ಬಾಗಲಕೋಟೆ(ಏ.18): 96ರ ವೃದ್ಧೆಗೆ ಲಾಕ್‌ಡೌನ್‌ ಕಾರಣದಿಂದ ಅಗತ್ಯ ದಿನಸಿ ವಸ್ತುಗಳು ಸಿಗದೆ ತತ್ತರಿಸಿ ಹೋಗಿದ್ದಳು. ದಿನಸಿ ವಸ್ತುಗಳು ಸಿಗುತ್ತಿಲ್ಲ. ಜೀವನ ನಡೆಸುವುದ ಕಷ್ಟವಾಗಿದೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ ಅಜ್ಜಿಯ ಮೊಮ್ಮಗ ಪುಟ್ಟರಾಜು ಎಂಬುವನಿಗೆ ತಿಳಿಸಿದ್ದಳು. ಮೊಮ್ಮಗ ಪುಟ್ಟರಾಜು ಅಜ್ಜಿ ಎದುರಿಸುತ್ತಿರುವ ಸಮಸ್ಯೆಯನ್ನು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ಬಳಿ ಹೇಳಿಕೊಂಡಿದ್ದ, ಅಜ್ಜಿ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕಿ ಮಾನವೀಯತೆಗೆ ಸಾಕ್ಷಿಯಾದ ಸಂಭ್ರಮ ನಮ್ಮದಾಗಿದೆ.

ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಲೀಲಾವತಿ ಚಂದ್ರಶೇಖರಯ್ಯ ವಸ್ತ್ರದ ಎಂಬ 96 ವೃದ್ಧೆಗೆ ಎಲ್ಲವು ಇದೆ. ಆದರೆ, ಲಾಕ್‌ಡೌನ್‌ ಮಾತ್ರ ಬದುಕನ್ನು ಅತಂತ್ರಗೊಳಿಸಿತ್ತು. ಮಕ್ಕಳು ಬೇರೆ ಬೇರೆ ಸ್ಥಳಗಳಲ್ಲಿ ಲಾಕ್‌ಡೌನ್‌ ಕಾರಣದಿಂದ ಸಿಕ್ಕಿಹಾಕಿಕೊಂಡಿದ್ದಾರೆ. ಹೀಗಾಗಿ ಅಗತ್ಯ ವಸ್ತುಗಳಿಲ್ಲದೆ ಅಸಹಾಯಕವಾಗಿದ್ದ ಅಜ್ಜಿಯ ಕಷ್ಟಕೇಳಿ ಮೊಮ್ಮಗ ಕನ್ನಡಪ್ರಭ, ಸುವರ್ಣ ನ್ಯೂಸ್‌ ಗಮನಕ್ಕೆ ತಂದ ಕೆಲವೇ ಗಂಟೆಗಳಲ್ಲಿ ಅಜ್ಜಿಗೆ ಬೇಕಾದ ಎಲ್ಲ ವಸ್ತುಗಳನ್ನು ತಲುಪಿಸಿದ ನೆಮ್ಮದಿ ನಮ್ಮದಾಗಿದೆ.

ಲಾಕ್‌ಡೌನ್‌: ಬಾಗಲಕೋಟೆಯಲ್ಲಿ ಆಸ್ಪತ್ರೆಗಳು ಬಂದ್‌, ರೋಗಿಗಳ ಪರದಾಟ

ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ಭಗವತಿ ಗ್ರಾಮ ಇದಾಗಿದ್ದರಿಂದ ಶಾಸಕ ವೀರಣ್ಣ ಚರಂತಿಮಠ ಅವರ ಗಮನಕ್ಕೆ ತಂದು ಅಜ್ಜಿಯ ಪರಸ್ಥಿತಿಯನ್ನು ವಿವರಿಸಿದಾಗ ತಕ್ಷಣವೇ ಸ್ಪಂದಿಸಿದ ಶಾಸಕರು ತಮ್ಮ ಮುಂಚೂಣಿ ಕಾರ್ಯಕರ್ತರಾದ ರಾಜು ನಾಯ್ಕರ ಹಾಗೂ ರಾಜಶೇಖರ ಮುದೇನೂರು ನೇತೃತ್ವದಲ್ಲಿ ಲಾಕ್‌ಡೌನ್‌ ಮಧ್ಯಯೇ ಭಗವತಿ ಗ್ರಾಮಕ್ಕೆ ತೆರಳಿ ಅಜ್ಜಿಗೆ ಬೇಕಾದ ಅಕ್ಕಿ, ಬೆಳೆ ಸೇರಿದಂತೆ ದಿನಸಿ ವಸ್ತುಗಳನ್ನು ಪೂರೈಸುವ ಮೂಲಕ ಮಾನವೀಯತೆ ಮೆರೆದರು. 96ರ ಇಳಿ ವಯಸ್ಸಿನಲ್ಲಿ ಅಜ್ಜಿಯ ಪರಸ್ಥಿತಿ ಕಂಡು ಮರಗಿದ ಶಾಸಕರು ತಮ್ಮ ಕಾರ್ಯಕರ್ತರ ಮೂಲಕ ದಿನಸಿ ವಸ್ತುಗಳನ್ನು ಪೂರೈಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕನ್ನಡಪ್ರಭ, ಸುವರ್ಣ ನ್ಯೂಜ್‌ನ ಮೂಲಕ ದಿನಸಿ ಪೂರೈಕೆಯಾದ ಹಿನ್ನೆಲೆಯಲ್ಲಿ 96 ವೃದ್ಧೆಯಲ್ಲಿ ಸಂತಸ ಮನೆ ಮಾಡಿತ್ತು.