ಉಡುಪಿ(ಜೂ.10): ಕೊರೋನಾ ಲಾಕ್‌ ಡೌನ್‌ ನಿಂದಾಗಿ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಶಾಲಾರಂಭ ವಿಳಂಬವಾಗಲಿದ್ದು, ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶಾಲಾ ಪಠ್ಯವನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಮಂಗಳವಾರ ಉಡುಪಿ ಜಿ. ಪಂ. ಸಭಾಂಗಣದಲ್ಲಿ ಉಡುಪಿ, ಉತ್ತರ ಕನ್ನಡ ಮತ್ತು ದ. ಕ. ಜಿಲ್ಲಾಡಳಿತದ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಎಸ್‌ಎ​ಸ್‌ಎ​ಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆನ್‌ಲೈನ್ ಪಾಠ: ಶಿಕ್ಷಣ ಸಚಿವರ ವಿರುದ್ಧ ಸ್ವಪಕ್ಷ ಶಾಸಕ ಹರತಾಳು ಹಾಲಪ್ಪ ಗರಂ

ಶಾಲಾ ಪಠ್ಯವನ್ನು ಕಡಿಮೆಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಮುಂದಿನ ತರಗತಿಗೆ ಅಗತ್ಯವಿರುವ ಪಠ್ಯ ಕೊರತೆಯಾಗದಂತೆ, ಸೀಮಿತ ಅವಧಿಯಲ್ಲಿ ಬೋಧಿಸಲು ಸಾಧ್ಯವಾಗುವ ಪಾಠ ಒಳಗೊಳ್ಳುವಂತೆ ಪಠ್ಯಕ್ರಮ ಸಿದ್ಧಪಡಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.