ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ
ಗನ್ ಹೌಸ್ ವೃತ್ತದಲ್ಲಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸರ್ವ ಜನಾಂಗದ ಸಮಿತಿ ಸಂಚಾಲಕ ಎಚ್.ಎಂ.ಟಿ. ಲಿಂಗರಾಜು ತಿಳಿಸಿದರು.
ಮೈಸೂರು : ಗನ್ ಹೌಸ್ ವೃತ್ತದಲ್ಲಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸರ್ವ ಜನಾಂಗದ ಸಮಿತಿ ಸಂಚಾಲಕ ಎಚ್.ಎಂ.ಟಿ. ಲಿಂಗರಾಜು ತಿಳಿಸಿದರು.
ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ ಸಿಕ್ಕಿರುವುದು ಸರ್ವ ಜನಾಂಗದ ಸಮಿತಿ ನಡೆಸುತ್ತಿದ್ದ ಹೋರಾಟಕ್ಕೆ ಸಂದ ಜಯವಾಗಿದೆ. ಸುಪ್ರಿಂಕೋರ್ಟ್ ತಡೆಯಾಜ್ಞೆ ಆದೇಶದ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದು, ಕಾಮಗಾರಿ ನಡೆಸದಂತೆ ಮನವಿ ಸಲ್ಲಿಸಲಾಗುವುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೃತ್ತದಲ್ಲಿ ಪ್ರತಿಮೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಕೀಲ ಸುಬ್ರಹ್ಮಣ್ಯ ಅವರು ತಮ್ಮ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರತಿಮೆ ನಿರ್ಮಾಣ ಸಂಬಂಧ ಜಿಲ್ಲಾ ಕಮಿಟಿಯಲ್ಲಿರುವ ಜಿಲ್ಲಾಧಿಕಾರಿ ಸೇರಿದಂತೆ ಇತರೇ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿವರಣೆ ನೀಡುವಂತೆ ನಿರ್ದೇಶನ ನೀಡಿತ್ತು. ಆದರೆ, ಕಾಮಗಾರಿ ಸ್ಥಗಿತಕ್ಕೆ ತಡೆಯಾಜ್ಞೆ ನೀಡದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಅವರು ಸುಪ್ರಿಂಕೋರ್ಟ್ ಗೆ ಜ.8 ರಂದು ತಮ್ಮ ವಕೀಲರಾದ ದಾಮಾ ಶೇಷಾದ್ರಿ ನಾಯ್ದು ಅವರ ಮೂಲಕ ಸ್ಪೇಷಲ್ ಲೀವ್ ಪಿಟಿಷನ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಶುಕ್ರವಾರ ಪ್ರತಿಮೆ ಅನಾವರಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ಅವರು ವಿವರಿಸಿದರು.
ಪ್ರತಿಮೆ ಸ್ಥಾಪನೆ ಮಾಡಬಾರದು ಎಂದು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ನಮ್ಮ ಹೋರಾಟವನ್ನು ಜಿಲ್ಲಾಡಳಿತ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಕಾಮಗಾರಿ ನಡೆಸಲು ಯಾರು ಅನುಮತಿ ನೀಡಿದ್ದಾರೆ ಎಂದು ಪ್ರಶ್ನೆ ಮಾಡಿದರೆ ಜಿಲ್ಲಾಡಳಿತ, ಪಾಲಿಕೆ ಸೇರಿದಂತೆ ಸಂಬಂಧ ಯಾವುದೇ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ. ಪೊಲೀಸರು ಸಹ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಕೀಲ ಸಿ.ಎಂ. ಸುಬ್ರಹ್ಮಣ್ಯ, ದೇವರಾಜ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಮಹದೇವು, ಜಿಲ್ಲಾ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಯಮುನಾ, ಮೈ.ಕಾ. ಪ್ರೇಮ್ ಕುಮಾರ್, ಚೋರನಹಳ್ಳಿ ಶಿವಣ್ಣ, ಅಮರನಾಥ ರಾಜೇ ಅರಸ್ ಇದ್ದರು.
ರಾಜೇಂದ್ರ ಶ್ರೀಗಳ ಪ್ರತಿಮೆ ಕಾನೂನು ಪ್ರಕ್ರಿಯೆ ಮೂಲಕವೇ ಪ್ರತಿಷ್ಠಾಪನೆ- ಡಿಸಿ
ನಗರದ ಗನ್ ಹೌಸ್ ನಲ್ಲಿ ರಾಜೇಂದ್ರ ಶ್ರೀಗಳ ಪ್ರತಿಮೆಯನ್ನು ಕಾನೂನು ಪ್ರಕ್ರಿಯೆ ಮೂಲಕವೇ ಪ್ರತಿಷ್ಠಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಇರುವ ರಸ್ತೆ ಸುರಕ್ಷತೆ, ಅಪೆಕ್ಸ್ ಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ನಗರ ಪೊಲೀಸ್ ಆಯುಕ್ತರು, ಎಂಡಿಎ ಆಯುಕ್ತರನ್ನೊಳಗೊಂಡ ಕಮಿಟಿ ಪ್ರತಿಮೆ ಸ್ಥಾಪನೆ ಬಗ್ಗೆ ತೆಗೆದುಕೊಳ್ಳುವ ನಿರ್ಧಾರದಂತೆ ಪ್ರತಿಮೆ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ತೊಂದರೆಗಳಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅವಕಾಶ ಇದೆ. ಜೊತೆಗೆ ಪ್ರತಿಭಟನೆ ಮಾಡಲೂ ಅವಕಾಶ ಇದೆ ಎಂದು ಹೇಳಿದರು.
ಗನ್ ಹೌಸ್ ನಲ್ಲಿ 5 ರಸ್ತೆಗಳಿರುವುದರಿಂದ ಸರ್ಕಲ್ ಅವಶ್ಯಕತೆ ಇದೆ. ಇದು ಅನಧಿಕೃತವಾಗಿ ಆಗಿಲ್ಲ. ಪ್ರತಿಮೆ ಸ್ಥಾಪನೆ ಬಗ್ಗೆ ನಗರ ಪಾಲಿಕೆ ಕೌನ್ಸಿಲ್ ನಿಂದ ಅನುಮೋದನೆ ಪಡೆದು, ಕ್ಯಾಬಿನೆಟ್ ನಲ್ಲಿ ಪಾಸಾಗಿ ಕೋರ್ಟ್ ಮೂಲಕವೇ ಪ್ರತಿಮೆ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಮೆಯೊಂದಿಗೆ ಸರ್ಕಲ್ ಅವಶ್ಯಕತೆ ಇದ್ದು, ಸಂಚಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮನವರಿಕೆಯಾದ ನಂತರವೇ ಕಾನೂನಾತ್ಮಕವಾಗಿ ಪ್ರತಿಮೆ ಸ್ಥಾಪನೆಯಾಗಿದ್ದು, ಎಲ್ಲಾ ವಿಚಾರಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಅವರು ತಿಳಿಸಿದರು.