ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಿ : ಮೈಸೂರು ಜಿಪಂ ಸಿಇಒ ಗಾಯತ್ರಿ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಮುಲಾಜಿಲ್ಲದೇ ಕಾನೂನುಕ್ರಮಗಳನ್ನು ಅನುಸರಿಸಿರೆಂದು ಮೈಸೂರು ಜಿಪಂ ಸಿಇಒ ಗಾಯತ್ರಿ ಸೂಚಿಸಿದರು.
ಹುಣಸೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಮುಲಾಜಿಲ್ಲದೇ ಕಾನೂನುಕ್ರಮಗಳನ್ನು ಅನುಸರಿಸಿರೆಂದು ಮೈಸೂರು ಜಿಪಂ ಸಿಇಒ ಗಾಯತ್ರಿ ಸೂಚಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಚುನಾವಣಾ ಕರ್ತವ್ಯದಲ್ಲಿರುವ ಎಫ್.ಎಸ್.ಟಿ, ಎಸ್.ಎಸ್.ಟಿ, ವಿವಿಟಿ ಸೇರಿದಂತೆ ವಿವಿಧ ತಂಡಗಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚೆಕ್ ಪೋಸ್ಟ್ ಗಳಲ್ಲಿ ಪತ್ತೆಯಾಗುವ ಲಕ್ಷಗಟ್ಟಲೆ ಹಣ (10 ಲಕ್ಷಕ್ಕೂ ಹೆಚ್ಚು ಪ್ರಮಾಣದ ಹಣ) ಪತ್ತೆಯಾದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುವ, ಅಧಿಕ ಪ್ರಮಾಣದ ಅಕ್ರಮ ಮದ್ಯ ಸಾಗಣೆ ಪತ್ರೆಯಾದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಿ ಹಸ್ತಾಂತರಿಸುವ ಕಾರ್ಯ ಮುಂತಾದ ಎಲ್ಲ ಕ್ರಮಗಳ ಕುರಿತು ಖಚಿತ ಮಾಹಿತಿ ಪಡೆಯಿರಿ. ನಿಮ್ಮ ಕರ್ತವ್ಯ ನಿಷ್ಠೆ ಮತದಾರರಲ್ಲಿ ಚುನಾವಣೆ ಕುರಿತು ವಿಶ್ವಾಸ ಮೂಡಿಸುವಂತಿರಬೇಕು. ಸಿ ವಿಜಿಲ್ ಆಪ್ ಮೂಲಕ ಸಾರ್ವಜನಿಕರು ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ದೂರು ನೀಡಲು ರೂಪಿಸಿರುವ ಆಪ್ ಆಗಿದ್ದು, ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಬೇಕು. ಸ್ವೀಪ್ ವೇದಿಕೆಯ ಮೂಲಕ ಸಾರ್ವಜನಿಕರಲ್ಲಿ ಚುನಾವಣಾ ಮಹತ್ವದ ಕುರಿತು ಮಾಹಿತಿ ನೀಡುವುದು ಅತ್ಯವಶ್ಯಕ. ಸರ್ಕಾರದ ಎಲ್ಲ ಕಾರ್ಯಕ್ರಮ ವೇದಿಕೆಗಳಲ್ಲು ಸ್ವೀಪ್ ಯೋಜನೆಯನ್ನು ಭಾಗವಾಗಿ ಪರಿಗಣಿಸಿ ಮಾಹಿತಿ ನೀಡಿರಿ. ಇಎಸ್ಎಂಎಸ್ ಆಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಅಪ್ ಲೋಡ್ ಮಾಡುವ ಕಾರ್ಯ ಕಟ್ಟುನಿಟ್ಟಾಗಿ ಮಾಡಿರಿ ಎಂದು ಸೂಚಿಸಿದರು.
ಅಬಕಾರಿ ಇಲಾಖೆಯ ಡಿವೈಎಸ್.ಪಿ. ವಿಜಯಕುಮಾರ್ ಚುನಾವಣಾ ಸಂದರ್ಭದಲ್ಲಿ ಇಲಾಖೆ ಅನುಸರಿಸುವ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ನಗರ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್, ಖಜಾನೆಯ ಸಹಾಯಕ ನಿರ್ದೇಶಕ ರವಿಕುಮಾರ್, ಚುನಾವಣಾ ತಾಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಮತ್ತು ವಿವಿಧ ತಂಡಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.