Asianet Suvarna News Asianet Suvarna News

Bagalkot: ನೀರಾವರಿ ಯೋಜನೆ ಸಂಕಲ್ಪ ಯಾತ್ರೆಗೆ ನಿರೀಕ್ಷೆ ಮೀರಿ ಬೆಂಬಲ

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಬೇಕು ಎಂದು ಒತ್ತಾಯಿಸಿ ಆರಂಭಗೊಂಡಿರುವ ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆಯ ಸಂಕಲ್ಪ ಯಾತ್ರೆಗೆ ಎರಡನೇ ದಿನವಾದ ಗುರುವಾರವೂ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗಿದೆ. 

Support beyond expectation for Sankalpa Yatre in bagalkot gvd
Author
First Published Apr 15, 2022, 5:01 PM IST

ಬಾಗಲಕೋಟೆ (ಏ.15): ಉತ್ತರ ಕರ್ನಾಟಕದ (North Karnataka) ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಬೇಕು ಎಂದು ಒತ್ತಾಯಿಸಿ ಆರಂಭಗೊಂಡಿರುವ ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆಯ ಸಂಕಲ್ಪ ಯಾತ್ರೆಗೆ ಎರಡನೇ ದಿನವಾದ ಗುರುವಾರವೂ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗಿದೆ. ರ್ಯಾಲಿ ಉದ್ದಕ್ಕೂ ನಡೆದ ಟ್ರ್ಯಾಕ್ಟರ್‌ ಯಾತ್ರೆಯಲ್ಲಿ (Tractor Rally) ಸಾವಿರಾರು ಜನರು ಪಾಲ್ಗೊಳ್ಳುವ ಮೂಲಕ ತಮ್ಮ ಹಕ್ಕನ್ನು ಪಡೆಯಲು ಮುಂದಾಗಿದ್ದಾರೆ. ಸಂಕಲ್ಪ ಯಾತ್ರೆಯ ನೇತೃತ್ವ ವಹಿಸಿರುವ ಮಾಜಿ ಸಚಿವ ಎಸ್‌.ಆರ್‌.ಪಾಟೀಲ (SR Patil) ಅವರ ಆಶಯದಂತೆ ಪಕ್ಷಾತೀತವಾಗಿ ನಡೆದ ಕೃಷ್ಣಾ, ಮಹದಾಯಿ, ನವಲಿ ಸಂಕಲ್ಪ ಯಾತ್ರೆಯ 2ನೇ ದಿನವಾದ ಗುರುವಾರ ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಹಾಗೂ ಮಹಾಕೂಟದ ಧಾರ್ಮಿಕ ಕ್ಷೇತ್ರದಿಂದ ಆರಂಭಗೊಂಡಿತು.

ಕರ್ನಾಟಕದ ಏಕೀಕರಣದ ನಂತರವು ಉತ್ತರ ಕರ್ನಾಟಕಕ್ಕೆ ಸಿಗಬೇಕಾದ ನೀರಾವರಿ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಸರಿದೂಗಿಸಬೇಕು. ಜೊತೆಗೆ ಕರ್ನಾಟಕದ ಒಟ್ಟು ಜಲಸಂಪನ್ಮೂಲದಲ್ಲಿ ಶೇ.68ರಷ್ಟುಉತ್ತರ ಕರ್ನಾಟಕದಲ್ಲಿಯೇ ಇದ್ದರೂ ಈ ಭಾಗ ಅಭಿವೃದ್ಧಿಯಿಂದ ವಂಚಿತವಾಗಿರುವುದು, ಪ್ರಾದೇಶಿಕ ಅಸಮಾನತೆಯಿಂದ ಬಾರದ ಕೈಗಾರಿಕೆಗಳು, ನಡೆಯದ ಉದ್ಯಮಗಳು ಸೇರಿದಂತೆ ಹಲವು ರೀತಿಯಿಂದ ಅನ್ಯಾಯಕ್ಕೊಳಗಾದ ಈ ಭಾಗದ ಅಭಿವೃದ್ಧಿಗೆ ಹೋರಾಟ ಅನಿವಾರ್ಯ ಎಂದು ತಿಳಿದು ಆರಂಭಿಸಲಾಗಿರುವ ಸಂಕಲ್ಪ ಯಾತ್ರೆಯ ಮಾರ್ಗದುದ್ದಕ್ಕೂ ಜನತೆ ಅದ್ಧೂರಿಯಾಗಿ ಬೆಂಬಲಿಸಿತು.

ನಿರೀಕ್ಷೆ ಮೀರಿ ಬೆಂಬಲ: ಗುರುವಾರ ಬೆಳಗ್ಗೆ ಶಿವಯೋಗ ಮಂದಿರದಿಂದ ಆರಂಭಗೊಂಡ ಸಂಕಲ್ಪ ಯಾತ್ರೆ ಮಹಾಕೂಟ, ಕೆಂದೂರ ಕೆರೆ, ಬಾದಾಮಿ, ಹಲಕುರ್ಕಿ, ಕೊಂಕಣಕೊಪ್ಪ, ಕಟಗೇರಿ, ಸೂಳಿಕೇರಿ, ಬಾಗಲಕೋಟೆಯ 8 ಪ್ರಮುಖ ಸ್ಥಳಗಳ ಮೂಲಕ ನಡೆದ ಟ್ರ್ಯಾಕ್ಟರ್‌ ಯಾತ್ರೆಯ ಸಂದರ್ಭದಲ್ಲಿ ಮಾರ್ಗದುದ್ದಕ್ಕೂ ಅಭಿಮಾನಿಗಳು ಹೂಗಳನ್ನು ಹಾಗೂ ಬೃಹತ್‌ ಗಾತ್ರದ ಹಣ್ಣಿನ ಸರವನ್ನು ನೇತೃತ್ವ ವಹಿಸಿರುವ ಎಸ್‌.ಆರ್‌.ಪಾಟೀಲ ಹಾಗೂ ಇತರರಿಗೆ ಹಾಕಿ ಶುಭಕೋರಿದರು. ನಗರದಲ್ಲಿ ಸಂಚರಿಸಿದ ಯಾತ್ರೆ ನಂತರ ಶಿರೂರಗೆ ಅಗಸಿ ಸಂಗಮಕ್ರಾಸ್‌ ಬೆನಕಟ್ಟಿ, ಇಂಗಳಗಿ, ಬಸನಾಳ, ಬೂದಿಹಾಳ, ಚಿಕ್ಕಮಾಗಿ, ಗಂಜಿಹಾಳ, ಕೂಡಲಸಂಗಮ ಕ್ರಾಸ್‌ ಕಜಗಲ್ಲ ಮೂಲಕ ಕೂಡಲಸಂಗಮದಲ್ಲಿ ವಾಸ್ತವ್ಯ ಹೂಡಿತು.

Gadag: ಉತ್ತರ ಕರ್ನಾಟಕ ನೀರಾವರಿ ಯೋಜನೆ ಜಾರಿಗೆ ಸಂಕಲ್ಪ ಯಾತ್ರೆ!

ದೇಗುಲಗಳಿಗೆ ಭೇಟಿ ನೀಡಿದ ಎಸ್‌ಆರ್‌ಪಿ: ಗುರುವಾರ ಬೆಳಗ್ಗೆ ಸಂಕಲ್ಪ ಯಾತ್ರೆಗೂ ಮುನ್ನ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿಯ ಬನಶಂಕರಿ ದೇವಿಯ ದರ್ಶನ ಪಡೆದ ಎಸ್‌.ಆರ್‌.ಪಾಟೀಲ ನಂತರ ಶಿವಯೋಗ ಮಂದಿರ ಮತ್ತು ಮಹಾಕೂಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದ ನಂತರವೇ ತಮ್ಮ 2ನೇ ದಿನದ ಸಂಕಲ್ಪ ಯಾತ್ರೆಗೆ ಮುಂದಾಗಿದ್ದು ವಿಶೇಷವಾಗಿತ್ತು.

ಎಲ್ಲ ಸರ್ಕಾರಗಳಿಂದ ನಿರ್ಲಕ್ಷ್ಯ: ಉತ್ತರ ಕರ್ನಾಟಕಕ್ಕೆ ಎಲ್ಲ ರಂಗಗಳಲ್ಲಿಯೂ ಹಿಂದಿನಿಂದಲೂ ಅಭಿವೃದ್ಧಿ ಮಾಡುವಲ್ಲಿ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ. ಮೊದಲಿನಿಂದಲೂ ಪ್ರಸ್ತಾಪಿಸಿದ ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬಾರದೇ ನನೆಗುದಿಗೆ ಬಿದ್ದಿವೆ. ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಕೃಷ್ಣಾ, ಮಹಾದಾಯಿ, ನವಲಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನೀರನ್ನು ಬಳಸಿಕೊಳ್ಳಬೇಕೆಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಹೇಳಿದರು. ಗುರುವಾರ ತಾಲೂಕಿನ ಶಿವಯೋಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕೃಷ್ಣಾ, ಮಹದಾಯಿ, ನವಲಿ ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಬೃಹತ್‌ ಟ್ರ್ಯಾಕ್ಟರ್‌ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದರು. 

ದಿ.ಬಿ.ಎಂ.ಹೊರಕೇರಿ ಅವರ ಕನಸಾದ ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಹಳ ದಿನಗಳಿಂದ ಪ್ರಯತ್ನ ಇನ್ನೂ ಜೀವಂತವಾಗಿಯೇ ಇದೆ. ಅದು ಅನುಷ್ಠಾನಗೊಂಡಲ್ಲಿ ಅವರ ಮನಸಿಗೆ ಶಾಂತಿ ಸಿಗುತ್ತದೆ ಎಂದರು. ಶಿವಯೋಗಮಂದಿರದ ಶ್ರೀ ಮದ್ವೀರಶೈವ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಉಕ ಭಾಗದಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರೂ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಗೊಳಿಸುವುದಕ್ಕೆ ಮನಸು ಮಾಡಲೇ ಇಲ್ಲ. ಅದಕ್ಕಾಗಿ ಎಸ್‌.ಆರ್‌.ಪಾಟೀಲ ಅವರು 2021ರಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಪರಿಷತ್ತಿನಲ್ಲಿ ಈ ಮೂರು ಯೋಜನೆಗಳ ಬಗ್ಗೆ ಸುದೀರ್ಘವಾದ ವಿವರಣೆ ನೀಡಿ ಸರ್ಕಾರದ ಗಮನ ಸೆಳೆದದ್ದನ್ನು ನಾನು ಇಲ್ಲಿ ಸ್ಮರಿಸುತ್ತೇನೆ ಎಂದರು.

Bagalkot: ಅಕ್ರಮವಾಗಿ ಪಡಿತರ ಚೀಟಿ ಪಡೆದ ಸರ್ಕಾರಿ ನೌಕರರು: 54 ಲಕ್ಷ ದಂಡ ವಸೂಲಿ

ಈ ಭಾಗದ ಬಹುದಿನಗಳ ಬೇಡಿಕೆಯಾದ ನೀರಾವರಿ ಯೋಜನೆಗಳ ಕೂಗು ಸರ್ಕಾರಕ್ಕೆ ಮತ್ತು ಜನರಿಗೆ ತಲುಪಿಸಲು ಏ.13 ರಿಂದ 17ರವರೆಗೆ ನರಗುಂದದಿಂದ 6 ದಿನಗಳ ಪಾದಯಾತ್ರೆಯು ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಹಾಗೂ ಅನೇಕ ರೈತ ಸಂಘಟನೆಗಳ ಯಾತ್ರೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಜಯಕುಮಾರ ಸರನಾಯಕ, ಮುಖಂಡರಾದ ಎಂ.ಬಿ.ಹಂಗರಗಿ, ಅಶೋಕ ಕೋಟನಕರ, ಶೈಲಾ ಚಟ್ಟರಕಿ, ಆನಂದ ಪೂಜಾರ, ರಾಜಮಹ್ಮದ ಬಾಗವಾನ ಸೇರಿದಂತೆ ಈ ಭಾಗದ ರೈತರು, ಮುಖಂಡರು ಹಾಜರಿದ್ದರು. ಸುಮಾರು 200 ಟ್ರ್ಯಾಕ್ಟರ್‌ಗಳ ಮೂಲಕ ಮೆರವಣಿಗೆ ಮಾಡಿರುವುದು ಎಲ್ಲರ ಗಮನ ಸೆಳೆಯಿತು. ಸಹಸ್ರಾರು ರೈತರು ಭಾಗವಹಿಸಿದ್ದರು.

Follow Us:
Download App:
  • android
  • ios