ಹೊಸ ಸಂಪ್ರದಾಯಕ್ಕೆ ನಾಂದಿ, ಮಸೀದಿ ಪ್ರವೇಶಿಸಿದ ಸ್ವಾಮೀಜಿಗಳು, ಮಹಿಳೆಯರು

ಗವಿಸಿದ್ಧೇಶ್ವರ ಮಹಾಸ್ವಾಮೀಜಿ, ಚೈತ್ಯಾನಂದ ಸ್ವಾಮೀಜಿಗಳಿಂದ ಮಸೀದಿ ಪ್ರವೇಶ| ಜಮಾತೆ ಇಸ್ಲಾಂ ಹಿಂದ್‌ ಸಂಘಟನೆಯಿಂದ ಹಮ್ಮಿಕೊಂಡಿದ್ದ ಮಸೀದಿ ಸಂದರ್ಶನ ಕಾರ್ಯಕ್ರಮ| 500ಕ್ಕೂ ಹೆಚ್ಚು ಸಾರ್ವಜನಿಕರಿಂದ ಮಸೀದಿ ಪ್ರವೇಶ, ಮಸೀದಿಯಲ್ಲಿಯೇ ಫಲಾಹಾರ ಸ್ವೀಕಾರ| ಹೊಸ ಸಂಪ್ರದಾಯಕ್ಕೆ ನಾಂದಿ ಕೊಪ್ಪಳ ಜಮಾತೆ ಇಸ್ಲಾಂ ಹಿಂದ್‌ ಸಂಘಟನೆ| 

Swamiji and Women Enter to Masjid in Koppal

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.09): ಈಗಿರುವ ಸಂಪ್ರದಾಯದಂತೆ ಸಾಮಾನ್ಯವಾಗಿ ಮಸೀದಿಯಲ್ಲಿ ಅನ್ಯ ಧರ್ಮೀಯರಿಗೆ ಮಹಿಳೆಯರಿಗೆ, ಪ್ರವೇಶ ಇರಲಿಲ್ಲ. ಆದರೆ ಜಮಾತೆ ಇಸ್ಲಾಂ ಹಿಂದ್‌ ಸಂಘಟನೆ ಇಂತಹದೊಂದು ಸಂಪ್ರದಾಯದಲ್ಲಿ ಬ್ರೇಕ್‌, ಮಸೀದಿಗೆ ಅನ್ಯ ಧರ್ಮೀಯರು, ಮಹಿಳೆಯರು ಹಾಗೂ ಸ್ವಾಮೀಜಿಗಳನ್ನು ಆಹ್ವಾನ ನೀಡುವ ಮೂಲಕ, ಹೊಸ ಸಂಪ್ರದಾಯಕ್ಕೆ ಕೊಪ್ಪಳದಲ್ಲಿ ನಾಂದಿ ಹಾಡಿದೆ.

ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ, ಆಹ್ವಾನದ ಮೇರೆಗೆ, ಕೊಪ್ಪಳ ನಗರದ ಸ್ಟೇಶನ್‌ ರಸ್ತೆಯಲ್ಲಿರುವ ಮಸೀದಿಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ವಿವೇಕಾನಂದ ಆಶ್ರಮದ ಶ್ರೀ ಚೈತ್ಯಾನಂದ ಮಹಾಸ್ವಾಮಿಗಳು, ಭೇಟಿ ನೀಡಿ ಮಸೀದಿಯಲ್ಲಿ ನಮಾಜ್‌ ಮಾಡುವ ಸ್ಥಳ ಸೇರಿದಂತೆ ಒಳಾಂಗಣದಲ್ಲಿ ನಡೆಯುವ ಚಟುವಟಿಕೆ ಕುರಿತು ಮುಸ್ಲಿಂ ಮುಖಂಡರಿಂದ ಮಾಹಿತಿ ಪಡೆದುಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿನಿತ್ಯ ನಡೆಯುವ ನಮಾಜ್‌ ಹಾಗೂ ಧಾರ್ಮಿಕ ಕಾರ್ಯಕ್ರಮಗಳು, ಮಸೀದಿಯ ಒಳ ಪ್ರವೇಶಿಸುವ ಪೂರ್ವದಲ್ಲಿ ಅಂಗಾಂಗ ಶುದ್ಧಿ ಸೇರಿದಂತೆ ಮುಸ್ಲಿಂ ಸಮುದಾಯದವರು ಮಸೀದಿಯಲ್ಲಿ ಕೈಗೊಳ್ಳುವ ಧಾರ್ಮಿಕ ವಿಧಿ-ವಿಧಾನಗಳ ಕುರಿತು ಸ್ವಾಮೀಜಿಗಳು ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.ದೇಶದಾದ್ಯಂತ ಮಸೀದಿ ಸಂದರ್ಶನವನ್ನು ಹಮ್ಮಿಕೊಂಡಿರುವ ಜಮಾತೆ ಇಸ್ಲಾಂ ಹಿಂದ್‌ ಸಂಘಟನೆ, ತೆರೆದ ಮನಸ್ಸಿನ ಭಾವನೆಯನ್ನು ಬಿತ್ತುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದೆ.

ಅನ್ಯ ಧರ್ಮೀಯರ ಭೇಟಿ:

ಮಸೀದಿ ಸಂದರ್ಶನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಿಂದೂ, ಜೈನ, ಸಿಖ್‌ ಧರ್ಮ ಸೇರಿದಂತೆ ನಾನಾ ಕೋಮಿನ ಜನಾಂಗದವರು ಭೇಟಿ ನೀಡಿದರು. ಇದುವರೆಗೂ ಮಸೀದಿಯಲ್ಲಿ ಪ್ರವೇಶವೇ ಇಲ್ಲ ಎನ್ನುವ ಭಾವನೆಯಿಂದ ದೂರ ಉಳಿದಿದ್ದ ಅನ್ಯ ಧರ್ಮೀಯರು, ಕುತೂಹಲದಿಂದಲೇ ಭೇಟಿ ನೀಡುತ್ತಿರುವುದು ಕಂಡು ಬಂದಿತು. ಬೆಳಗ್ಗೆ 8ಕ್ಕೆ ಪ್ರಾರಂಭವಾದ ಸಂದರ್ಶನ ಸಂಜೆ 5 ಗಂಟೆಯವರೆಗೂ ನಿರಂತರವಾಗಿ ನಡೆಯಿತು. 500ಕ್ಕೂ ಹೆಚ್ಚು ಅನ್ಯ ಧರ್ಮೀಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Swamiji and Women Enter to Masjid in Koppal

ನೂರಕ್ಕೂ ಹೆಚ್ಚು ಮಹಿಳೆಯರ ಪ್ರವೇಶ

ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ಮಹಿಳೆಯರಿಗೂ ಪ್ರವೇಶ ಅವಕಾಶವನ್ನು ನೀಡಲಾಗಿತ್ತು. ಸಾಮಾನ್ಯವಾಗಿ ಮಸೀದಿಯ ನಮಾಜ್‌ ಸ್ಥಳಕ್ಕೆ ಮಹಿಳೆಯರಿಗೆ ಅವಕಾಶ ಇರಲಿಲ್ಲ ಎನ್ನುವ ಭಾವನೆ ಇತ್ತು. ಇದನ್ನು ತೊಡೆದು ಹಾಕುವುದಕ್ಕಾಗಿಯೇ ಜಮಾತೆ ಇಸ್ಲಾಂ ಹಿಂದ್‌ ಸಂಘಟನೆ, ಮಹಿಳೆಯರಿಗೂ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಮಹಿಳೆಯರು ಮಸೀದಿ ಒಳಗೆ ಪ್ರವೇಶ ಮಾಡಿ, ನಮಾಜ ಸ್ಥಳ ಸೇರಿದಂತೆ ವಿವಿಧೆಡೆ ವೀಕ್ಷಣೆ ಮಾಡಿದರು. ಮುಸ್ಲಿಂ ಮಹಿಳೆಯರೂ ಸಹ ಭೇಟಿ ನೀಡಿ ವೀಕ್ಷಣೆ ಮಾಡುತ್ತಿರುವುದು ಕಂಡು ಬಂದಿತು.

ವಿಶೇಷ ಆತಿಥ್ಯ

ಮಸೀದಿ ಸಂದರ್ಶನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂದ ಸಾರ್ವಜನಿಕರಿಗೆ, ಅತಿಥಿಗಳಿಗೆ ವಿಶೇಷ ಆತಿಥ್ಯ ನೀಡಿ ಸತ್ಕರಿಸಲಾಯಿತು. ಮುಸ್ಲಿಂ ಸಮುದಾಯದವರು ಫಲಾಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.

ಅಭಿಪ್ರಾಯ ಸಂಗ್ರಹಣೆ

ಮಸೀದಿ ಸಂದರ್ಶನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಸೀದಿಗೆ ಭೇಟಿ ನೀಡಿದ ಅತಿಥಿಗಳು, ಗಣ್ಯರು ಹಾಗೂ ಸಾರ್ವಜನಿಕರಿಂದ ಲಿಖಿತ ಅಭಿಪ್ರಾಯವನ್ನು ಹಾಗೂ ರುಜುವನ್ನು ಪಡೆಯಲಾಯಿತು. ಪ್ರತಿಯೊಬ್ಬರೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು, ಬರೆದು ರುಜು ಮಾಡಿದರಲ್ಲದೇ ಇಸ್ಲಾಂ ಧರ್ಮದ ಕುರಿತು ಒಂದಿಷ್ಟುಪುಸ್ತಕಗಳನ್ನು ಪಡೆದುಕೊಂಡರು.

ಮಸೀದಿಗಳ ಬಗ್ಗೆ ತಪ್ಪು ಕಲ್ಪನೆ ಇದೆ. ಅಲ್ಲಿ ಏನೋ ನಡೆಯುತ್ತದೆ, ಶಸ್ತ್ರಾಸ್ತ್ರ ಸಂಗ್ರಹಿಸಲಾಗುತ್ತದೆ ಎನ್ನುವ ಕೆಟ್ಟ ಅಭಿಪ್ರಾಯವನ್ನು ಬಿಂಬಿಸುವ ಹುನ್ನಾರ ನಡೆದಿದೆ. ಈ ಅಭಿಪ್ರಾಯವನ್ನು ತೊಡೆದು ಹಾಕಿ, ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ಮತ್ತು ಧಾರ್ಮಿಕ ಚಟುವಟಿಕೆ ತೆರೆದಿಡುವ ಉದ್ದೇಶದಿಂದಲೇ ಇಂತಹ ಮಸೀದಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಮಾತ್‌ ಇಸ್ಲಾಂ ಹಿಂದ್‌ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹ್ಮದ ಕುಂಯಿ ಅವರು ಹೇಳಿದ್ದಾರೆ. 

ಮಸೀದಿ ಸಂದರ್ಶನದ ಮೂಲಕ ಎಲ್ಲ ಧರ್ಮೀಯರಿಗೂ ಪ್ರವೇಶ ನೀಡುವ ಅವಕಾಶ ಕಲ್ಪಿಸಲಾಗಿದೆ. ಮುಕ್ತ ಭಾವನೆ, ಮುಕ್ತ ಚರ್ಚೆ ಹಾಗೂ ತೆರೆದ ಮನಸ್ಸಿನ ಭಾವೈಕ್ಯತೆಯನ್ನು ಮೂಡಿಸುವ ಉದ್ದೇಶವಿದೆ ಎಂದು ಕೊಪ್ಪಳ ಜಮಾತ್‌ ಇಸ್ಲಾಂ ಹಿಂದ್‌ ಸಂಘಟನೆಯ ಜಿಲ್ಲಾಧ್ಯಕ್ಷ ಸೈಯದ್‌ ನಾಶಿರ್‌ ಅಲಿ ಅವರು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios