Mangaluru: ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ತಾಲಿಬಾನ್ ಸಂಸ್ಕೃತಿ: ಖಾದರ್
* ತರಬೇತಿ ಆಯೋಜಿಸಿದ್ದು ಯಾರು? ಅನುಮತಿ ಕೊಟ್ಟಿದ್ಯಾರು, ಉದ್ದೇಶ ಏನು ತನಿಖೆಯಾಗಲಿ
* ಮಳಲಿ ಮಸೀದಿ: ಡಿಸಿ ತಕ್ಷಣ ನಿರ್ಧಾರ ಪ್ರಕಟಿಸಲಿ
* ಇದೇನು ಯುಪಿ, ಬಿಹಾರವಾ?: ಖಾದರ್ ಪ್ರಶ್ನೆ
ಮಂಗಳೂರು(ಮೇ.18): ಶಾಲಾ ಮಕ್ಕಳ ಕೈಗೆ ಪುಸ್ತಕ, ಪೆನ್ನು ನೀಡಬೇಕಾದ ಸರ್ಕಾರದ ಶಾಸಕರೇ ಮುಂದೆ ನಿಂತು ರೈಫಲ್ ತರಬೇತಿ, ಆಯುಧಗಳನ್ನು ನೀಡುವುದು ಸರ್ಕಾರದ ತಾಲಿಬಾನ್ ಸಂಸ್ಕೃತಿಯನ್ನು ತೋರಿಸಿದೆ. ಈ ಮೂಲಕ ಸರ್ಕಾರವು ಗೂಂಡಾಗಿರಿಯನ್ನು ಹೊರಗುತ್ತಿಗೆ ನೀಡಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಪೊನ್ನಂಪೇಟೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಕುರಿತು ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರು ಜನರಿಗೆ ಉತ್ತರ ನೀಡಬೇಕು, ಈ ಶಸ್ತ್ರಾಸ್ತ್ರ ತರಬೇತಿಯನ್ನು ಆಯೋಜಿಸಿದ್ದು ಯಾರು, ಇದರ ಉದ್ದೇಶ ಏನು, ಅನುಮತಿ ಕೊಟ್ಟವರು ಯಾರು ಎನ್ನುವುದನ್ನು ಬಹಿರಂಗಪಡಿಸಬೇಕು. ಸರ್ಕಾರ ಇಂಥ ಕೃತ್ಯಗಳಿಗೆ ಬೆಂಬಲ ನೀಡುವುದು ಬಿಟ್ಟು ತನಿಖೆಗೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
Karnataka Politics: ನನಗೆ ಮುಸ್ಲಿಮರ ಮತ ಬೇಡ: ಬಿಜೆಪಿ ಶಾಸಕ ಹರೀಶ್ ಪೂಂಜ
ಇದೇನು ಯುಪಿ, ಬಿಹಾರವಾ?:
ಎನ್‌ಸಿಸಿಯಲ್ಲಾದರೆ ಶಸ್ತ್ರಾಸ್ತ್ರ ತರಬೇತಿ ಇದೆ. ಆ ಸಂಸ್ಥೆಗೆ ಸರ್ಕಾರದ ಮಾನ್ಯತೆಯಿದೆ, ಸಂಸ್ಥೆಗೆ ತನ್ನದೇ ಆದ ಉದ್ದೇಶವಿದೆ. ಆದರೆ ಪೊನ್ನಂಪೇಟೆಯ ವಿದ್ಯಾಸಂಸ್ಥೆಯಲ್ಲಿ ತರಬೇತಿ ನೀಡಿದವರಿಗೆ ಯಾವ ಮಾನ್ಯತೆ ಇದೆ? ಮಕ್ಕಳ ಕೈಗೆ ಆಯುಧ ನೀಡಲು ಇದೇನು ಬಿಹಾರ, ಉತ್ತರ ಪ್ರದೇಶವಾ? ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
Monsoon Rain ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್!
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಶಾಲೆ, ಕಾಲೇಜು ಪ್ರಾರಂಭಿಸಿಲ್ಲ. ಕನಿಷ್ಠ ಒಂದು ಅಂಗನವಾಡಿಯನ್ನೂ ಸ್ಥಾಪಿಸಿಲ್ಲ. ಶಿಕ್ಷಕರ ನೇಮಕಾತಿ ಸರಿಯಾಗಿ ಮಾಡಿಲ್ಲ, ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಸಮರ್ಪಕವಾಗಿಲ್ಲ. ಈ ಕೆಲಸಗಳನ್ನು ಮಾಡದೆ ವಿದ್ಯಾಸಂಸ್ಥೆಯಲ್ಲಿ ಈ ಥರ ಶಸ್ತ್ರಾಸ್ತ್ರ ತರಬೇತಿ ನೀಡುವುದು ಸರ್ಕಾರದ ವಿದ್ಯಾರ್ಥಿ ವಿರೋಧಿ ನಿಲುವನ್ನು ತೋರಿಸುತ್ತದೆ. ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸುವುದು ಏಕೆ ಎಂದು ಪ್ರಶ್ನಿಸಿದರು
ಮಳಲಿ ಮಸೀದಿ: ಡಿಸಿ ತಕ್ಷಣ ನಿರ್ಧಾರ ಪ್ರಕಟಿಸಲಿ
ಮಳಲಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ಎರಡೂ ಕಡೆಯವರ ಸಮ್ಮುಖದಲ್ಲಿ ಮಸೀದಿಯ ಜಾಗದ ದಾಖಲೆಯನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. 300- 400 ವರ್ಷಗಳಲ್ಲಿ ಅಲ್ಲಿ ಮಸೀದಿ ಇರುವುದು ಸ್ಥಳೀಯರಿಗೆ ಗೊತ್ತಿದೆ. ಈಗ ಹೊರಗಿನ ಕೆಲವರಿಗೆ ಅದು ಮಸೀದಿಯಲ್ಲ ದೇವಾಲಯ ಎಂಬ ಸಂಶಯ ಬಂದಿದೆ. ಹಾಗಾಗಿ ಜಿಲ್ಲಾಧಿಕಾರಿಗೆ ದೂರು ಅರ್ಜಿ ನೀಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ದಾಖಲೆ ಪರಿಶೀಲಿಸಿ ಕೂಡಲೆ ನಿರ್ಧಾರ ಪ್ರಕಟಿಸಬೇಕು. ಇಂಥ ಪರಿಸ್ಥಿತಿಯನ್ನು ನಿಭಾಯಿಸಲೆಂದೇ ಅವರಿಗೆ ಮ್ಯಾಜಿಸ್ಪ್ರೇಟ್ ಅಧಿಕಾರ ನೀಡಲಾಗಿದೆ. ಆದರೆ ಯಾರ ಒತ್ತಡದಿಂದ ನಿರ್ಧಾರ ಪ್ರಕಟಿಸಲು ಡಿಸಿ ವಿಳಂಬ ಮಾಡುತ್ತಿದ್ದಾರೆ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.