Asianet Suvarna News Asianet Suvarna News

ರಾಜ್ಯದಲ್ಲಿ ‘ಡ್ರಗ್ಸ್‌’ ಕೊನೆಗಾಣಿಸಲು ತುರ್ತು ಕ್ರಮಕೈಗೊಳ್ಳಿ: ಗೂಳಿಗೌಡ

ರಾಜ್ಯದ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲ ಜಾಗಗಳು ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ದಶಕಗಳಿಂದ ಬೇರು ಬಿಟ್ಟಿರುವ ಗಾಂಜಾ ಹಾಗೂ ಇನ್ನಿತರೆ ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಸೇವನೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ತುರ್ತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದಾರೆ.

Take urgent action to end 'drugs' in the state: Gooligowda snr
Author
First Published Jan 17, 2024, 11:41 AM IST | Last Updated Jan 17, 2024, 11:41 AM IST

ಬೆಂಗಳೂರು :  ರಾಜ್ಯದ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲ ಜಾಗಗಳು ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ದಶಕಗಳಿಂದ ಬೇರು ಬಿಟ್ಟಿರುವ ಗಾಂಜಾ ಹಾಗೂ ಇನ್ನಿತರೆ ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಸೇವನೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ತುರ್ತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ಮಾದಕ ಜಾಲವನ್ನು ಕೊನೆಗಾಣಿಸಲು ಬಲಿಷ್ಠ ಕಾನೂನು ರೂಪಿಸಿ, ಪ್ರತೀ ಜಿಲ್ಲಾ ಮಟ್ಟದಲ್ಲೂ ವಿಶೇಷ ತಂಡ ರಚಿಸಿ ಅದಕ್ಕೆ ಮುಕ್ತ ಅಧಿಕಾರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಸಲಹೆಗಳನ್ನು ನೀಡಿದ್ದಾರೆ.

ಪತ್ರದಲ್ಲೇನಿದೆ: ನಾನಿಂದು ಅತ್ಯಂತ ವಿಷಾದ ಹಾಗೂ ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ನೊಂದ ಮಕ್ಕಳ ಹಾಗೂ ಅವರ ಪೋಷಕರ ಪರವಾಗಿ ಸರ್ಕಾರದ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಮಾದಕ ವ್ಯಸನಗಳಿಗೆ ಇಂದು ಅನೇಕ ಮಕ್ಕಳು ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಈ ಜಾಲವನ್ನು ಬೇರು ಸಹಿತ ಕಿತ್ತುಹಾಕಲು ವಿಶೇಷ ತಂಡವನ್ನು ರಚನೆ ಮಾಡಿ ತಪ್ಪಿತಸ್ಥರಿಗೆ ಕಾನೂನಿನಡಿ ಕಠಿಣ ಕ್ರಮ ಜರುಗಿಸಲು ಬಲಿಷ್ಠ ಕಾನೂನು ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಲಹೆಗಳೇನು

ಮಾದಕ ವಸ್ತು ಮಾರಾಟ ಮತ್ತು ಸೇವನೆ ಜಾಲ ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ ವಿಶೇಷ ದಳವನ್ನು ರಚಿಸಿ ಅದಕ್ಕೆ ಮುಕ್ತ ಅಧಿಕಾರ ಮತ್ತು ಬೆಂಬಲ ನೀಡಬೇಕು.

ಸಾರ್ವಜನಿಕರ ಸಹಕಾರ ಪಡೆಯಲು ಸಹಾಯವಾಣಿ ಆರಂಭಿಸಬೇಕು.

ಜನರು ಮುಕ್ತವಾಗಿ ಮಾಹಿತಿ ನೀಡುವಂತಾಗಲು ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿ ಇಡುವುದಾಗಿ ಮನವರಿಕೆ ಮಾಡಬೇಕು.

ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡುವುದು.

ಜಾಗೃತಿ ಕಾರ್ಯಕ್ರಮ ಆಯೋಜಿಸಿ ಇಂಥ ಜಾಲದ ಬಗ್ಗೆ ಗಮನಕ್ಕೆ ಬಂದ ಕೂಡಲೇ ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಪೋಷಕರ ಮಾಹಿತಿ ನೀಡುವಂತೆ ಮನವರಿಕೆ ಮಾಡಬೇಕು ಎಂದು ಶಾಸಕ ದಿನೇಶ್‌ ಗೂಳೀಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Latest Videos
Follow Us:
Download App:
  • android
  • ios