Asianet Suvarna News Asianet Suvarna News

'ಬಿಬಿಎಂಪಿ ಆಸ್ತಿ ತೆರಿಗೆ ಸೋರಿಕೆ ತಡೆಗಟ್ಟಲು ಕ್ರಮಕೈಗೊಳ್ಳಿ’

ಆದಾಯ ಗಮನದಲ್ಲಿಟ್ಟುಕೊಂಡು ಆಯವ್ಯಯ ಮಂಡಿಸಿ| ಪಾಲಿಕೆ ಬಜೆಟ್‌ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳ ಸಭೆ| ಕಸ ನಿರ್ವಹಣೆ ಪ್ರಕ್ರಿಯೆ ಜತೆಗೆ ಉದ್ಯಾನ, ಶಾಲೆ, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ| ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ| 

Take Action to Prevent BBMP Property Tax Leak in Bengaluru grg
Author
Bengaluru, First Published Feb 27, 2021, 7:46 AM IST

ಬೆಂಗಳೂರು(ಫೆ.27): ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಬೇಕು. ಸೋರಿಕೆಯಾಗುತ್ತಿರುವ ಆಸ್ತಿ ತೆರಿಗೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸಲಹೆ ನೀಡಿದ್ದಾರೆ. 

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೌನ್ಸಿಲ್‌ ಪೌರಸಭಾಂಗಣದಲ್ಲಿ ಬಜೆಟ್‌ ಪೂರ್ವ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ವಿ.ಸೋಮಣ್ಣ, ಅರವಿಂದ ಲಿಂಬಾವಳಿ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಬಹುತೇಕ ಶಾಸಕರು ಈ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಅದಕ್ಕೂ ಮುನ್ನ ಬಿಬಿಎಂಪಿ ಸುಮಾರು 800 ಚದರ ಕಿ.ಮೀ ವ್ಯಾಪ್ತಿಯಲ್ಲಿದ್ದು, 198 ವಾರ್ಡ್‌ಗಳನ್ನು ಒಳಗೊಂಡಿದೆ. ಇದೀಗ ಹೊಸ ಕಾಯ್ದೆಯಲ್ಲಿ 243 ವಾರ್ಡ್‌ಗಳಾಗಿ ಬದಲಾಗುತ್ತಿದ್ದು, ಇನ್ನೂ ಹೆಚ್ಚು ಪ್ರದೇಶಗಳು ಸೇರ್ಪಡೆಯಾಗಲಿವೆ. ಹಾಗಾಗಿ ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಬೇಕಿದೆ. ಅಗತ್ಯ ಸಲಹೆ, ಸೂಚನೆ ನೀಡುವಂತೆ ಪಾಲಿಕೆ ಆಡಳಿತಾಧಿಕಾರಿ ಗೌರವ ಗುಪ್ತ ಮನವಿ ಮಾಡಿದರು.

32 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್‌ಗೆ ಬೀಗ

ನಗರದಲ್ಲಿ ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು, ಸೋರಿಕೆಯಾಗುತ್ತಿರುವ ಆಸ್ತಿ ತೆರಿಗೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡು ಪಾಲಿಕೆಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಆದಾಯವನ್ನು ಹೆಚ್ಚಿಸಲು ಕ್ರಮವಹಿಸಬೇಕು. ‘ಬಿ’ಯಿಂದ ‘ಎ’ ಖಾತಾ ವರ್ಗೀಕರಣ ಮಾಡಿ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವುದು. ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು. ಪಾಲಿಕೆ ಗುತ್ತಿಗೆ ನೀಡಿ ಆಸ್ತಿಗಳಿಂದ ಬಾಕಿ ಹಣ ಸಂಗ್ರಹಿಸಲು ಕ್ರಮವಹಿಸುವುದು. ಪ್ರಮುಖವಾಗಿ ವಸ್ತುಸ್ಥಿತಿ ಆಯವ್ಯಯವನ್ನು ಮಂಡಿಸಲು ಆದ್ಯತೆ ನೀಡಬೇಕೆಂದು ಸಚಿವರು ಹಾಗೂ ಶಾಸಕರು ಸಲಹೆ ನೀಡಿದರು.

ಪಾಲಿಕೆಯು ಕಸ ನಿರ್ವಹಣೆ ಪ್ರಕ್ರಿಯೆ ಜತೆಗೆ ಉದ್ಯಾನ, ಶಾಲೆ, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು. ಬೀದಿ ದೀಪಗಳ, ರಾಜ ಕಾಲುವೆ ನಿರ್ವಹಣೆ, ಪಾದಚಾರಿ ಮಾರ್ಗಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪ್ರಾಮುಖ್ಯತೆ ಕೊಡಬೇಕು. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಟಿಡಿಆರ್‌ ನೀಡುವ ಸಂಬಂಧ ಇರುವ ತೊಡಕುಗಳನ್ನು ನಿವಾರಿಸಿ ರಸ್ತೆ ಅಗಲೀಕರಣಕ್ಕೆ ಒತ್ತು ನೀಡುವುದು. ಹಾಗೆಯೇ 110 ಹಳ್ಳಿಗಳಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು. ಕೆರೆಗಳ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಆಯುಕ್ತ ಎನ್‌.ಮಂಜುನಾಥ್‌, ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಡಿ.ರಂದೀಪ್‌, ಬಸವರಾಜು, ಮನೋಜ್‌ ಜೈನ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios