ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ: ಸಚಿವ ಎಚ್.ಕೆ. ಪಾಟೀಲ
ಐಹೊಳೆ ಪಾರಂಪರಿಕ ತಾಣದಲ್ಲಿ 50 ಕೊಠಡಿಗಳುಳ್ಳ ರೆಸ್ಟೋರೆಂಟ್ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಬೋರ್ಡ್ ಸಭೆಯಲ್ಲಿ ನಿರ್ಣಯಿಸಲಾಗಿದೆ. ಅದು 2 ಸ್ಟಾರ್ ಮಾದರಿಯಲ್ಲಿ ಇರಲಿದೆ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ
ಬಾಗಲಕೋಟೆ(ಡಿ.30): ಜಿಲ್ಲೆಯಲ್ಲಿರುವ ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಮೂಲಕ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸವಾಗಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾದಾಮಿ, ಪಟ್ಟದಕಲ್ಲು, ಐಹೊಳೆ ಒಳಗೊಂಡಂತೆ ಚಾಲುಕ್ಯ ಪ್ರಾಧಿಕಾರ ರಚನೆಗೆ ವಿಧೇಯಕ ಮಂಡನೆಯಾಗಿದೆ. ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಯವರು ಬಹುತೇಕ ಭಾಗ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ ಸ್ಮಾರಕಗಳ ರಕ್ಷಣೆ ನಮ್ಮ ಮೇಲಿದೆ. ಅವುಗಳ ಪರಿಸ್ಥಿತಿ ಅವಲೋಕಿಸಲಾಗಿದೆ. ಸಂರಕ್ಷಣೆಗೆ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ ಎಂದರು.
ಸಿಎಂ, ಪಿಎಂ ಆಗೋ ಯೋಗ್ಯತೆ ಮಲ್ಲಿಕಾರ್ಜುನ ಖರ್ಗೆಗಿದೆ: ಸಚಿವ ಶರಣಬಸಪ್ಪ ದರ್ಶನಾಪುರ
ಪಾರಂಪರಿಕ ತಾಣಗಳಲ್ಲಿ ಇರುವ ಸಮಸ್ಯೆಗಳನ್ನು ಬಗ್ಗೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಈಗಿನಿಂದಲೇ ಎಚ್ಚೆತ್ತುಕೊಂಡು ಸ್ಮಾರಕಗಳ ನಿರ್ವಹಣೆಗೆ ಮುಂದಾಗಬೇಕು. ಈ ಕುರಿತು ಪ್ರತಿ ತಿಂಗಳು ಸಭೆ ನಡೆಸಲು ಸೂಚಿಸಿದ ಸಚಿವರು, ಸ್ಮಾರಕಗಳಿಗೆ ಹೊಂದಿಕೊಂಡ ಕುಟುಂಬಗಳ ಸ್ಥಳಾಂತರಕ್ಕೆ ಜನರು ಸಹಕಾರ ನೀಡಲು ಮುಂದಾಗಿದ್ದು, ಅವರ ಸ್ಥಳಾಂತಕ್ಕೆ ಕ್ರಮವಹಿಸಬೇಕು. ಜನಪ್ರತಿನಿಧಿಗಳ ಸಹಕಾರ ಪಡೆದು ಸ್ಥಳಾಂತರ ಕಾರ್ಯ ಪ್ರಾರಂಭಿಸಬೇಕು ಎಂದೂ ಸೂಚಿಸಿದರು.
ಇದಕ್ಕಾಗಿ ಶೀಘ್ರದಲ್ಲಿಯೇ ₹ 3 ಕೋಟಿ ಅನುದಾನ ಮಂಜೂರು ಮಾಡಲಾಗುತ್ತಿದ್ದು, ಐಹೊಳೆಯಲ್ಲಿರುವ 114 ಕುಟುಂಬಗಳ ಸ್ಥಳಾಂತರಕ್ಕೆ ಒಟ್ಟು 20 ಎಕರೆ ಜಾಗದ ಅಗತ್ಯವಿದ್ದು, ಜಾಗ ಗುರುತಿಸಿ, ಖರೀದಿ ಮಾಡಲು ಕ್ರಮ ಕೈಗೊಳ್ಳಬೇಕು. ಸ್ಮಾರಕಗಳ ಅಭಿವೃದ್ಧಿಗೆ ಅಡ್ಡಿಯಾಗಿರುವ ಕುಟುಂಬಗಳ ಸ್ಥಳಾಂತರ ಮೊದಲು ಮಾಡಿದಲ್ಲಿ ಮುಂದಿನ ಕಾರ್ಯ ಸುಲಭವಾಗಲಿದೆ. ಇದಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಸಲಹಾ ಸಮಿತಿ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತಿಂಗಳ ಹಿಂದೆ ಐಹೊಳೆಗೆ ಭೇಟಿ ನೀಡಿ ಅಲ್ಲಿರುವ ಸ್ಮಾರಕಗಳ ವೀಕ್ಷಣೆ ಮಾಡಲಾಗಿದೆ. ಸ್ಮಾರಕಗಳಲ್ಲಿ ಕೃಷಿ ಚಟುವಟಿಕೆ ಕೈಗೊಂಡಿರುವುದು ಗಮನಕ್ಕೆ ಬಂದಿದೆ. ಐಹೊಳೆಯ ಅರ್ಧ ಚಿತ್ರಣ ತಿಳಿಯಲಾಗಿದೆ. ಬಾದಾಮಿ ಮತ್ತು ಪಟ್ಟದಕಲ್ಲಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಬಗ್ಗೆ ವೀಕ್ಷಣೆ ಮಾಡಿ, ಆ ಭಾಗದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂಬುದನ್ನು ಚರ್ಚಿಸಲಾಗುವುದೆಂದು ತಿಳಿಸಿದರು.
ಪಾರಂಪರಿಕ ತಾಣಗಳ ರಕ್ಷಣೆ ಆಗಬೇಕು. ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರಲು ಅನುಕೂಲ ಮಾಡಬೇಕು. ಮನೆಗಳ ಸಂಪೂರ್ಣ ಸ್ಥಳಾಂತರಗೊಂಡಾಗ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಸಭೆಯಲ್ಲಿ ತಿಳಿಸಿದರು. ಬಾದಾಮಿ ಅಭಿವೃದ್ಧಿ ಕುರಿತು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾಹಿತಿ ನೀಡಿದರು. ಶಾಸಕ ಎಚ್.ವೈ. ಮೇಟಿ ಐಹೊಳೆಗೆ ಸಂಬಂಧಿಸಿದಂತೆ ಕುಟುಂಬಗಳ ಸ್ಥಳಾಂತಕ್ಕೆ ಬೇಕಾಗುವ ಜಾಗ ಖರೀದಿಗೆ ಕ್ರಮವಹಿಸುವ ಕಾರ್ಯ ಮಾಡಲಾಗುವುದೆಂದು ತಿಳಿಸಿದರು.
ಯತ್ನಾಳ್ ಹೇಳಿಕೆಯಿಂದ ತನಿಖೆಗೆ ಬಲ, ದಾಖಲೆ ಬಿಡುಗಡೆ ಮಾಡಲಿ: ಪ್ರಿಯಾಂಕ್ ಖರ್ಗೆ
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕಿ ಕಾವ್ಯಶ್ರೀ, ಹುನಗುಂದ ತಹಸೀಲ್ದಾರ್ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಐಹೊಳೆ ಪಾರಂಪರಿಕ ತಾಣದಲ್ಲಿ 50 ಕೊಠಡಿಗಳುಳ್ಳ ರೆಸ್ಟೋರೆಂಟ್ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಬೋರ್ಡ್ ಸಭೆಯಲ್ಲಿ ನಿರ್ಣಯಿಸಲಾಗಿದೆ. ಅದು 2 ಸ್ಟಾರ್ ಮಾದರಿಯಲ್ಲಿ ಇರಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.