರೆ. ಟೆಸ್ಟ್‌ ಮಾಡುತ್ತಿಲ್ಲ. ಮಾಡಿದ ವರದಿಯನ್ನು ನೀಡುತ್ತಿಲ್ಲ. ಬೆಡ್‌ ಸಿಗುತ್ತಿಲ್ಲ. ವೆಂಟಿಲೆಟರ್‌ ಇಲ್ಲ, ಆಕ್ಸಿಜನ್‌ ಇಲ್ಲ ಎಂದರೆ ಸರ್ಕಾರ ಏನು ಮಾಡುತ್ತಿದೆ? ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ. ಇಂಥ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದರು ಆಕ್ರೋಶ ವ್ಯಕ್ತಪಡಿಸಿದರು.