32 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್‌ಗೆ ಬೀಗ
ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಬೀಗ ಜಡಿದಿದ್ದ ಪಾಲಿಕೆ| ಆಸ್ತಿ ತೆರಿಗೆ ಪಾವತಿಗೆ ಕಳೆದ 15 ದಿನಗಳ ಹಿಂದೆ ನೋಟಿಸ್ ಜಾರಿ| ಸೋಮವಾರದೊಳಗೆ ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಮಾಲ್ ಬಿಬಿಎಂಪಿ ವಶ|
ಬೆಂಗಳೂರು(ಫೆ.25): ಮಲ್ಲೇಶ್ವರದ ಮಂತ್ರಿ ಮಾಲ್ ಕಳೆದ ಮೂರು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬುಧವಾರ ಮಾಲ್‌ಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಬೀಗ ಹಾಕಿಸಿದ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ವಲಯ ಉಪ ಆಯುಕ್ತ ಪ್ರಸನ್ನ ಕುಮಾರ್, ಮಲ್ಲೇಶ್ವರದ ಮಂತ್ರಿ ಮಾಲ್ ಮಾಲೀಕರು ಕಳೆದ ಮೂರು ವರ್ಷ ಹಾಗೂ ಪ್ರಸಕ್ತ ಆರ್ಥಿಕ ವರ್ಷ ಸೇರಿದಂತೆ ಒಟ್ಟು 32 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ತೆರಿಗೆ ಪಾವತಿಗೆ ಕಳೆದ 15 ದಿನಗಳ ಹಿಂದೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೂ ಬಂದ್ ಮಾಡಲಾಗಿತ್ತು.
ಮೆಟ್ರೋಗೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ
ಮಾಲ್‌ನ ಮಾಲೀಕರು ಆಸ್ತಿ ತೆರಿಗೆ ಪಾವತಿಗೆ ಮತ್ತೆ 15 ದಿನ ಸಮಯ ನೀಡುವಂತೆ ಮನವಿ ಮಾಡಿದರು. ಆದರೆ, ಈಗಾಗಲೇ ನೋಟಿಸ್ ನೀಡಿ 15 ದಿನ ಕಾಲಾವಕಾಶ ನೀಡಿದ ಹಿನ್ನೆಲೆಯಲ್ಲಿ ಮತ್ತೆ 15 ದಿನ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಸೋಮವಾರದ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಸೋಮವಾರದೊಳಗೆ ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಮಾಲ್‌ಅನ್ನು ಬಿಬಿಎಂಪಿ ವಶಕ್ಕೆ ಪಡೆಯಲಾಗುವುದು ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಚೆಕ್ ಬೌನ್ಸ್ ಪ್ರಕರಣ ದಾಖಲು:
ಮಂತ್ರಿ ಮಾಲ್‌ನ ಮಾಲೀಕರು ಈ ಹಿಂದೆ ಆಸ್ತಿ ತೆರಿಗೆ ಪಾವತಿಗೆ 10 ಕೋಟಿ ಚೆಕ್ ನೀಡಿದ್ದರು. ಆದರೆ, ಚೆಕ್ ಬೌನ್ಸ್ ಆಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪಾಲಿಕೆ ಕಾನೂನು ಕೋಶದಿಂದ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಬಸವರಾಜು ಮಾಹಿತಿ ನೀಡಿದ್ದಾರೆ.