ಜಿಲ್ಲೆಯ ಕೊನೆ ಭಾಗದ ಜಮೀನಿನಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸಲು, ರೈತರ ಬೆಳೆಗಳನ್ನು ಉಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸೂಚಿಸಿದರು. 

ಮಂಡ್ಯ (ಜೂ.05): ಜಿಲ್ಲೆಯ ಕೊನೆ ಭಾಗದ ಜಮೀನಿನಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸಲು, ರೈತರ ಬೆಳೆಗಳನ್ನು ಉಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್‌ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ರೈತರ ಕೃಷಿಗಾಗಿ ಸಮರ್ಪಕ ವಿದ್ಯುತ್‌ ಅನ್ನು ಬೆಳಗ್ಗೆ ಸಮಯದಲ್ಲಿ ಕಲ್ಪಿಸಿ ಎಂದರು.

ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ಹಾಗೂ ಸೂಚನೆಗಳನ್ನು ನಿಗದಿತ ಸಮಯದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ಒದಗಿಸಬೇಕು. ಅದಕ್ಕೆ ಅಗತ್ಯ ಸಿದ್ಧತೆ ಮತ್ತು ತಂಡಗಳನ್ನು ಮಾಡಿಕೊಂಡು ಅರ್ಹ ಫಲಾನುಭವಿಗಳು ಬಿಟ್ಟುಹೋಗದಂತೆ ನೋಡಿಕೊಳ್ಳಿ ಎಂದು ಹೇಳಿದರು. ರೈತರು ಮತ್ತು ಸಾರ್ವಜನಿಕರ ಕೆಲಸ ಮಾಡಿಕೊಡಲು ತಾಲೂಕು ಕಚೇರಿಗಳಲ್ಲಿ ಅನಗತ್ಯ ವಿಳಂಬ ಹಾಗೂ ಹಣದ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಸಾರ್ವಜನಿಕರ ಕೆಲಸಕ್ಕೆ ವಿಳಂಬ ಮಾಡುವುದು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕರ್ನಾಟಕದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಸಚಿವ ಚಲುವರಾಯಸ್ವಾಮಿ

ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ತೊಂದರೆಗಳಿದ್ದಲ್ಲಿ ಶಾಸಕರ ಗಮನಕ್ಕೆ ತರಬೇಕು. ಜನಪರ ಹೊಸ ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಜಾರಿಗೆ ತರಲಾಗುವುದು.ಜಿಲ್ಲೆಯ ಬಹಳಷ್ಟುರಸ್ತೆಗಳು ಗುಂಡಿಗಳಿಂದ ಕೂಡಿದೆ. ಇಂತಹ ಸಮಸ್ಯೆಗಳಿಗೆ ಕೂಡಲೇ ಯೋಜನೆ ರೂಪಿಸಿ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು.

ಮೈಷುಗರ್‌ ಆರಂಭಕ್ಕೆ ಸರ್ಕಾರ 50 ಕೋಟಿ ರು ಅನುದಾನ ಬಿಡುಗಡೆ ಮಾಡಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ಕಾರ್ಖಾನೆಗೆ ಸಂಬಂಧಿಸಿದಂತೆ ಸಿಎಂರೊಂದಿಗೆ ಸಭೆ ನಡೆಸಲಾಗುವುದು. ಇದಕ್ಕೆ ಬೇಕಿರುವ ಪೂರಕ ಮಾಹಿತಿಯನ್ನು ಸಿದ್ಧ ಮಾಡಿಕೊಳ್ಳಿ ಎಂದು ಹೇಳಿದರು. ಮಳವಳ್ಳಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಮಾತನಾಡಿ, ಮುಂಗಾರು ಆರಂಭವಾಗಲಿದೆ. ಕೃಷಿ ಇಲಾಖೆ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಮಣ್ಣಿನ ಸವಕಳಿಯಾಗದಂತೆ ಫಲವತ್ತತೆ ಕಾಪಾಡುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ನೀರಿನ ಮಿತವ್ಯಯ ಬಳಕೆ ಮೈಕ್ರೋ ಇರಿಗೇಷನ್‌, ಅಂತರ್ಜಲ ಮರುಪೂರಣದ ಬಗ್ಗೆ ಚಿಂತಿಸಿ ಅನುಷ್ಠಾನ ಗೊಳಿಸಬೇಕಿದೆ ಎಂದರು.

ಮುಂದಿನ ತಿಂಗಳು ರಾಜ್ಯ ಬಜೆ್‌ಚ್‌ ಮಂಡನೆಯಾಗಲಿದೆ. ಹೊಸ ಯೋಜನೆಗಳನ್ನು ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಬೇಕು. ಬಜೆಚ್‌ ಮೂಲಕ ಅಭಿವೃದ್ದಿ ಯೋಜನೆಗಳಿಗೆ ಅಗತ್ಯ ಅನುದಾನ ತರುವ ಪ್ರಯತ್ನಕ್ಕೆ ಅಧಿಕಾರಿಗಳು ಸಹಕಾರ ನೀಡುವಂತೆ ಸಲಹೆ ನೀಡಿದರು. ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮಾತನಾಡಿ, ಮುಂಗಾರು ಮಳೆ ಆರಂಭವಾಗಲಿದೆ. ರೈತರಿಗೆ ಅಗತ್ಯ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಎಲ್ಲವನ್ನೂ ಶೇಖರಣೆ ಕಲ್ಪಿಸಲು ಕ್ರಮ ವಹಿಸಬೇಕು ಎಂದರು.

Mandya: ಕೃಷಿ ಸಚಿವ ಚಲುವರಾಯಸ್ವಾಮಿ ಮುಂದಿದೆ ಹಲವು ಸವಾಲುಗಳು!

ಜಿಲ್ಲೆಗೆ ಜಿಲ್ಲಾಸ್ಪತ್ರೆ, ಸೂಪರ್‌ ಸ್ಪಷಾಲಿಟಿ ಆಸ್ಪತ್ರೆ, ಕ್ಯಾನ್ಸರ್‌ ಆಸ್ಪತ್ರೆಯ ಅಗತ್ಯತೆ ಇದೆ. ಯು.ಜಿ.ಡಿ ಸಮಸ್ಯೆ ಹಾಗೂ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಳ್ಳರ ಸಮಸ್ಯೆ ಇದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯ ಸ್ಥಿತಿ ಗತಿ ಹಾಗೂ ಮಳೆ ಹಾನಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಶಾಸಕ ಪಿ.ರವಿಕುಮಾರ್‌, ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಅಪರ ಜಿಲ್ಲಾಧಿಕಾರಿ ಡಾ.ಎಚ್‌. ನಾಗರಾಜು, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.