ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಟ: 2 ವರ್ಷದ ಮಗುವಿಗೆ ನೋಟಿಸ್!
ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ 2 ವರ್ಷದ ಮಗುವಿಗೆ ನೋಟಿಸ್| ಗದಗ ಜಿಲ್ಲೆಯ ಮುಂಡರಗಿಯಲ್ಲಿ 2 ವರ್ಷದ ಈ ಮಗುವಿಗೆ ಕೊರೋನಾ ಪಾಸಿಟಿವ್ ಬಂದಿತ್ತು| ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು| ಮಗು ಪಾಲಕರ ಜತೆ ಹೊರಗೆ ಓಡಾಟ ಮೊಬೈಲ್‌ನಲ್ಲಿ ದಾಖಲು|
ಮುಂಡರಗಿ(ಜು.13): ಕೊರೋನಾ ಪಾಜಿಟಿವ್ ಆಗಿರುವ ವ್ಯಕ್ತಿಗಳು ಚಿಕಿತ್ಸೆ ಮುಗಿಸಿಕೊಂಡು ಮನೆಗೆ ಬಂದ ನಂತರ 14 ದಿನಗಳ ಕಾಲ ಎಲ್ಲರೂ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸರ್ಕಾರದ ನಿಯಮವಿದೆ. ಆ ನಿಯಮವನ್ನು ಮೀರಿದ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ 2 ವರ್ಷದ ಮಗುವಿಗೆ ಮುಂಡರಗಿ ತಹಸೀಲ್ದಾರ್ ಇತ್ತೀಚೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ಕೊರೋನಾ ಪಾಸಿಟಿವ್ ವ್ಯಕ್ತಿಗಳ ಮೊಬೈಲ್ ನಂಬರ್ ದಾಖಲಿಸಿಕೊಳ್ಳಲಾಗುತ್ತದೆ. ಚಿಕಿತ್ಸೆ ಮುಗಿಸಿಕೊಂಡು ಮನೆಗೆ ತೆರಳಿದ ನಂತರ 14 ದಿನಗಳ ಕಾಲ ಹೋಂ ಕ್ವಾರೆಂಟೈನ್‌ಗೆ ಸೂಚಿಸಲಾಗುತ್ತದೆ. ಪಾಸಿಟಿವ್ ಬಂದ ವ್ಯಕ್ತಿಯ ಕುಟುಂಬದವರಿಗೂ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ಆದ್ದರಿಂದ ಸರ್ಕಾರ ಅವರು ಆಸ್ಪತ್ರೆಗೆ ದಾಖಲಾದಾಗ ನೀಡುವ ಮೊಬೈಲ್ ಸಂಖ್ಯೆಯನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಾರೆ. ನಿತ್ಯವೂ ಆ ಕುಟುಂಬದವರು ಮನೆಯಲ್ಲಿ ಹೋಂ ಕ್ವಾರೆಂಟೈನ್ ಆಗಿರುವ ಫೋಟೋಗಳನ್ನು ಸರ್ಕಾರಕ್ಕೆ ಕಳುಹಿಸಬೇಕು.
ಕರ್ನಾಟಕದ ಮತ್ತೋರ್ವ ಮಂತ್ರಿಗೆ ಕೊರೋನಾ ಭೀತಿ: ಇಡೀ ಕುಟುಂಬವೇ ಕ್ವಾರಂಟೈನ್
ಮುಂಡರಗಿಯಲ್ಲಿ 2 ವರ್ಷದ ಈ ಮಗುವಿಗೆ ಪಾಸಿಟಿವ್ ಬಂದಿತ್ತು. ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಆಕೆಯ ಕುಟುಂಬದವರ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಲಾಗಿತ್ತು. ಮಗು ಪಾಲಕರ ಜತೆ ಹೊರಗೆ ಓಡಾಡಿದ್ದು ದಾಖಲಾಗಿದೆ. ಆ ಪ್ರಕಾರ ಮಗುವಿನ ಹೆಸರಿನಲ್ಲಿ ನೋಟಿಸ್ ನೀಡಿರುವುದಾಗಿ ಮುಂಡರಗಿ ತಹಸೀಲ್ದಾರ್ ಜಿ.ಬಿ.ಜಕ್ಕನಗೌಡರ ತಿಳಿಸಿದರು.
ಸರ್ಕಾರದ ಆದೇಶವನ್ನು ಪಾಲಿಸುವುದಕ್ಕಾಗಿ ಮಗುವಿಗೆ ನೋಟಿಸ್ ನೀಡಲಾಗಿದೆ. ಅಲ್ಲದೇ ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಹೊರಗಡೆಗೆ ಓಡಾಡದಂತೆ ಮಗುವೂ ಸೇರಿದಂತೆ 10 ಜನರಿಗೆ ಈಚೆಗೆ ನೊಟೀಸ್ ನೀಡಿದ್ದು, ಅವರ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.