Asianet Suvarna News Asianet Suvarna News

ಬೆಂಗಳೂರಿನಲ್ಲಿ ಧ್ವಂಸವಾಗಲಿವೆ ಹಲವು ಕಟ್ಟಡ : ಗ್ರೀನ್ ಸಿಗ್ನಲ್

ಬೆಂಗಳೂರಿನ ಅಕ್ರಮ ಕಟ್ಟಡಗಳಿಗೆ ಕಾದಿದೆ ಗಂಡಾಂತರ. ಶೀಘ್ರವೇ ಇವುಗಳನ್ನು ಧ್ವಂಸ ಮಾಡಲು ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ. 

supreme Court Green Signal To Demolish illegal Buildings
Author
Bengaluru, First Published Mar 3, 2020, 8:30 AM IST

ನವದೆಹಲಿ [ಮಾ.03]:  ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಸಮೀಕ್ಷೆ ನಡೆಸುವಂತೆ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಜತೆಗೆ, ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಿದ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಈ ರೀತಿಯ ಕಟ್ಟಡಗಳನ್ನು ನೆಲಸಮಗೊಳಿಸುವುದು ಸರಿಯಾದ ಕ್ರಮವಲ್ಲವೇ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನಲ್ಲಿನ ಅಕ್ರಮ ಕಟ್ಟಡಗಳ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಜ್ಯ ಹೈಕೋರ್ಟ್‌ ವಿಚಾರಣೆ ನಡೆಸುತ್ತಿದ್ದು, ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಬಿಎಂಪಿ ಸುಪ್ರೀಂ ಕೋರ್ಟ್‌ ಕದ ಬಡಿದಿತ್ತು. ಬಿಬಿಎಂಪಿ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿ, ಅಕ್ರಮ ಸಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಈ ಸಂದರ್ಭದಲ್ಲಿ ಹೈಕೋರ್ಟ್‌ ಕಟ್ಟಡ ನೆಲಸಮ ಮಾಡಲು ಆದೇಶಿಸಿರುವುದು ಸರಿಯಲ್ಲ. ಒಂದು ವೇಳೆ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಆದೇಶ ನೀಡಿದ್ದೇ ಆದರೆ ಆಗ ಸಮಸ್ಯೆಗಳಾಗುತ್ತವೆ ಎಂದು ವಾದಿಸಿದರು.

ವಾಲಿದ್ದ ಕಟ್ಟಡ ಬೀಳಿಸಿ ಆಯ್ತು, ತ್ಯಾಜ್ಯ ಹಾಕೋದೆಲ್ಲಿ..?...

ಆದರೆ ಈ ವಾದಕ್ಕೆ ನ್ಯಾಯಾಲಯ ಮಣೆ ಹಾಕಲಿಲ್ಲ. ಹಾಗೆಯೇ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಬಿಬಿಎಂಪಿಯನ್ನು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ನೀವು ಬೆಂಗಳೂರನ್ನು ಹಾಳು ಮಾಡಿದ್ದೀರಿ. ನಾವು ಬೆಂಗಳೂರು ಹಾಳಾಗಲು ಬಿಡುವುದಿಲ್ಲ. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಹೈಕೋರ್ಟ್‌ ಆದೇಶ ಸೂಕ್ತವಾಗಿದೆ ಎಂದು ಹೇಳಿತು.

ಬೆಂಗಳೂರಿನಲ್ಲಿ 2015ರ ಹೊತ್ತಿಗೆ 2.93 ಲಕ್ಷ ಅಕ್ರಮ ಕಟ್ಟಡ, ನಿವೇಶನಗಳು ಇವೆ ಎಂದು ವರದಿಯೊಂದು ಹೇಳಿತ್ತು. ಇದೀಗ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ಪ್ರಯತ್ನವನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದಂತಾಗಿದೆ.

Follow Us:
Download App:
  • android
  • ios