'ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಹೆಸರಿಡಿ'
* ಬೆಳಗಾವಿಯಲ್ಲಿ ವಿವಿಧ ಮಠಾಧೀಶರು ಒಕ್ಕೊರಲಿನಿಂದ ಒತ್ತಾಯ
* ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು
* ಅಗತ್ಯ ಬಿದ್ದರೆ ಮಠಾಧೀಶರ ನಿಯೋಗ ಪ್ರಧಾನಿ ಮೋದಿ ಬಳಿಗೆ ಹೋಗಲು ಸಿದ್ಧ
ಬೆಳಗಾವಿ(ಅ.02): ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ ಹೆಸರು ಹಾಗೂ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನದ(New Parliament) ಕಟ್ಟಡಕ್ಕೆ ಅನುಭವ ಮಂಟಪ ಹೆಸರಿಡಬೇಕು ಎಂದು ರಾಜ್ಯದ ಮಠಾಧೀಶರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ಶುಕ್ರವಾರ ನಡೆದ ಮಠಾಧೀಶರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗದಗ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಮಠಾಧೀಶರು ಭಾರತದ ಇತಿಹಾಸದಲ್ಲಿ 12 ನೇ ಶತಮಾನ ಚಿರಸ್ಮರಣೀಯವಾದುದು. ಬಸವೇಶ್ವರರು ಶರಣ ಸಮೂಹದೊಂದಿಗೆ ಸಮಾನತೆ, ಕಾಯಕ, ದಾಸೋಹ ತತ್ವಗಳ ಅಡಿಯಲ್ಲಿ ಅನುಭವ ಮಂಟಪ(Anubhava Mantap) ಸ್ಥಾಪಿಸಿ ಆ ಮೂಲಕ ಜಾತಿ, ಮತ, ಪಂಥಗಳ ಭೇದವಿಲ್ಲದೇ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿರುವುದು ಇತಿಹಾಸವಾಗಿದೆ ಎಂದರು.
ಬಸವಣ್ಣನವರು(Basavanna) ಅನುಭವ ಮಂಟಪದ ಮೂಲಕ 12ನೇ ಶತಮಾನದಲ್ಲೇ ಜಗತ್ತಿನ ಮೊಟ್ಟಮೊದಲ ಪ್ರಜಾಸಂಸತ್ತನ್ನು ಜಾರಿಗೆ ತಂದರು. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿ. ಇಡೀ ವಿಶ್ವದಲ್ಲಿ ಪ್ರಜಾಸತ್ತಾತ್ಮಕ ಹಾಗೂ ಮಾನವೀಯ ಮೌಲ್ಯಗಳು ಅಂದಿನ ಅನುಭವ ಮಂಟಪದ ಮೂಲಕ ಪ್ರಪ್ರಥಮವಾಗಿ ಪ್ರಸಾರಗೊಂಡಿರುವುದು ಐತಿಹಾಸಿಕ ಸತ್ಯ. ಹಾಗಾಗಿ, ಕೇಂದ್ರ ಸರ್ಕಾರ ನೂತನವಾಗಿ ನಿರ್ಮಿಸಿರುವ ಸಂಸತ್ ಭವನದ ಕಟ್ಟಡಕ್ಕೆ ಅನುಭವ ಮಂಟಪ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಭದ್ರತೆ ಇಲ್ಲದೆ ಹೊಸ ಸಂಸತ್ ಭವನ ಜಾಗಕ್ಕೆ ಪ್ರಧಾನಿ ಮೋದಿ ವಿಸಿಟ್! ಪೋಟೋಗಳು
ಅದರಂತೆ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿಯವರು ಕರ್ನಾಟಕದ ಗಡಿಭಾಗದಲ್ಲಿ ನೆಲೆನಿಂತು ಬಡ ಗ್ರಾಮೀಣ ಮಕ್ಕಳಿಗೆ ಅನ್ನ, ಆಶ್ರಯ ಕಲ್ಪಿಸಿ ದೇಶದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪುನರುತ್ಥಾನಕ್ಕೆ ಕಾರಣರಾಗಿದ್ದಾರೆ. ಜಾತಿ ಮತ, ಪಂಥಗಳ ಭೇದವಿಲ್ಲದೇ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದರು. ಬಸವಾದಿ ಶರಣರ ಕಾಯಕ, ದಾಸೋಹ ತತ್ವಗಳ ತಳಹದಿಯಲ್ಲಿ ಪ್ರಸಾದ ನಿಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿಸತತವಾಗಿ ಏಳು ದಶಕಗಳ ಕಾಲ ಮುನ್ನಡೆಸಿಕೊಂಡು ಬಂದ ಅವರು ಕರ್ನಾಟಕ ಕಂಡ ಅಪ್ರತಿಮೆ ಕಾಯಕ ಯೋಗಿಗಳು. ಕರ್ನಾಟಕ ಏಕೀಕರಣ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ಸ್ವಾತಂತ್ರ್ಯಯೋಧರಿಗೆ ಅನ್ನ, ಆಶ್ರಯನೀಡಿ ಸಂರಕ್ಷಿಸಿದರು. ರಾಷ್ಟ್ರೀಯ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅವರ ಕರ್ಮಭೂಮಿ ಬೆಳಗಾವಿಯಲ್ಲಿ ನವೀಕರಣಗೊಂಡಿರುವ ರೈಲ್ವೆ ನಿಲ್ದಾಣಕ್ಕೆ ಡಾ.ನಾಗನೂರು ಶಿವಬಸವ ಸ್ವಾಮೀಜಿ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬೆಳಗಾವಿ(Belagavi) ರೈಲ್ವೆ ನಿಲ್ದಾಣಕ್ಕೆ ಶಿವಬಸವ ಸ್ವಾಮೀಜಿ ಹಾಗೂ ಸಂಸತ್ ಭವನಕ್ಕೆ ಅನುಭವ ಮಂಟಪ ಹೆಸರಿಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅಲ್ಲದೇ, ರಾಜ್ಯದ ಎಲ್ಲ ಸಂಸದರನ್ನು ಭೇಟಿಯಾಗಿ ಈ ಕುರಿತು ಮನವರಿಕೆ ಮಾಡಲಾಗುವುದು. ಅಗತ್ಯ ಬಿದ್ದರೆ ಮಠಾಧೀಶರ ನಿಯೋಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿಗೆ ಹೋಗಲು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿಡಸೋಸಿ ದುರುದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಕಿತ್ತೂರು ಚನ್ನಮ್ಮನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ವಿವಿಧ ಮಠಾಧೀಶರು, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರೈತ ಮುಖಂಡ ಸಿದಗೌಡ ಮೋದಗಿ ಉಪಸ್ಥಿತರಿದ್ದರು.