ಆನ್‌ಲೈನ್ ಪಾಠ: ಶಿಕ್ಷಣ ಸಚಿವರ ವಿರುದ್ಧ ಸ್ವಪಕ್ಷ ಶಾಸಕ ಹರತಾಳು ಹಾಲಪ್ಪ ಗರಂ
ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಐಟಿಬಿಟಿ ಸಚಿವರಾದ ಡಾ.ಅಶ್ವತ್ಥನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರು ಬೆಂಗಳೂರಿನವರಾಗಿರುವುದರಿಂದ ಅವರಿಗೆ ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಅರಿವಿಲ್ಲ. ಮೊದಲು ಇಂಟರ್‌ನೆಟ್ ಸೌಲಭ್ಯ ಕಲ್ಪಿಸಿ ತದನಂತರ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಕಲ್ಪಿಸಲಿ ಎಂದು ಸಾಗರ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಆಗ್ರಹಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಜೂ.10): ಆನ್‌ಲೈನ್ ಪಾಠ ಕುರಿತು ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಶಾಸಕ ಎಚ್. ಹಾಲಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಾಲೂಕಿನ ಕಾನುಗೋಡು ಗ್ರಾಮದಲ್ಲಿ ಮಂಗಳವಾರ 50 ಲಕ್ಷ ರುಪಾಯಿ ಅನುದಾನದಲ್ಲಿ ನಿರ್ಮಿಸಲಾದ ಸಿಮೆಂಟ್ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯವೇ ಇಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಚಿವರು ಆನ್‌ಲೈನ್ ಮೂಲಕ ಪಾಠದ ವ್ಯವಸ್ಥೆ ಮಾಡುವುದಾಗಿ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಮೊದಲು ಇಂಟರ್‌ನೆಟ್ ಸೌಲಭ್ಯ ಕಲ್ಪಿಸಿ ತದನಂತರ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಕಲ್ಪಿಸಲಿ ಎಂದು ಆಗ್ರಹಿಸಿದರು.
ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಐಟಿಬಿಟಿ ಸಚಿವರಾದ ಡಾ.ಅಶ್ವತ್ಥನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರು ಬೆಂಗಳೂರಿನವರಾಗಿರುವುದರಿಂದ ಅವರಿಗೆ ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಅರಿವಿಲ್ಲ. ಇದರಿಂದಾಗಿ ಅನ್‌ಲೈನ್ ಶಿಕ್ಷಣ ವ್ಯವಸ್ಥೆಯಿಂದಾಗಿ ಆಗುವ ಅನಾನುಕೂಲದ ಬಗ್ಗೆ ಅವರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಜುಲೈ ತಿಂಗಳಲ್ಲಿ ಸೋಂಕು ಭಾರೀ ಸ್ಫೋಟ, ಪರಿಸ್ಥಿತಿ ಎದುರಿಸಲು ಸರ್ಕಾರದಿಂದ ಸರ್ವಸಿದ್ಧ
ಈಗಾಗಲೆ ಅನೇಕ ಯುವಕ, ಯುವತಿಯರು ಕೊರೋನಾ ಹಿನ್ನೆಲೆಯಲ್ಲಿ ತಮ್ಮ ಹಳ್ಳಿಗಳಿಗೆ ಬಂದಿದ್ದಾರೆ. ಇವರಿಗೆ ವರ್ಕ್ ಫ್ರಂ ಹೋಮ್ ಯೋಜನೆ ಜಾರಿಗೆ ತರುವುದಾಗಿ ಐಟಿಬಿಟಿ ಸಚಿವರು ಹೇಳಿದರೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ್ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳುತ್ತಿದ್ದಾರೆ. ಟವರ್ ಇಲ್ಲ, ಇಂಟರ್‌ನೆಟ್ ಸೌಲಭ್ಯ ಕಲ್ಪಿಸದೆ ಸುಳ್ಳು ಭರವಸೆ ನೀಡಬಾರದು. ಇಷ್ಟು ದಿನ ಮಲೆನಾಡು ಭಾಗದಲ್ಲಿ ಐಟಿಬಿಟಿ ಕೆಲಸ ಮಾಡುವವರು, ಉನ್ನತ ಶಿಕ್ಷಣ ಪಡೆಯುತ್ತಿರುವವರು ಟವರ್ ಸಿಗುತ್ತದೆ ಎಂದು ಮನೆಯ ಹೆಂಚಿನ ಮೇಲೆ, ಗುಡ್ಡಬೆಟ್ಟಗಳ ಮೇಲೆ ಹತ್ತಿ ಪ್ರಯತ್ನ ನಡೆಸುತ್ತಿದ್ದರು. ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಹೇಗೆ ಕೊಡುತ್ತೀರಿ ಎಂದು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಇಂಟರ್‌ನೆಟ್ ಸೌಲಭ್ಯ ಸರಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸಂಸದರಾದ ಬಿ.ವೈ.ರಾಘವೇಂದ್ರ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಫಲಪ್ರದವಾಗಿಲ್ಲ. ಪಶ್ಚಿಮಘಟ್ಟದ ಕೆಳ ಮತ್ತು ಮೇಲ್ಭಾಗದಲ್ಲಿ ಇಂಟರ್‌ನೆಟ್ ಸೌಲಭ್ಯ ಸಿಗದೆ ಇರುವ ಬಗ್ಗೆ ಈ ಭಾಗವನ್ನು ಪ್ರತಿನಿಸುವ 7 ಸಂಸದರು ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್‌ಕುಮಾರ್ ಕಟಿಲ್ ಅವರಿಗೆ ಮನವಿ ಮಾಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಇಂಟರ್‌ನೆಟ್ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಟವರ್ ನಿರ್ಮಿಸಿದ ನಂತರ ರಾಜ್ಯ ಸರ್ಕಾರ ಆನ್‌ಲೈನ್ ಶಿಕ್ಷಣ, ವರ್ಕ್ ಫ್ರಂ ಹೋಮ್‌ನಂತಹ ಯೋಜನೆಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಚೇತನರಾಜ್ ಕಣ್ಣೂರು, ಗೌತಮ್, ವಿನಾಯಕರಾವ್, ಬಿ.ಟಿ. ರವೀಂದ್ರ, ಗ್ರಾಮಸ್ಥರಾದ ರಾಘವೇಂದ್ರ, ನಾರಾಯಣಮೂರ್ತಿ, ಬಿ.ಎನ್.ಶ್ರೀಕರ್, ಸುಬ್ರಹ್ಮಣ್ಯ, ವಿನಯಕುಮಾರ್, ಶ್ರೀಕಾಂತ್ ಜಿ.ಪಿ., ಪ್ರಭಾಕರ್ ಶೆಟ್ಟಿಹಾಜರಿದ್ದರು.